ಕರ್ನಾಟಕ

ಕಸ ವಿಲೇವಾರಿ ಕೇಂದ್ರಕ್ಕೆ ಸ್ಥಳೀಯರಿಂದ ಬೀಗ

Pinterest LinkedIn Tumblr

vileಆನೇಕಲ್: ‘ತಾಲ್ಲೂಕಿನ ಬಿಂಗಿಪುರದ ಬಳಿ ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿರುವ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ವಾತಾವರಣ ಕಲುಷಿತವಾಗಿದ್ದು, ಕಸದ ಗುಡ್ಡೆಗಳ ಬಳಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ’ ಎಂದು ಆರೋಪಿಸಿ ಸ್ಥಳೀಯರು ಕಸ ವಿಲೇವಾರಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ರಸ್ತೆ ತಡೆ ನಡೆಸಿದ ಸ್ಥಳೀಯರು ಕಸದ ಮೇಲೆ ಮಣ್ಣು ಹಾಕುವ ಕೆಲಸಕ್ಕೂ ಅಡ್ಡಿಪಡಿಸಿದರು. ಈ ವೇಳೆ ಡಂಪಿಂಗ್ ಯಾರ್ಡ್‌ನಿಂದ 30 ಕ್ಕೂ ಹೆಚ್ಚು ಕಸದ ಲಾರಿಗಳು ಹೊರಬರಲಿಲ್ಲ. ಕಸ ತುಂಬಿದ ಲಾರಿಗಳು ಒಳಹೋಗದಂತೆ ಸ್ಥಳೀಯರು ಅಡ್ಡಗಟ್ಟಿದರು. ಇದರಿಂದ ಕಸ ವಿಲೇವಾರಿ ಕೇಂದ್ರದ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

‘ಬಿಂಗಿಪುರ ಹಾಗೂ ಬೆಟ್ಟದಾಸನಪುರ ಮಧ್ಯೆ ಇರುವ 20 ಎಕರೆ ಪ್ರದೇಶದಲ್ಲಿ ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿದೆ. ಆದರೆ,  ಸಮರ್ಪಕ ನಿರ್ವಹಣೆ ಮಾಡದಿರುವುದರಿಂದ ವಾತಾವರಣ ಗಬ್ಬು ನಾರುತ್ತಿದೆ. ಅಂತರ್ಜಲ ಕಲುಷಿತವಾಗಿದೆ. ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಒದಗಿಸುವುದರ ಜೊತೆಗೆ ಸೊಳ್ಳೆ ಕಾಟ ನಿವಾರಣೆಗೆ ಸೊಳ್ಳೆ ಪರದೆ ನೀಡುವುದಾಗಿ ತಿಳಿಸಿದ್ದರು. ಹಾಗೂ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವ ಭರವಸೆಗಳು ಈಡೇರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಲಾರಿಗಳನ್ನು ಡಂಪಿಂಗ್‌ ಯಾರ್ಡ್‌ ಒಳಗೆ ಹೋಗಲು ಬಿಡದ ಕಾರಣ ಬೆಂಗಳೂರಿನ ಬಿಟಿಎಂ ಲೇಔಟ್‌, ಬನಶಂಕರಿ, ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಕಸ ವಿಲೇವಾರಿ ಮಾಡಲು ಸಮಸ್ಯೆಯಾಯಿತು. ಅಧಿಕಾರಿಗಳು ಪ್ರತಿಭಟನಾಕಾರರು ಸ್ಥಳದಲ್ಲಿ ಇಲ್ಲದ ವೇಳೆ ಗೇಟಿನ ಬೀಗ ಒಡೆದು ಲಾರಿಗಳನ್ನು ತೆಗೆದುಕೊಂಡು ಹೋದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕಸದ ಮೇಲೆ ಮಣ್ಣು ಹಾಕುತ್ತಿದ್ದ ಲಾರಿಗಳನ್ನು ತಡೆದು ಹೊರಗೆ ಕಳುಹಿಸಿ ಮತ್ತೆ ಗೇಟಿಗೆ ಬೀಗ ಹಾಕಿ ಪ್ರತಿಭಟಿಸಿದರು.

ಮೇಯರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೇಯರ್‌ ಬಿ.ಎನ್‌.ಮಂಜುನಾಥ ರೆಡ್ಡಿ ಅವರು, ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

Write A Comment