ನ್ಯೂಯಾರ್ಕ್: ಜನಪ್ರಿಯ ‘ಮಿಕಿ ಮೌಸ್’ ಕಾರ್ಟೂನ್ಗಳಲ್ಲಿ ಇಲಿಯ ಬಗೆ ಬಗೆಯ ಚೇಷ್ಟೆಗಳನ್ನು ನೋಡಿದ್ದೀರಿ. ಇದು ಕೂಡಾ ಅಂತಹುದೇ ಚೇಷ್ಟೆ ಎಂದು ಭಾವಿಸಬೇಡಿ. ಇದು ಇಲಿಗಳ ನೈಜ ಲವ್ ಸ್ಟೋರಿ..!
ಹೌದು. ಇಲಿಗಳೂ ಪ್ರಣಯದಾಟಕ್ಕೆ ಮುನ್ನ ಪ್ರೇಮಗೀತೆ ಹಾಡುತ್ತವೆ ಎಂಬುದು ಈಗ ಬೆಳಕಿಗೆ ಬಂದಿದೆ. ಗಂಡು ಇಲಿಗಳು ಒಂದು ರೀತಿಯ ಪ್ರೇಮ ಗೀತೆಗಳನ್ನು ಹಾಡುತ್ತವೆ ಎಂಬುದು ಗೊತ್ತಿತ್ತು. ಆದರೆ ಪ್ರಣಯಕ್ಕೆ ಸಮ್ಮತಿ ನೀಡುವ ಹೊತ್ತಿನಲ್ಲಿ ಹೆಣ್ಣು ಇಲಿಗಳೂ ಪ್ರಣಯಗೀತೆ ಹಾಡುತ್ತವೆ ಎಂಬ ಕುತೂಹಲಕರ ವಿಚಾರ ಇದೀಗ ಬಹಿರಂಗಗೊಂಡಿದೆ. ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ಒಟ್ಟು 4 ಇಲಿಗಳ ಸಂಭಾಷಣೆಯನ್ನು ಅಧ್ಯಯನ ಮಾಡಿ ಈ ವಿಚಾರವನ್ನು ಸಂಶೋಧಕರು ಈ ವಿಚಾರವನ್ನು ಖಚಿತಪಡಿಸಿಕೊಂಡಿದ್ದಾರೆ. ಗಂಡು ಇಲಿ ಹೆಣ್ಣು ಇಲಿಯನ್ನು ಅಟ್ಟಿಸಿಕೊಂಡು ಹೋಗುವಾಗ ಅವುಗಳ ಮಧ್ಯೆ ಇಂತಹ ‘ಪ್ರಣಯಗೀತೆ’ ವಿನಿಮಯವಾಗುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಗಂಡು ಇಲಿಗಳ ‘ಪ್ರಣಯದ ಹಾಡಿಗೆ’ ಸ್ಪಂದಿಸಿ ಹೆಣ್ಣು ಇಲಿಗಳು ‘ಪ್ರಣಯಗೀತೆ’ ಹಾಡುತ್ತಾ ತಮ್ಮ ವೇಗವನ್ನು ಕಡಿಮೆಗೊಳಿಸಿಕೊಂಡು ತಮ್ಮ ಬಳಿ ಬರಲು ಗಂಡು ಇಲಿಗಳಿಗೆ ಅನುವು ಮಾಡಿಕೊಡುತ್ತವೆ. ಸಮ್ಮತಿ ಇಲ್ಲದ ಹೆಣ್ಣು ಇಲಿಗಳು ಇನ್ನಷ್ಟು ವೇಗವಾಗಿ ಓಡುತ್ತವೆ..!
ಇಲಿಗಳು ಹಾಡುತ್ತಿವೆಯೋ ಅಥವಾ ಕಿರಿಚುತ್ತಿವೆಯೋ ಎಂದು ಹೇಳುವುದು ನಿಮಗೆ ಕಷ್ಟ. ಏಕೆಂದರೆ ಅವುಗಳಲ್ಲಿ ಈ ಸಂದರ್ಭದಲ್ಲಿ ದೈಹಿಕ ಸಂಕೇತಗಳೇನೂ ಕಾಣುವುದಿಲ್ಲ.
ಮಾನವ ಕಿವಿಗಳಿಗೆ ಕೇಳದಷ್ಟು ಸಣ್ಣದಾಗಿ ಅವುಗಳ ಸ್ವರ ಇರುತ್ತದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಅಮೆರಿಕದ ಡೆಲವೇರ್ ವಿಶ್ವವಿದ್ಯಾಲಯದ ಮನ:ಶಾಸ್ತ್ರ ಮತ್ತು ಮೆದುಳು ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಜೊಶುವಾ ನೆಯುನುಯೆಬೆಲ್ ಹೇಳುತ್ತಾರೆ. ಇಲಿಗಳ ಶಬ್ಧ ಕೇಳಲು ಅವು ತಮ್ಮ ಸಂಶೋಧನೆಗಾಗಿಯೇ ಅತ್ಯಾಧುನಿಕ ಮೈಕ್ರೋಫೋನ್ ಮತ್ತು ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದ್ದರು.
ಹೆಣ್ಣು ಇಲಿಗಳು ಗಂಡು ಇಲಿಗಳ ಹಾಡು ಕೇಳಿಸಿಕೊಳ್ಳುವುದಷ್ಟೇ ಅಲ್ಲ, ಸ್ಪಂದನಾತ್ಮಕ ಹಾಡು ಹಾಡುತ್ತವೆ ಎಂಬದು ಬೆಳಕಿಗೆ ಬಂದದ್ದು ಈ ಸಾಧನದ ಮೂಲಕವೇ. ಅಧ್ಯಯನದ ವಿವರ ‘ಇ-ಲೈಫ್’ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ.
