ಕುಂದಾಪುರ: ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಸಂತೆ ಮಾರುಕಟ್ಟೆ ಬಳಿ ಸುಮಾರು 71 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಹಿಳಾ ಮೀನು ಮಾರುಕಟ್ಟೆಯ ದಿಢೀರ್ ಉದ್ಘಾಟನಾ ಕಾರ್ಯಕ್ರಮ ಜು.25ರಂದು ಮೀನುಗಾರ ಮಹಿಳೆಯರ ಅಸಮಾಧಾನ, ಆಕ್ರೋಶ, ಪ್ರತಿಭಟನೆಯ ನಡುವೆಯೇ ನಡೆದು ಹೋಯಿತು. ನಗರಾಭಿವೃಧ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಮೀನು ಮಾರುಕಟ್ಟೆಯನ್ನು ಸಾಂಕೇತಿಕವಾಗಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ಮಾರುಕಟ್ಟೆ ನಿರ್ಮಾಣಕ್ಕೆ ಅಂದಾಜು ಪಟ್ಟಿಯಲ್ಲಿ ಕಾಣಿಸಲಾದ ಕಾಮಗಾರಿ ಅಪೂರ್ಣವಾಗಿದ್ದು ಯಾವುದೇ ಮೂಲಸೌಕರ್ಯ ಒದಗಿಸದೇ ಉಧ್ಘಾಟನೆ ನಡೆಸುತ್ತಿರುವುದನ್ನು ವಿರೋಧಿಸಿ ಸ್ಥಳೀಯರನ್ನೊಡಗೂಡಿ ಕೆಲವು ಜನಪ್ರತಿನಿಧಿಗಳು ಪ್ರತಿಭಟನೆಗೆ ಮುಂದಾದರು. ಗ್ರಾಮ ಪಂಚಾಯತ್ ಏಕಾಏಕಿ ಉದ್ಘಾಟನೆ ಮುಂದಾಗಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡದೇ ಧಾವಂತದ ಉದ್ಘಾಟನೆಯ ಅವಶ್ಯಕತೆ ಏನಿದೆ? ಗ್ರಾ.ಪಂ.ನ ಪ್ರತಿಪಕ್ಷ ಸದಸ್ಯರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರುಗಳು, ಸಾರ್ವಜನಿಕರು ಪ್ರಶ್ನಿಸಿದರು. ಉದ್ಘಾಟನೆಗೆ ಮೊದಲೇ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಕಾರರು ಉದ್ಘಾಟನೆಯ ಸಂದರ್ಭ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದದರು.
ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಒಂದು ಹಂತದಲ್ಲಿ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಗೆ ಅವಕಾಶ ಕಲ್ಪಿಸಬೇಕು ಎಂಬ ಕೋರಿಕೆ ಇಲಾಖೆ ಅನುಮತಿ ನೀಡಲಿಲ್ಲ. ಕಪ್ಪು ಬಾವುಟ ಪ್ರದರ್ಶಿಸಿದರೆ ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತರನ್ನು ಎಚ್ಚರಿಸಿದರು. ಕೊನೆಗೆ ಪ್ರತಿಭಟನಾ ನಿರತರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.
ಸಚಿವ ಸೊರಕೆ ಆಗಮಿಸುತ್ತಿದ್ದಂತೆ ಪ್ರತಿಭಟನಾ ನಿರತರು ಮೀನುಮಾರುಕಟ್ಟೆಯ ಕಾಮಗಾರಿ ಅರ್ಧಂಬರ್ಧ ಆಗಿದ್ದು, ಏಕಾಏಕಿ ಉದ್ಘಾಟನೆ ಮಾಡಲಾಗುತ್ತಿದೆ. ಮೀನುಗಾರ ಮಹಿಳೆಯರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಉದ್ದೇಶಿತ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು. ಸಚಿವರು ಪ್ರತಿಭಟನಾನಿರತರ ಮೊರೆ ಆಲಿಸಿ, ಗಡಿಬಿಡಿಯಲ್ಲಿ ಮಾರುಕಟ್ಟೆಯತ್ತ ತೆರಳುತ್ತಿದ್ದಂತೆ, ಇತ್ತ ಪ್ರತಿಭಟನಾನಿರತರು ಮತ್ತು ಪೊಲೀಸರ ನಡಿವೆ ಮತ್ತೊಂದು ಹಂತದ ಮಾತಿನ ಚಕಮಕಿ ನಡೆಯಿತು. ಆತ್ತ ಬೆರಳೆಣಿಕೆ ಜನರ ನಡುವೆ ಮಾರುಕಟ್ಟೆ ಉದ್ಘಾಟನೆಗೊಂಡಿತು.
ಕೋಟ ಮೀನು ಮಾರುಕಟ್ಟೆಗೆ ಅಂದಿನ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಿನುಗಾರಿಕಾ ಫೆಡರೇಶನ್ ಮತ್ತು ಕರಾವಳಿ ಪ್ರಾಧಿಕಾರದ ಮುಂದಾಳತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆ ಕಾಮಗಾರಿ ಇಂದಿಗೂ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇತ್ತ್ತೀಚಿನ ದಿನಗಳಲ್ಲಿ ಕೋಟ ಗ್ರಾಮಪಂಚಾಯತ್ನ ವಿಶೇಷ ಮುತುವರ್ಜಿಯಿಂದ ಕಾಮಗಾರಿ ಸಲ್ಪ ಪ್ರಮಾಣ ವೇಗ ದೊರಯಿತಾದರೂ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆಗೆ ಅಣಿಗೊಳಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿತ್ತು.

















