ಮಂಗಳೂರು : ಎಚ್ ಪಿ ಸಿಎಲ್ ಸಂಸ್ಥೆಯ ಗ್ಯಾಸ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಾಜಕದ ಮೇಲೆ ಏರಿ ನಿಲ್ಲುವ ಮೂಲಕ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಠಿಸಿದ ಘಟನೆ ಭಾನುವಾರ ಬೆಳಗಿನ ಜಾವ ಮಂಗಳೂರಿನ ಹೊರವಲಯದ ಪಡೀಲ್ ಸಮೀಪದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಇಂದು ಬೆಳಿಗ್ಗೆ ಪಡೀಲ್ ಬಳಿ ರಸ್ತೆಯಲಿ ಹೋಗುತ್ತಿದ್ದ ಎಚ್ ಪಿ ಸಿಎಲ್ ಸಂಸ್ಥೆಗೆ ಸೇರಿದ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದು ಕೊಂಡು ಡಿವೈಡರ್ ಮೇಲೆ ಹತ್ತಿ ನಿಂತಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ಮನೆಯಿಂದ ಹೊರಗೆ ಓಡಿ ಬಂದು ಜಮಾಯಿಸಿ ದ್ದಾರೆ.
ಕೆಲವೇ ದಿನಗಳ ಹಿಂದೆ ಕುಮುಟ ಸಮೀಪ ಗ್ಯಾಸ್ ಟ್ಯಾಂಕರ್ ಉರುಳಿಬಿದ್ದು, ಸ್ಫೋಟಗೊಂಡ ಪರಿಣಾಮ ಹಲವು ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯಗೊಂಡು ಆಸ್ಪತ್ರೆ ಸೇರಿದ ನೆನಪು ಮಾಸುವ ಮುನ್ನವೇ ಇಲ್ಲಿ ಈ ಘಟನೆ ನಡೆದಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು.
ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಪೊಲೀಸರು ಗ್ಯಾಸ್ ಸೋರುವಿಕೆಯಿಲ್ಲವೆನ್ನುವುದನ್ನು ಖಾತ್ರಿ ಪಡಿಸಿಕೊಂಡ ನಂತರ ಕ್ರೇನ್ ಮೂಲಕ ಟ್ಯಾಂಕರನ್ನು ರಸ್ತೆಗೆ ಸುರಕ್ಷಿತವಾಗಿ ತರುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಿದರು. .











