ಮಥುರಾ: ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅನ್ವರ್ನಿಂದ ಶಿರಚ್ಛೇದನಗೊಳಿಸಲ್ಪಟ್ಟಿದ್ದ ಹುತಾತ್ಮ ಸೈನಿಕ ಹೇಮರಾಜ್ ಪತ್ನಿ ಧರ್ಮಾವತಿ, ‘ನಮಗೆ ಅನ್ವರ್ ತಲೆ ಬೇಕು’, ಎಂಬ ಬೇಡಿಕೆಯನ್ನಿಟ್ಟಿದ್ದಾರೆ.
ಸೋಮವಾರ ಭಾರತೀಯ ಸೈನಿಕರು ಅನ್ವರ್ನ್ನು ಹತ್ಯೆಗೈದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಹೇಮರಾಜ್ ಪತ್ನಿ ಧರ್ಮಾವತಿ, “ಅನ್ವರ್ನನ್ನು ಕೊಂದು ಸೈನಿಕರು ಭಾರತದ ಗೌರವವನ್ನು ಮರಳಿ ತಂದಿದ್ದಾರೆ. ನನ್ನ ಪತಿ ತಲೆ ಕಡಿದಿದ್ದ ಆ ದುರುಳ ಉಗ್ರನ ಶಿರ ನಮಗೆ ಬೇಕು”, ಎಂದು ಒತ್ತಾಯಿಸಿದ್ದಾರೆ.
ಅನ್ವರ್ ಅಂದು ನಮ್ಮ ಸೈನಿಕರೊಂದಿಗೆ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದ್ದ ಎಂದು ಕಣ್ಣೀರು ಹಾಕಿದ ಅವರು, ‘ತಮ್ಮ ಪತಿ ತಲೆಯನ್ನು ಕತ್ತರಿಸಿದ್ದ ಅನ್ವರ್ ತಲೆಯನ್ನು ಕತ್ತರಿಸಿ ಶೇರ್ನಗರದ ಜನತೆಗೆ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರಲ್ಲದೆ, ಅನ್ವರ್ ಹತ್ಯೆಗೈದ ಸೈನಿಕರಿಗೆ ಬಡ್ತಿ ನೀಡಬೇಕು’, ಎಂದು ಆಗ್ರಹಿಸಿದ್ದಾರೆ.
ಗಡಿಯಲ್ಲಿ ಸೈನಿಕರು ಅನ್ವರ್ನನ್ನು ಹೊಡೆದುರುಳಿಸಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ, ಇತ್ತ ಮಥುರಾದ ಶೇರ್ನಗರ್ದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಊರಿನ ಜನತೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಜತೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೈನಿಕರನ್ನು ಮರಸಾರೆ ಕೊಂಡಾಡುತ್ತಿದ್ದಾರೆ. ಕಾರಣ 2013ರಲ್ಲಿ ಇದೇ ಅನ್ವರ್ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮೂವರು ಭಾರತೀಯ ಸೈನಿಕರ ತಲೆ ಕತ್ತರಿಸಿದ್ದ. ಅವರಲ್ಲಿ ಒಬ್ಬರಾದ ಹೇಮರಾಜ್ ಇದೇ ಹಳ್ಳಿಯವರಾಗಿದ್ದರು.
ಅನ್ವರ್ ಹತ್ಯಾ ಕಾರ್ಯಾಚರಣೆ ನಡೆಸಿದ ಎಲ್ಲ ಸೈನಿಕರನ್ನು ಶೀಘ್ರವೇ ಶೇರ್ನಗರಕ್ಕೆ ಕರೆಸಿ ಸನ್ಮಾನಿಸಲಾಗುವುದು ಎಂದು ಉತ್ತರಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಕುವರ್ ನರೇಂದ್ರ ಸಿಂಗ್ ಭರವಸೆ ನೀಡಿದ್ದಾರೆ.
ಯೋಧ ಲ್ಯಾನ್ಸ್ ನಾಯಕ್ ಹೇಮರಾಜ್ ರುಂಡ ಕತ್ತರಿಸಿದ್ದ ಅನ್ವರ್ ಖಾನ್ನನ್ನು ಪೂಂಛ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಯೋಧರು ಸೋಮವಾರ ಹತ್ಯೆಗೈದಿದ್ದರು. ಅನ್ವರ್ ನೇತೃತ್ವದ ಉಗ್ರರ ತಂಡವೊಂದು ಪೂಂಛ್ ವಲಯದ ಬಾಲೋನಿ ಎಂಬಲ್ಲಿ ಭಾರತದ ಗಡಿಯೊಳಕ್ಕೆ ನುಗ್ಗಲು ಯತ್ನಿಸಿತ್ತು. ಈ ವೇಳೆ ಕಾರ್ಯಾಚರಣೆ ನಡೆಸಿದ್ದ ಯೋಧರು ಅನ್ವರ್ನನ್ನು ಹತ್ಯೆಗೈದಿದ್ದಾರೆ.
2013ರ ಜನವರಿ 8ರಂದು ಯೋಧ ಹೇಮರಾಜ್ರ ಶಿರಚ್ಛೇದ ಮಾಡಲಾಗಿತ್ತು. ಈ ಕೃತ್ಯ ನಡೆಸಿದ್ದ ಅನ್ವರ್ಗೆ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ 5 ಲಕ್ಷ ರೂಪಾಯಿ ಬಹುಮಾನ ನೀಡಿತ್ತು. ಅನ್ವರ್ 1996ರಲ್ಲೂ ಸೇನಾ ಕ್ಯಾಪ್ಟನ್ ಒಬ್ಬರನ್ನು ಹತ್ಯೆಗೈದಿದ್ದ.
ಹತ್ಯೆ ನಂತರ ಉಗ್ರರು ಹೇಮರಾಜ್ ರುಂಡವನ್ನು ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಿದ್ದರು. ಇದು ಭಾರತದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಮೋದಿ ಪ್ರಧಾನಿಯಾಗಿ ಶಪಥ ಗ್ರಹಣ ಮಾಡುವ ಸಂದರ್ಭದಲ್ಲಿ ಪಾಕ್ ಪ್ರಧಾನಿ ಭಾರತಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ , ಅವರು ತಮ್ಮ ಜತೆ ನನ್ನ ಗಂಡನ ರುಂಡವನ್ನು ತೆಗೆದುಕೊಂಡು ಬರಲಿ ಎಂದು ಹುತಾತ್ಮ ಸೈನಿಕ ಹೇಮರಾಜ್ ಪತ್ನಿ ಧರ್ಮಾವತಿ ಕಳೆದ ವರ್ಷ ಆಕ್ರೋಶ ವ್ಯಕ್ತಪಡಿಸಿದ್ದರು