ಕುಂದಾಪುರ: ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಸೈಕಲಿಗೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಬಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಕುಂದಾಪುರದ ಅಂಕದಕಟ್ಟೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮೂಲತಃ ಬಾಗಲಕೋಟೆ ನಿವಾಸಿ ಚಂದ್ರಶೇಖರ್ (14) ಅಪಘಾತದಲ್ಲಿ ಮೃತಪಟ್ಟ ಸೈಕಲ್ ಸವಾರ.
ಘಟನೆ ವಿವರ: ಮೂಲತಃ ಬಾಗಲಕೋಟೆ ನಿವಾಸಿಯಾಗಿರುವ ಚಂದ್ರಶೇಖರ್ ಅಲ್ಲಿನ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದಾನೆ. ಚಂದ್ರಶೇಖರ್ ತಂದೆ ತಾಯಿ ಹಾಗೂ ಸಹೋದರ ಅಂಕದಕಟ್ಟೆ ಸಮೀಪ ಮನೆಯಲ್ಲಿ ವಾಸವಿದ್ದಾರೆ. ಭಾನುವಾರ ಶಾಲೆಗೆ ರಜೆಯಿದ್ದ ಕಾರಣ ಬಾಗಲಕೋಟೆಯಿಂದ ಕುಂದಾಪುರಕ್ಕೆ ತನ್ನ ಪೋಷಕರನ್ನು ನೋಡಲೆಂದು ಚಂದ್ರಶೇಖರ್ ಶನಿವಾರ ಬಂದಿದ್ದ. ಭಾನುವಾರ ಮಧ್ಯಾಹ್ನದ ಸುಮಾರಿಗೆ ತನ್ನ ಸೋದರನ ಸೈಕಲ್ ಏರಿ ಅಂಕದಕಟ್ಟೆಯಲ್ಲಿನ ಅಂಗಡಿಯೊಂದಕೆ ತೆರಳುವ ಸಂದರ್ಭ ಅಂಕದಕಟ್ಟೆ ಡಿವೈಡರ್ ಸಮೀಪ ಈ ಘಟನೆ ನಡೆದಿದೆ.
ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


