ಬಾಗೇಪಲ್ಲಿ , ಜು.13- ಹತ್ತು ವಿದ್ಯಾರ್ಥಿಗಳಿಗೂ ಕಡಿಮೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಳನ್ನು ಮುಚ್ಚುವ ಹಾಗೂ ವಿಲೀನ ಗೊಳಿಸುವ ರಾಜ್ಯ ಸರ್ಕಾರದ ಆದೇಶ ದಿಂದ ತಾಲ್ಲೂಕಿನ ಅತಿ ಹಿಂದುಳಿದ ಹಾಗೂ ಗಡಿ ಪ್ರದೇಶದಲ್ಲಿ ಸುಮಾರು 41 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿರುವುದು ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು, 10 ವಿದ್ಯಾರ್ಥಿಗಳಿಕ್ಕಿಂತ ಕಡಿಮೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಂತ ಹಂತವಾಗಿ ಸದ್ದಿಲ್ಲದೆ ಮುಚ್ಚಿ. ಕಡಿಮೆ ಇರುವ ಶಾಲಾ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಬೇರೊಂದು ಶಾಲೆಗೆ ವರ್ಗ ಮಾಡಲಾಗಿದೆ. ಶಾಲೆ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಯಾ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ತಿಳಿಸಿದ್ದು, ಬೇರೊಂದು ಶಾಲೆಗೆ ಸೇರಿಸಲು ಸಲಹೆಗಳನ್ನು ಸಹ ನೀಡಲಾಗಿದೆ. ವಿದ್ಯಾರ್ಥಿಗಳು ಬೇರೆ ಶಾಲೆಗೆ ಹೋಗಲು ಆಗುವ ಸಾರಿಗೆ ವೆಚ್ಚವನ್ನು ಭರಿಸುವುದಾಗಿ ಇಲಾಖೆಯು ಭರವಸೆ ನೀಡಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಕಂಡ ಕೆಲ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯವೇನು? ಎಂಬ ಗೊಂದಲದಲ್ಲಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಪೋಷಕರು ದಿನಕ್ಕೆ 10-20 ರೂಪಾಯಿ ನೀಡಿ ಖಾಸಗಿ ಆಟೋಗಳಲ್ಲಿ ಪಟ್ಟಣ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಮಕ್ಕಳನ್ನು ಇಲಾಖೆ ಸೂಚಿಸಿದ ಶಾಲೆಗಳಿಗೆ ಸೇರಿಸಬೇಕೆ ಅಥವಾ ಹೊಸ ಶಾಲೆಗೆ ಸೇರಿಸಬೇಕೆ ಎಂಬ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ.
ಸರ್ಕಾರವೇ ಹೀಗೆ ಶಾಲೆಗಳನ್ನು ಮುಚ್ಚಲು ಶುರು ಮಾಡಿದರೆ ಬಡ,
ಮಧ್ಯಮ ವರ್ಗದ ಜನರು ಮತ್ತು ರೈತರ ಮಕ್ಕಳು ಎಲ್ಲಿ ಶಿಕ್ಷಣ ಪಡೆಯಬೇಕು? ಕಡಿಮೆ ದರದಲ್ಲಿ ಮತ್ತು ಉಚಿತ ಶಿಕ್ಷಣ ದೊರೆಯುತ್ತದೆ ಎಂಬ ಕಾರಣಕ್ಕೆ ನಾವೆಲ್ಲ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತೇವೆ. ಒಂದೊಂದು ಊರಿನಲ್ಲಿ ಶಾಲೆಯಿದ್ದರೆ, ಶೈಕ್ಷಣಿಕ ದೇಗುಲವೆಂದು ಭಾವಿಸುತ್ತೇವೆ.ಆದರೆ ಶಿಕ್ಷಣ ನೀಡುವಂತಹ ದೇಗುಲ ಮತ್ತು ಶಿಕ್ಷಣ ನೀಡುವ ಗುರುಗಳೇ ದೂರವಾಗಿಬಿಟ್ಟರೆ, ಊರಿನಲ್ಲಿ ಬದಲಾವಣೆಗಳು, ಹೊಸ ಚಿಂತನೆಗಳು ಮತ್ತು ಆಲೋಚನೆ ಮೂಡುವುದಾದರೂ ಹೇಗೆ ಎಂದು ಪೋಷಕರು ಪ್ರಶ್ನಿಸುವಂತಾಗಿದೆ. ಖಾಸಗಿ ಶಾಲೆಗಳ ವ್ಯಾಮೋಹ: ತಾಲ್ಲೂಕಿನ ಬಹುತೇಕ ಹೋಬಳಿ ಕೇಂದ್ರಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಆರಂಭವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳನ್ನು ಸೆಳೆಯಲು ಶಾಲಾ ವಾಹನಗಳನ್ನು ಗ್ರಾಮಗಳಲ್ಲಿ ಸಂಚರಿಸಲು ಅವಕಾಶ ಮಾಡಿದ್ದಾರೆ. ಇದರಿಂದ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ, ಇಂಗ್ಲೀಷ್ ಭಾಷೆ ಕಲಿಸುತ್ತಾರೆ ಎಂಬ ವ್ಯಾಮೋಹದಿಂದ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ವ್ಯಾಮೋಹ ಬೆಳೆಸಿಕೊಂಡ ಪರಿಣಾಮ,
ಇದೀಗ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಇದೆ. ರಾಜ್ಯ ಸರ್ಕಾರದ ಆದೇಶದಂತೆ ನಾವು ಪಾಲಿಸಬೇಕಾಗಿದೆ. ಮಕ್ಕಳ ಹಾಜರಾತಿ ಕಡಿಮೆಯಿರುವ ಕಾರಣ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಮುಂದಾಗಿದ್ದೇವೆ. ವಿಲೀನ ಕ್ರಿಯೆಗೆ ತಾಲ್ಲೂಕಿನ ಕೆಲ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ಸೇರಿಸಲಾಗಿದೆ. ಶಿಕ್ಷಕರನ್ನು ನೇಮಿಸುವ ವಿಚಾರ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ. ಇಲಾಖೆಯಿಂದ ಖಾಲಿಇರುವ ಶಿಕ್ಷಕರ ಹುದ್ದೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಿ.ಆದಿಲಕ್ಷ್ಮಮ್ಮ ಈಸಂಜೆಗೆ ತಿಳಿಸಿದ್ದಾರೆ. 2012-13 ನೇ ಸಾಲಿಗಿಂತ ಹಿಂದೆ ಮುಚ್ಚಿರುವ ಸರ್ಕಾರಿ ಶಾಲೆಗಳ ಪಟ್ಟಿ: ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವೆಂಕಟೇಶಪಲ್ಲಿ, ರಾಜುವಾಂಡ್ಲಪಲ್ಲಿ, ರಾಗಿಮಾಕಲಪಲ್ಲಿ, ಬೂದಲಪಲ್ಲಿ, ಮರಿ ಮಾಕಲಪಲ್ಲಿ,
ಗಂಧಂವಾರಿಪಲ್ಲಿ, ಬೋಯಿಪಲ್ಲಿ, ಪೂಲಕುಂಟ್ಲಪಲ್ಲಿ, ಗುಂಡಂವಾರಿಪಲ್ಲಿ, ಕೊಂಡಮಾರಪಲ್ಲಿ, ಮಂಜುನಾಥಪುರ, ಉರ್ದು ಕಿರಿಯ ಪ್ರಾಥ ಮಿಕ ಶಾಲೆ ಚಾಕವೇಲು ಹಾಗು ರಾಶ್ಚೆರವು. 2012-13 ರಲ್ಲಿ ಮುಚ್ಚಿರುವ ಸರ್ಕಾರಿ ಶಾಲೆಗಳ ಪಟ್ಟಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೊಟ್ಲ ಪಲ್ಲಿ, ಚಿನ್ನಕಾಯಿಲಪಲ್ಲಿ, ಕುರುಬರಹಳ್ಳಿ, ಶ್ರೀರಾಮಪುರ, ಅಂಜನಾಪುರ, ಅರಿಗೆಪಲ್ಲಿ, ಯರ್ರಪೆಂಟ್ಲ, ವಂಗಾರ್ಲಪಲ್ಲಿ, ಚಿನ್ನೇಪಲ್ಲಿ (ಎಂ.ಕುಂಟೆ), ಮುಮ್ಮುಡಿವಾರಿಪಲ್ಲಿ, ಕುರುಬವಾಂಡ್ಲಪಲ್ಲಿ, ನಡಂಪಲ್ಲಿ, ಗುಮ್ಮವಾಂಡ್ಲ ಪಲ್ಲಿ, ಮಾಲಚಿನ್ನೇಪಲ್ಲಿ, ಚಿಕ್ಕತಿಮ್ಮನಹಳ್ಳಿ, ಟೆಂಕಾಯಿಮಾಕಲಪಲ್ಲಿ, ಮದ್ದಿರೆಡ್ಡಿಪಲ್ಲಿ, ಯಗವಪೈಪಾಳ್ಯ, ಸೋಮಾಕಲಪಲ್ಲಿ, ಕೊಂಡೋರಪಲ್ಲಿ, ಆದಿನಾರಾಯಣಪುರ, ಗೌನಿವಾರಪಲ್ಲಿ. 2014-15 ರಲ್ಲಿ ಮುಚ್ಚಿರುವ ಶಾಲೆಗಳ ಪಟ್ಟಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಪ್ಪಾರ್ಲ ಪಲ್ಲಿ, ಪಾತಕೋಟೆ, ಸಂಗಟಪಲ್ಲಿ, ಅರಿಗೇವಾರಿ ಗುಟ್ಟ, ಕುರಪ್ಪಲ್ಲಿ, ದುಗ್ಗಿನಾಯಕನಪಲ್ಲಿ. ಮರು ಪ್ರಾರಂಭಗೊಂಡಿರುವ ಶಾಲೆಗಳು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಿಂಗಪ್ಪಗಾರಿ ಪಲ್ಲಿ, ಅಡಿವಿಕೊತ್ತೂರು, ಬಾಲರೆಡ್ಡಿಪಲ್ಲಿ.