ಕರ್ನಾಟಕ

ನೀರಿನಲ್ಲಿ ತನ್ನಿಂತಾನೇ ಬೆಂಕಿ ಹೊತ್ತಿಕೊಳ್ಳುತ್ತಿರುವ ವಿಸ್ಮಯಕಾರಿ ಘಟನೆ !

Pinterest LinkedIn Tumblr

fire in water

ಬೆಂಗಳೂರು, ಜು. 20: ನೀರಿನಲ್ಲಿ ತನ್ನಿಂತಾನೇ ಬೆಂಕಿ ಹೊತ್ತಿಕೊಳ್ಳುತ್ತಿರುವ ವಿಸ್ಮಯಕಾರಿ ಘಟನೆ ಬೆಂಗಳೂರಿನ ಆನೇಕಲ್ ಗ್ರಾಮದ ಲಕ್ಷ್ಮೀಪುರದ ಕ್ವಾರಿಯೊಂದರಲ್ಲಿ ನಡೆದಿದೆ. ಹೌದು ರಾಸಾಯನಿಕ ಕ್ರಿಯೆಯಿಂದ ವಿಷಾನಿಲ ಉತ್ಪತ್ತಿಯಾಗಿ, ಅದರಿಂದ ನೀರಿಲ್ಲೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಲಕ್ಷ್ಮೀಪುರದ ಪ್ರದೇಶದ ಬಳಿ ಇರುವ 9 ಎಕರೆ ಕ್ವಾರಿ ಪ್ರದೇಶದಲ್ಲಿ ಅಲ್ಲಲ್ಲಿ ನೀರಿನ ಬುಗ್ಗೆ ಎದ್ದು, ಅದರಲ್ಲೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಳೆದ ಒಂದು ತಿಂಗಳಿನಿಂದ ಈ ಘಟನೆ ನಡೆಯುತ್ತಿದೆ. ಆದರೆ ಈವರೆಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಇಲ್ಲಿ ಕಳೆದ ಮೂರುವರೆ ವರ್ಷಗಳಿಂದ ಬಿಬಿಎಂಪಿ ಕಸ ತಂದು ಸುರಿದು ಅದರ ಮೇಲೆ ಮಣ್ಣು ಮುಚ್ಚಿತ್ತು. ಇದೀಗ ಕಸದಲ್ಲಿ ರಾಸಾಯನಿಕ ಕ್ರಿಯೆ ವಿಷಾನಿಲ ಉತ್ಪತ್ತಿಯಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ವಿಷಾನಿಲದಿಂದ ನೀರಿನಲ್ಲಿ ತನ್ನಿಂತಾನೇ ಬೆಂಕಿ ಹೊತ್ತಿಕೊಳ್ಳುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಬಿಸಿ ಹವೆಯಿಂದಾಗಿ ನೀರು ಕುದಿಯುತ್ತಿದ್ದು, ಕ್ವಾರಿಯಲ್ಲಿನ ಬಾಂಗ್ಲಾ ನಿವಾಸಿಗಳು ಅದರಲ್ಲೇ ಅಡುಗೆ ಮಾಡುತ್ತಿದ್ದಾರೆ. ವೈಜ್ಞಾನಿಕ ಕ್ರಮ ಕೈಗೊಳ್ಳದೆ ಬಿಬಿಎಂಪಿಯವರು ಕಸವನ್ನು ತಂದು ಸುರಿದು, ಮಣ್ಣು ಮುಚ್ಚಿ ಹೋಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ನೋಡು ನೋಡುತ್ತಿದ್ದಂತೆ ಒಣಗಿದ ಎಲೆಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಪೇಪರ್ ಎಸೆದರೆ ಕ್ಷಣ ಮಾತ್ರದಲ್ಲಿ ಉರಿದು ಭಸ್ಮವಾಗುತ್ತದೆ.

ಅಷ್ಟೆ ಅಲ್ಲ ಇಲ್ಲಿನ ಪಾಳು ಬಿದ್ದ ಬೋರ್‌ವೆಲ್‌ಗಳಲ್ಲಿ ನೀರಿನ ಬದಲಿಗೆ ಬೆಂಕಿ ಉಗುಳುತ್ತದೆ.

ಈ ಕ್ವಾರಿ ಸುತ್ತಮುತ್ತ ವಾಸಿಸುವ ಜನರು ಆರಂಭದಲ್ಲಿ ಭಯಪಟ್ಟರೂ ಈ ಬೆಂಕಿಯಿಂದ ಯಾವುದೇ ಅನಾಹುತ ಸಂಭವಿಸದೆ ಇದ್ದುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಕಿಯಿಂದ ಅಪಾಯ ಇಲ್ಲ ಎಂದರಿತ ಸ್ಥಳೀಯರು ಇದೇ ಬೆಂಕಿಯಿಂದ ದಿನನಿತ್ಯವು ಅಡುಗೆ ಮಾಡುತ್ತಿದ್ದಾರೆ, ನೀರು ಕಾಯಿಸಿ ಕೊಳ್ಳುತ್ತಾರೆ.

ಇಲ್ಲಿನ ಕೆಸರು ನೀರು ಕೂಡ ಕೊತ ಕೊತ ಎಂದು ಕುದಿಯುವುದು ಪ್ರತ್ಯಕ್ಷದರ್ಶಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.

ಬೆಂಕಿ ಉರಿಯಲು ಕಾರಣಗಳೇನು ಎಂಬುದನ್ನು ಪತ್ತೆಹಚ್ಚಲಾಗಿದೆ.

ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಸುರಿದ ಅಪಾರ ಪ್ರಮಾಣದ ಕಸ ಕೊಳೆತು ಬೆಂಕಿಯಂತಹ ಅನಿಲ ಸೃಷ್ಟಿಯಾಗಿರಬಹುದು ಎಂದು ಹೇಳಲಾಗುತ್ತಿದೆ.

ಅವೈಜ್ಞಾನಿಕ ಸುರಿದ ಕಸ ಕೊಳೆತು ಮಿಥೇನ್ ಅನಿಲ ಉತ್ಪತ್ತಿಯಾಗಿದೆ. ಇದು ಇಂಗಾಲದ ಡೈಆಕ್ಸೈಡ್ ಜತೆ ಸೇರಿ ಬೆಂಕಿ ಉತ್ಪತ್ತಿಯಾಗಿದೆ.

ಆರಂಭದಲ್ಲಿ ಇದು ಕೆಡಕು ಮಾಡದಿದ್ದರೂ ಭವಿಷ್ಯದಲ್ಲಿ ಭೂ ಅಂತರಾಳದ ಅನಿಲದ ಜತೆ ಸೇರಿದರೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದರ ಬಗ್ಗೆ ಬಿಬಿಎಂಪಿಯ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಇಂಥಹ ಬೆಂಕಿ ಪ್ರಕರಣಗಳು ಭೂಮಿಯ ಒಳಗಿನ ರಾಸಾಯನಿಕ ಕ್ರಿಯೆಗಳಿಂದಲೂ ಉಂಟಾಗುತ್ತದೆ.`

ಈ ವಾತಾವರಣದಿಂದ ಚರ್ಮದ ವ್ಯಾದಿ ಕಾಣಿಸಿಕೊಳ್ಳುತ್ತದೆ.- ಹೆಚ್.ಎಸ್.ಎಂ. ಪ್ರಕಾಶ್, ಹಿರಿಯ ಭೂವಿಜ್ಞಾನಿ

Write A Comment