ಕಲಿಯುಗ… ಈ ಹೆಸರಿನಲ್ಲೇ ಒಂದು ರೀತಿಯ ಗಮ್ಮತ್ತು ಅಡಗಿದೆ. ಅತಿರೇಕಗಳ, ಊಹೆಗೂ ನಿಲುಕದ ರೋಚಕತೆಗಳ ಸೃಷ್ಟಿಯನ್ನು ತನ್ನ ಅಂತರಾಳದಲ್ಲಿ ಅಡಗಿಸಿಕೊಂಡು ಕಲಿಯುಗ ಸಾಗಿದೆ. ಹಾಗಾಗಿ ಈ ಹೆಸರು ಕೇಳಿದಾಕ್ಷಣ ಪ್ರತಿಯೊಬ್ಬರಲ್ಲೂ ಒಂದು ರೀತಿಯ ರೋಮಾಂಚನ ಮೂಡುತ್ತದೆ.ಕಲಿಯುಗದ ಅಂತ್ಯಕ್ಕೆ ಈಗಾಗಲೇ ಹಲವು ಬಾರಿ ಭಾಷ್ಯ ಬರೆಯಲಾಯಿತು. ಎರಡನೆ ಮಹಾಯುದ್ಧದ ಸಂದರ್ಭದಲ್ಲೇ ಇನ್ನು ಕಲಿಯುಗದ ಕಥೆ ಮುಗಿಯಿತು ಎಂದವರು ಉಂಟು.
ಆ ನಂತರ ಮಾನವನ ಅತಿ ಬುದ್ಧಿವಂತಿಕೆಯ ವಿರಾಟ ರೂಪ ಎಂದೇ ಕರೆಸಿಕೊಂಡ ಸ್ಕೈಲಾಬ್ ಸೃಷ್ಟಿಸಿದ ಭಯ-ಭೀತಿ ಇಂದಿಗೂ ಎಲ್ಲರಲ್ಲೂ ಅಚ್ಚಳಿಯದೆ ಉಳಿದಿದೆ.ಇನ್ನು 2000ದ ಅಂತ್ಯಕ್ಕೆ ಕಲಿಯುಗ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದವರು ಇಂದು ಮೂಲೆಗುಂಪಾಗಿದ್ದಾರೆ.ಪ್ರಳಯ, ಭೀಭತ್ಸ್ಯ, ರೌದ್ರತೆ, ಹಸಿವು ಹೀಗೆ ಸಾಕಷ್ಟು ಉದಾಹರಣೆಗಳ ಮೂಲಕ ಜಗತ್ತಿನ ಅಂತ್ಯಕ್ಕೆ ಮುನ್ನುಡಿ ಬರೆದ ಮಹಾನುಭಾವರು ಈಗ ಉಸಿರೇ ಎತ್ತುತ್ತಿಲ್ಲ.ಹಾಗೆಂದು ಎಲ್ಲವನ್ನೂ ನಿರಾಕರಿಸುವಂತಿಲ್ಲ. ಮೊನ್ನೆ ಮೊನ್ನೆ ನೇಪಾಳದಲ್ಲಿ ಸಂಭವಿಸಿದ ಘನಘೋರ ಕಂಪ ಈ ಪ್ರಳಯಕ್ಕೆ ಒಂದು ನಿದರ್ಶನ. ಇಷ್ಟೆಲ್ಲ ಪೀಠಿಕೆ ಏಕೆಂದರೆ, ರಷ್ಯಾದ ಸೈಬೀರಿಯಾದಲ್ಲಿ ದೈತ್ಯಾಕಾರದ ಗುಂಡಿಗಳು ರಾತ್ರೋರಾತ್ರಿ ಸೃಷ್ಟಿಯಾಗಿ ಬೆಳ್ಳಂಬೆಳಗ್ಗೆ ಜನತೆಯನ್ನು ಬೆಚ್ಚಿ ಬೀಳಿಸಿದ್ದವು. ಈ ವಿಚಿತ್ರ ಗುಂಡಿಗಳು ಗಾತ್ರದಲ್ಲಿ ರಾಕ್ಷಸಾಕಾರ ಹೊಂದಿದ್ದವು. ಮೊದಲಿಗೆ ಎರಡು ಗುಂಡಿಗಳು ಕಾಣಿಸಿಕೊಂಡಿದ್ದವು. ಆ ನಂತರ ಇನ್ನೆರಡು ಗುಂಡಿಗಳು ಕಾಣಿಸಿಕೊಂಡು ಜನತೆಯಲ್ಲಿ ಮತ್ತಷ್ಟು ಭೀತಿ ಮೂಡಿಸಿದ್ದವು. ಈ ಬಗ್ಗೆ ವಿಶ್ವದ ಎಲ್ಲೆಡೆ ಚರ್ಚೆಗಳು ನಡೆದವು. ಇವು ವಿನಾಶಕಾಲಕ್ಕೆ ಸೂಚನೆ ಎಂದು ಬಿಂಬಿಸಲ್ಪಟ್ಟವು. ಆದರೆ, ಈ ತನಕ ಈ ಗುಂಡಿಗಳ ಬಗ್ಗೆ ಖಚಿತ ವರದಿಗಳು ಲಭ್ಯವಾಗಿಲ್ಲ.
ಇನ್ನೂ ಈ ಬಗ್ಗೆ ಸಂಶೋಧನೆಗಳು ಮುಂದುವರೆದಿವೆ. ರಷ್ಯಾದ ಯಮಲ್ ಪೆನಿನ್ಸುಲಾ ಮತ್ತು ಥಾಯ್‌ವೀರ್ ಪೆನಿನ್ಸುಲಾ ಪ್ರದೇಶಗಳಲ್ಲಿ ಈ ಗುಂಡಿಗಳು ಕಾಣಿಸಿಕೊಂಡಿದ್ದವು. ಇವು ವಿಶ್ವದ ಗಮನ ಸೆಳೆದವು. ಭೂಮಿಯೊಳಗಿನ ಪದರಗಳಲ್ಲಿ ಉಂಟಾದ ವ್ಯತ್ಯಾಸಗಳೇ ಈ ಗುಂಡಿಗಳಿಗೆ ಕಾರಣ ಎಂದು ಅಂದು ಬಿಂಬಿಸಲಾಯಿತು. ಆದರೆ, ಇದುವರೆಗೂ ಖಚಿತ ಕಾರಣಗಳು ಲಭ್ಯವಾಗಿಲ್ಲ. ವಿಜ್ಞಾನಿಗಳು, ಭೂಗೋಳ ಶಾಸ್ತ್ರಜ್ಞರು ಇನ್ನೂ ಈ ಗುಂಡಿಗಳ ಕುರಿತು ಸಂಶೋಧನೆ ಮುಂದುವರೆಸಿದ್ದಾರೆ. ಸುಮಾರು 45 ಅಡಿ ವ್ಯಾಸದ ಈ ಗುಂಡಿಗಳು 200 ರಿಂದ 330 ಅಡಿ ಆಳ ಹೊಂದಿದ್ದವು. ಅಷ್ಟು ಆಳದ ಒಳಗೆ ಏನಾಗಿರಬಹುದು ಎಂಬ ಸಂಶಯಗಳು ಇಂದಿಗೂ ಎಲ್ಲರನ್ನು ಕಾಡುತ್ತಿವೆ. ಆರಂಭದಲ್ಲಿ ಈ ಗುಂಡಿಗಳಿಂದ ಹೊಗೆ ಬರಲಾರಂಭಿಸಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದರು. ಆಸ್ಟ್ರಾಯ್ಡ್ಸ್ ಪ್ರಭಾವವೂ ಇದಕ್ಕೆ ಕಾರಣವಿರಬಹುದು ಎಂಬ ಸಂಶಯಗಳು ವ್ಯಕ್ತವಾಗಿವೆ. ಭೂಗರ್ಭದಲ್ಲಿ ಇನ್ನೂ ಏನೆಲ್ಲ ವೈಚಿತ್ರ್ಯಗಳು ಅಡಗಿವೆ ಎಂಬ ಬಗ್ಗೆಯೂ ಸಂಶೋಧನೆಗಳು ಮುಂದುವರೆದಿವೆ.ಒಟ್ಟಾರೆ ಈ ಭೂತಾಕಾರದ ಗುಂಡಿಗಳು ಜಗತ್ತನ್ನೇ ಬೆಚ್ಚಿ ಬೀಳಿಸಿದ್ದವು. ಮನುಷ್ಯನ ದುರಹಂಕಾರ, ಅಸೂಯೆ, ನವವಂಚಕತನ, ಅವಕಾಶವಾದಿತನ, ದ್ವೇಷ ಹೀಗೆ ನಕಾರಾತ್ಮಕ ವರ್ತನೆಗಳು ಮೇರೆ ಮೀರಿವೆ. ಹೀಗಾಗಿಯೇ ಪ್ರಳಯ ಸಮೀಪಿಸುತ್ತಿದೆ ಎಂಬುದು ಜ್ಞಾನಿಗಳ ಆಂಬೋಣ. ಆದರೆ, ವಿಜ್ಞಾನಿಗಳು ಮಾತ್ರ ಇದಕ್ಕೆ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತ ಮನುಷ್ಯನನ್ನು ಭಯದ ಭೀತಿಯಿಂದ ದೂರ ಸರಿಸುತ್ತಿದ್ದಾರೆ. ಈ ಗುಂಡಿಗಳು ಯಾವುದರ ಪ್ರತೀಕ ಎಂಬುದನ್ನು ಕಾದು ನೋಡೋಣ.