ಬೆಂಗಳೂರು, ಜು.22: ಲೋಕಾಯುಕ್ತ ಸಂಸ್ಥೆ ಯಲ್ಲಿನ ಭ್ರಷ್ಟಾಚಾರ ಹಗರಣ ಕುರಿತು ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದೆ. ಹಗರಣ ಸಂಬಂಧ 3ನೇ ಆರೋಪಿ ಶ್ರೀನಿವಾಸ್‌ಗೌಡ, ನಾಲ್ಕನೇ ಆರೋಪಿ ಶಂಕರೇಗೌಡ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಬ್ಬರು ಈಗಾಗಲೇ ಎಸ್‌ಐಟಿ ತಂಡ ಬಂಧಿಸಿರುವ ಆರೋಪಿ, ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್‌ರ ಆಪ್ತ ಅಶೋಕ್‌ಕುಮಾರ್‌ನ ಸಹಚರರು ಎಂಬುದು ತಿಳಿದುಬಂದಿದೆ. ಎಸ್‌ಐಟಿ ತಂಡ ನಿನ್ನೆ ಮಧ್ಯಾಹ್ನ ಇವರಿಬ್ಬರನ್ನು ಬಂಧಿಸಿದ್ದು, ಇಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಹಗರಣ ಸಂಬಂಧ ಈವರೆಗೆ ಮೂವರನ್ನು ಬಂಧಿಸಲಾಗಿದ್ದು, ಎರಡು ದಿನಗಳ ಹಿಂದೆ ಅಶೋಕ್‌ಕುಮಾರ್ ಎಂಬಾತನನ್ನು ಬಂಧಿಸಿ, ನಿನ್ನೆ ಕೋರ್ಟ್‌ಗೆ ಹಾಜರುಪಡಿಸಿತ್ತು. ಬಂಧಿತರನ್ನು ಕಸ್ಟಡಿಗೆ ಪಡೆದಿರುವ ತನಿಖಾ ತಂಡ ತೀವ್ರ ವಿಚಾರಣೆಗೆ ಒಳಪಡಿಸಿ ಹಲವು ಮಹತ್ವದ ಮಾಹಿತಿಗಳನ್ನು ಪಡೆಯುತ್ತಿದೆ.
ನಿಗೂಢ ಸ್ಥಳದಲ್ಲಿ ಬಂಧಿತ ಅಶೋಕ್ ವಿಚಾರಣೆ
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಹಗರಣ ಸಂಬಂಧ ಬಂಧಿತನಾಗಿರುವ ಅಶೋಕ್‌ಕುಮಾರ್‌ನನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ನಿಗೂಢ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಲೋಕಾಯುಕ್ತರ ಪುತ್ರ ಅಶ್ವಿನ್‌ರಾವ್ ಯಾವಾಗ ಪರಿಚಯವಾದರು, ಇವರೊಂದಿಗೆ ಇನ್ನೂ ಯಾರ್ಯಾೆರಿದ್ದಾರೆ , ಎಲ್ಲರೂ ಸೇರಿ ಏನೇನು ಮಾಡಿದ್ದೀರಿ, ಯಾವ ಯಾವ ಅಧಿಕಾರಿಗಳಿಗೆ ಎಲ್ಲೆಲ್ಲಿಂದ ಕರೆ ಮಾಡಿದ್ದೀರಿ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಅಶೋಕ್‌ಕುಮಾರ್‌ನಿಂದ ತನಿಖಾ ದಳವು ಈಗಾಗಲೇ ಕೆಲವು ಮಾಹಿತಿಗಳನ್ನು ಪಡೆದಿದ್ದು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಒಂದು ಕೋಟಿ ರೂ. ಹಣದ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಕೃಷ್ಣಮೂರ್ತಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದ ವೇಳೆ ಆರೋಪಿ ಹಾಜರಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ವಾರಂಗಲ್ ಮೂಲದವನಾದ ಅಶೋಕ್‌ಕುಮಾರ್ ರಾಜಾಜಿನಗರದಲ್ಲಿ ವಾಸವಿದ್ದಾನೆ. ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಈತ ನಂತರ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದಿದ್ದು, ಸಿಮ್ ಕಾರ್ಡ್‌ಗಳನ್ನು ವಿತರಣೆ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಲೋಕಾಯುಕ್ತರ ಪುತ್ರ ಅಶ್ವಿನ್‌ರಾವ್‌ಗೂ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಈಗಾಗಲೇ ನೋಟಿಸ್ ನೀಡಿದ್ದು, ನಾಳೆ ಅಥವಾ ನಾಡಿದ್ದು , ಅವರು ವಿಚಾರಣೆಗೆ ಹಾಜರಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
