ಮುಂಬೈ, ಸೆ.8: ಮಹಾರಾಷ್ಟ್ರದಲ್ಲಿ ವಿವಾದಾಸ್ಪದ ರೀತಿಯಲ್ಲಿ ಗೋಮಾಂಸ ನಿಷೇಧ ಜಾರಿಗೆ ಬಂದ ತಿಂಗಳುಗಳ ಬಳಿಕ, ಇನ್ನೊಂದು ರೀತಿಯ ಮಾಂಸ ನಿಷೇಧ ಮುಂಬೈ ನಿವಾಸಿಗಳನ್ನು ಕಂಗೆಡಿಸಿದೆ. ಜೈನ ಧರ್ಮೀಯರ ಉಪವಾಸದ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ನಾಲ್ಕು ದಿನ ಮಾಂಸಾಹಾರವನ್ನೇ ನಿಷೇಧಿಸಲಾಗಿದೆ.
ಮಾಂಸ ನಿಷೇಧಕ್ಕೆ ವಿವಿಧ ವಲಯಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ನಿಷೇಧವನ್ನು ಖಂಡಿಸಿರುವ ಬಿಜೆಪಿಯ ಮಿತ್ರ ಪಕ್ಷ ಶಿವಸೇನೆಯು, ಇದು ‘‘ತುಷ್ಟೀಕರಣ’’ ಮತ್ತು ‘‘ಧಾರ್ಮಿಕ ಭಯೋತ್ಪಾದನೆ’’ಯಾಗಿದೆ ಎಂದು ಬಣ್ಣಿಸಿದೆ.
ಜೈನರ ಉಪವಾಸ ಹಬ್ಬದ ಹಿನ್ನೆಲೆಯಲ್ಲಿ 1994ರಲ್ಲಿ ಹೊರಡಿಸಲಾದ ಆದೇಶವೊಂದರ ಪ್ರಕಾರ ಮುಂಬೈಯಲ್ಲಿ ಎರಡು ದಿನಗಳ ಕಾಲ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟ ನಿಷೇಧವಾಗಿದೆ. ನಾಲ್ಕು ವರ್ಷಗಳ ಹಿಂದೆ ನಿಷೇಧವನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಲಾಗಿತ್ತು.
ಮಾಂಸ ನಿಷೇಧ ಶುಕ್ರವಾರ ಆರಂಭಗೊಳ್ಳಲಿದೆ.
ಮಾಂಸ ನಿಷೇಧದ ಅವಧಿಯನ್ನು ಎಂಟು ದಿನಗಳ ಕಾಲ ವಿಸ್ತರಿಸಬೇಕು ಎಂಬ ಪ್ರಸ್ತಾಪವನ್ನು ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ಮಂಡಿಸಿತ್ತು. ಆದರೆ, ನಗರದ ಮುನಿಸಿಪಲ್ ಕಮಿಶನರ್ ಅದನ್ನು ತಿರಸ್ಕರಿಸಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.
ಶಿವಸೇನೆ ಮತ್ತು ಬಿಜೆಪಿ ಆಡಳಿತದ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ (ಬಿಎಂಸಿ) ಕಮಿಶನರ್ ಅಜಯ್ ಮೆಹ್ತಾ ನಿನ್ನೆ ಹೊರಡಿಸಿದ ಆದೇಶದ ಪ್ರಕಾರ, ಮುಂಬೈಯಲ್ಲಿ ಸೆಪ್ಟಂಬರ್ 10, 13, 17 ಮತ್ತು 18ರಂದು ಒಟ್ಟು ನಾಲ್ಕು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ನೆರೆಯ ಥಾಣೆ ಜಿಲ್ಲೆಯ ಮಿರಾ ಬಾಯಂದರ್ ನಗರಪಾಲಿಕೆಯಂತೂ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೆಪ್ಟಂಬರ್ 11ರಿಂದ 18ರವರೆಗೆ ಒಟ್ಟು 8 ದಿನಗಳ ಕಾಲ ಮಾಂಸ ನಿಷೇಧ ಘೋಷಿಸಿದೆ. ಈ ಅವಧಿಯಲ್ಲಿ ಜೈನ ಸಮುದಾಯ ‘ಪರ್ಯುಶಾನ್’ ಎಂಬ ಉಪವಾಸ ಹಬ್ಬವನ್ನು ಆಚರಿಸುತ್ತಿದೆ. ಈ ನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.
ಆದಾಗ್ಯೂ, ಇದೇನೂ ಹೊಸ ನಿರ್ಧಾರವಲ್ಲ, ಕಳೆದ ಹಲವಾರು ವರ್ಷಗಳಿಂದಲೂ ಇದು ಚಾಲ್ತಿಯಲ್ಲಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಮೀನು ಮತ್ತು ಇತರ ಸಮುದ್ರ ಆಹಾರಕ್ಕೆ ನಿಷೇಧ ಅನ್ವಯವಾಗುವುದಿಲ್ಲ ಎಂದು ಅವರು ಹೇಳಿದರು.
ಜೈನ ಸಮುದಾಯದವರಿಂದ ಮಾತ್ರವಲ್ಲ, ಕೆಲವು ಕಾರ್ಪೊರೇಟರ್‌ಗಳಿಂದಲೂ ಬಂದ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ‘‘ಈ ನಾಲ್ಕು ದಿನಗಳ ಕಾಲ ಬಿಎಂಸಿಯ ವಧಾ ಗೃಹಗಳು ಮುಚ್ಚಿರುತ್ತವೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗುತ್ತದೆ. ನಿಷೇಧವನ್ನು ಜಾರಿಗೆ ತರುವಂತೆ ಹಾಗೂ ಯಾವುದೇ ಪ್ರಾಣಿಯ ವಧೆಯಾಗದಂತೆ ಮತ್ತು ನಗರದ ಯಾವುದೇ ಭಾಗದಲ್ಲಿ ಮಾಂಸ ಮಾರಾಟವಾಗದಂತೆ ನೋಡಿಕೊಳ್ಳುವಂತೆ ಬಿಎಂಸಿಯ ಮಾರುಕಟ್ಟೆ ವಿಭಾಗಕ್ಕೆ ಸೂಚಿಸಲಾಗಿದೆ’’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ನಿಷೇಧವಲ್ಲ, ಜಾತ್ಯತೀತತೆಯ ಆಶಯಕ್ಕನುಗುಣವಾಗಿ ಸಮುದಾಯದ ಜೊತೆಗೆ ಸಹಿಷ್ಣುತೆ ವ್ಯಕ್ತಪಡಿಸುವುದು ಎಂದು ಹೇಳಿದೆ. ಆದರೆ, ಇದಕ್ಕೆ ವಿರುದ್ಧವಾದ ನಿಲುವನ್ನು ವ್ಯಕ್ತಪಡಿಸಿರುವ ಶಿವಸೇನೆ, ನಿಷೇಧವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದೆ. ಸಮಾಜದ ಕೆಲವು ವರ್ಗಗಳನ್ನು ‘‘ತುಷ್ಟೀಕರಿಸಲು’’ ಬಿಜೆಪಿ ಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.
ಆರೆಸ್ಸೆಸ್ ಸಿದ್ಧಾಂತದ ಹೇರಿಕೆ: ಇದು ಆರೆಸ್ಸೆಸ್ ಸಿದ್ಧಾಂತದ ಹೇರಿಕೆ ಎಂದು ಕಾಂಗ್ರೆಸ್ ನಾಯಕ ಸಚಿನ ಸಾವಂತ್ ಹೇಳಿದ್ದಾರೆ. ‘‘ನಾನು ಏನು ತಿನ್ನಬೇಕು, ಏನು ಕುಡಿಯಬೇಕು, ಏನು ಧರಿಸಬೇಕು, ಎಲ್ಲಿ ಮಲಗಬೇಕು, ಯಾವಾಗ ಮಾತನಾಡ ಬೇಕು ಎನ್ನುವುದನ್ನು ಸರಕಾರ ನಿರ್ಧರಿಸಬೇಕೇ? ದೇಶಾದ್ಯಂತ ಫ್ಯಾಶಿಸಂನ ಛಾಯೆ ಕಾಣುತ್ತಿದೆ’’ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದರು. ಇದು ‘‘ಧಾರ್ಮಿಕ ಭಯೋತ್ಪಾದನೆ’’ ಎಂದು ಶಿವಸೇನೆಯ ಸಂಜಯ್ ರಾವುತ್ ಹೇಳಿದರು. ‘‘ತಮ್ಮನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವ ಸಿಖ್ಖರು, ಮುಸ್ಲಿಮರು, ಕ್ರೈಸ್ತರು ಮತ್ತು ಜೈನರಿದ್ದಾರೆ. ನಾವು ಅವರನ್ನು ಗೌರವಿಸುತ್ತೇವೆ… ಆದರೆ, ನಾವು ಏನು ತಿನ್ನಬೇಕು ಎನ್ನುವುದನ್ನು ಅವರು ನಿರ್ಧರಿಸಬಾರದು’’ ಎಂದರು.
ನಿಷೇಧ ಆದೇಶವನ್ನು ವಿರೋಧಿಸಿದ ಖುರೈಶಿ ಸಮುದಾಯ, ಮಾಂಸ ನಿಷೇಧ ಜಾರಿಯಾದರೆ ತಮ್ಮ ವ್ಯಾಪಾರಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂದು ಹೇಳಿದೆ. ನಿಷೇಧವನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಮೇಯರ್‌ರನ್ನು ಭೇಟಿಯಾಗುವುದಾಗಿ ಹೇಳಿದೆ. ‘‘ನಮಗೆ ನ್ಯಾಯ ಸಿಗದಿದ್ದರೆ ನಾವು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ, ಉಪವಾಸ ಮುಷ್ಕರ ನಡೆಸುತ್ತೇವೆ ಹಾಗೂ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತೇವೆ’’ ಎಂದರು.
ಮುಂಬೈ