ಮಂಗಳೂರು : ಹಿಂದೂ ಸಂಘಟನೆಯ ತಂಡವೊಂದು ಸೋಮವಾರ ಅತ್ತಾವರ ಸಮೀಪ ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ದ ಅನ್ಯ ಕೋಮಿನ ಯುವಕನನ್ನು ಅರೆಬೆತ್ತಲೆಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 15 ಮಂದಿ ಹಿಂದೂ ಸಂಘಟನೆಯ ಯುವಕರನ್ನು ಬಂಧಿಸಿದ ಬೆನ್ನಲೇ ಸಂಪೂರ್ಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಇದೀಗ ಕಾರಿನಲ್ಲಿ ಕರೆದೊಯ್ದ ಸಹೊದ್ಯೋಗಿ ಯುವಕನ ವಿರುದ್ಧ ಯುವತಿಯೇ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿರುವುದರ ಜೊತೆಗೆ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಹಲ್ಲೆಗೊಳಗಾಗಿದ್ದ ಯುವಕನ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾಳೆ.
ಅತ್ತಾವರದಲ್ಲಿರುವ ಈಝೀ ಡೇ ಹೆಸರಿನ ಸೂಪರ್ ಮಾರ್ಕೇಟ್‌ನ ಉದ್ಯೋಗಿಯಾಗಿರುವ ಶಾಕೀರ್ ಎಂಬಾತ ತನ್ನ ಸಹೋದ್ಯೋಗಿ ಅನ್ಯ ಕೋಮಿನ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಯುವಕರ ತಂಡವೊಂದು ಯುವಕನನ್ನು ಅರೆಬೆತ್ತಲೆಗೊಳಿಸಿ, ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಸೋಮವಾರ ಸಂಜೆ ಮಂಗಳೂರಿನ ಅತ್ತಾವರ ಬಾಬುಗುಡ್ಡೆಯಲ್ಲಿ ನಡೆದಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದರು.
ಇದೀಗ ಈ ಪ್ರಕರಣ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಸ್ವತಹ ಯುವತಿಯೇ ಮಲ್ಲಿಕಟ್ಟೆ ಸಮೀಪದ ಖಾಸಗಿ ಕಚೇರಿಯೊಂದರಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಸುದ್ಧಿಗಾರರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾಳೆ. ಶಾಕೀರ್ ನನ್ನ ಜೊತೆ ವೃತ್ತಿ ಸ್ಥಳದಲ್ಲಿ ನಿರಂತರವಾಗಿ,ಅಸಭ್ಯವಾಗಿ ವರ್ತಿಸುತ್ತಾ ಬಂದಿದ್ದು,ತೀರಾ ಅಶ್ಲೀಲವಾಗಿ ನನ್ನೊಂದಿಗೆ ಮಾತನಾಡುತ್ತಿದ್ದ .ಅಲ್ಲದೇ ನನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದರಿಂದ ಭಯಗೊಂಡು ನಾನು ಇದರ ವಿರುದ್ದ ಧ್ವನಿ ಎತ್ತಿರಲಿಲ್ಲ ಎಂದು ತಿಳಿಸಿದ್ದಾಳೆ.
ಸೋಮವಾರ ಕೂಡ ನಾನು ಎಂದಿನಂತೆ ನಾನು ಮನೆಗೆ ಹೊರಡಲು ಅತ್ತಾವರದ ಕೆ.ಎಂ.ಸಿ ಆಸ್ಪತ್ರೆ ಸಮೀಪ ಬರುತ್ತಿದ್ದಾಗ ಅಲ್ಲಿಗೆ ಬಂದ ಶಾಕೀರ್ ನನ್ನನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲವಂತಪಡಿಸಿದ್ದಾನೆ. ನಾನು ಬರುವುದಿಲ್ಲ ಎಂದು ತಿಳಿಸಿದಾಗ ನನ್ನ ಕೈ ಹಿಡಿದು ಕಾರಿನೊಳಗೆ ಎಳೆಯಲು ಪ್ರಯತ್ನಿಸಿದ್ದಾನೆ.ಈ ವೇಳೆ ಭಯಗೊಂಡು ರಕ್ಷಣೆಗಾಗಿ ನಾನು ಕೂಗಿಕೊಂಡಾಗ ಅಲ್ಲೆ ಸಮೀಪವಿದ್ದ ಕೆಲವು ಮಂದಿ ಸಾರ್ವಜನಿಕರು ನನ್ನ ನೆರವಿಗೆ ಧಾವಿಸಿ ಬಂದು ನನ್ನನ್ನು ಶಾಕೀರ್‌ನಿಂದ ಬಿಡಿಸಿದ್ದಾರೆ ಎಂದು ತಿಳಿಸಿದ್ದಾಳೆ.
ಮಾನವೀಯತೆಯ ನೆಲೆಯಲ್ಲಿ ನನ್ನನ್ನು ಕಾಪಾಡಿದ ಅ ಯುವಕರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂಬ ನೆಲೆಯಲ್ಲಿ ನೋಡುವುದು ತಪ್ಪು. ಮಾತ್ರವಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಯುವಕರೆಲ್ಲಾ ಅಮಾಯಕರು. ಅವರು ಯುವತಿಯೋರ್ವಳು ಅಸಹಾಯಕ ಪರಿಸ್ಥಿತಿಯಲ್ಲಿರುವುದನ್ನು ಕಂಡು ಸಹಾಯಕ್ಕಾಗಿ ಬಂದವರು. ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಯುವತಿ ವಿನಂತಿ ಮಾಡಿದ್ದಾಳೆ.




