ಸುಳ್ಯ, ಜುಲೈ .30 : ನಿಗೂಢವಾಗಿ ನಾಪತ್ತೆ ಯಾಗಿದ್ದ ಪಂಜ ಸಮೀಪದ ಕೂತ್ಕುಂಜ ಗ್ರಾಮದ ಕಕ್ಯಾನ ಕಲ್ಕ ಜಯಾನಂದ ಗೌಡ(54) ಶವವಾಗಿ ಪತ್ತೆಯಾಗಿದ್ದಾರೆ. ಇದೊಂದು ಕೊಲೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ.
ಜು.14ರಂದು ಮನೆಯಿಂದ ಬೈಕ್‌ನಲ್ಲಿ ತೆರಳಿದವರು ನಾಪತ್ತೆಯಾಗಿದ್ದರು. ಜು.16 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಿಗೂಢ ನಾಪತ್ತೆ ಹಲವು ಅನುಮಾನಗಳಿಗೆ ಎಡೆ ಮಾಡಿತ್ತು. ಅವರ ಸಂಬಂಧಿಕರು, ಊರವರು ಹುಡುಕಾಟ ನಡೆಸಿದ್ದರು. ಜು.14.ರಂದು ನಿಂತಿಕಲ್ಲಿನಿಂದ ಅವರ ಸಹೋದರ ಕಾಣಿಯೂರು ವಿಶ್ವನಾಥರಿಗೆ ಕರೆ ಮಾಡಿ ಕುವೇತ್ತಾಡಿಗೆ ಹೋಗಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು ಎನ್ನಲಾಗಿದೆ. ನಂತರ ಜಯಾನಂದರು ಸಹೋದರನ ಮನೆಗೂ ಹೋಗದೆ ತನ್ನ ಮನೆಗೂ ಹೋಗಿರಲಿಲ್ಲ. ಹೀಗಾಗಿ ಹುಡುಕಾಟ ಆರಂಭಿಸಲಾಯಿತು.
ಜು.16ರಂದು ಬೆಳ್ಳಾರೆ ಸಮೀಪ ನೆಟ್ಟಾರಿನಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಾಪತ್ತೆಯಾದ ರಾತ್ರಿ ಅವರು ಒಂಟಿಯಾಗಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿದ ಜೀಪೊಂದು ಬೈಕ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು ಎಂದು ತಿಳಿದುಬಂದಿದ್ದು, ಈ ಘಟನೆಯಿಂದಾಗಿ ಅವರ ನಾಪತ್ತೆ ಪ್ರಕರಣವು ಹಲವು ಅನುಮಾನಗಳಿಗೆ ಎಡೆ ಮಾಡಿತ್ತು. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ, ಸಾಧು ಸ್ವಭಾವದ ಜಯಾನಂದ ನಾಪತ್ತೆ ಪ್ರಕರಣವನ್ನು ಭೇದಿಸುವಂತೆ ಊರವರು ಪೊಲೀಸರ ಮೇಲೆ ಒತ್ತಡ ಹೇರಿದ್ದರು.
ತನಿಖೆ ನಡೆಸಿದ ಪೊಲೀಸರು ಪತ್ನಿ ಲಲಿತಾ ಕುಮ್ಮಕ್ಕಿನಿಂದ ಜಯಾನಂದರ ಕೊಲೆ ನಡೆದಿದ್ದು, ಕೃತ್ಯ ನಡೆಸಿದ ಪಂಜ ನೆಕ್ಕಿಲದ ಧನಂಜಯ, ಬೆಳಂದೂರಿನ ದಿನೇಶ್, ಚಿಂತನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.ಲಲಿತಾಳ ಅನೈತಿಕ ಸಂಬಂಧ ಪತಿಗೆ ತಿಳಿದಿದ್ದರಿಂದ ಅವರೊಳಗೆ ಘರ್ಷಣೆ ನಡೆದಿದ್ದು, ಅನೈತಿಕ ಸಂಬಂಧವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎಸ್.ಡಿ. ಶರಣಪ್ಪ ಮಾರ್ಗದರ್ಶನಂತೆ ಸುಳ್ಯ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
