ಕರ್ನಾಟಕ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: 5 ಪಾಲಿಕೆ, 400 ವಾರ್ಡ್, ಒಬ್ಬ ಮೇಯರ್ : ಪಾಟೀಲ್ ವರದಿ ಸಲ್ಲಿಕೆ

Pinterest LinkedIn Tumblr

bbmp-4543ಬೆಂಗಳೂರು, ಜು.13-  ಬೃಹತ್ ಬೆಂಗಳೂರು ಮಹಾನಗರ  ಪಾಲಿಕೆ ಬದಲಾಗಿ  ಐದು ಮಹಾನಗರ ಪಾಲಿಕೆಗಳಾಗಿ ಮಾಡಿ  ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರುವುದು, ಪ್ರತಿ ಪಾಲಿಕೆಗೆ ಜನರಿಂದಲೇ ನೇರ ಆಯ್ಕೆ ಮಾಡುವುದು ಸೇರಿದಂತೆ ಮಹತ್ವದ ಶಿಫಾರಸ್ಸುಗಳನ್ನು

ಒಳಗೊಂಡ ವರದಿಯನ್ನು ಬಿಬಿಎಂಪಿ ಪುನಾರಚನೆ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. ತಜ್ಞರ ಸಮಿತಿ ಅಧ್ಯಕ್ಷ ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್, ಸಮಿತಿ ಸದಸ್ಯರಾದ  ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ವಿ.ಯಶ್ವವಂತ್, ವಿ.ರವಿಚಂದರ್ ಅವರು ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಅಂತಿಮ ವರದಿಯನ್ನು ಸಲ್ಲಿಸಿದರು.  ಈ ಸಂದರ್ಭದಲ್ಲಿ ಸಚಿವರಾದ ಟಿ.ಬಿ.ಜಯಚಂದ್ರ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಸ್.ಆರ್.ಪಾಟೀಲ್ ಉಪಸ್ಥಿತರಿದ್ದರು. ಮೂರು ಹಂತದ ಆಡಳಿತ ರಚನೆ ಜೊತೆಗೆ ಐದು ವರ್ಷ ಮೇಯರ್ ಅಧಿಕಾರ ಅವಧಿಗೆ ಶಿಫಾರಸು ಮಾಡಲಾಗಿದೆ.

ವಾರ್ಡ್ ಸಮಿತಿಗಳ ಸಬಲೀಕರಣ, ಆರ್ಥಿಕ ಪಾರದರ್ಶಕತೆ, ನಾಗರಿಕರಿಗೆ ಹೆಚ್ಚಿನ ಧ್ವನಿ ಕಲ್ಪಿಸಲು ಶಿಫಾರಸು ಮಾಡಲಾಗಿದೆ.  ವರದಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಜ್ಞರ ಸಮಿತಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿಯನ್ನು ಐದು ವಿಭಾಗಗಳಾಗಿ ವಿಂಗಡಿಸಲು ಶಿಫಾರಸ್ಸು ಮಾಡಿದೆ. ವರದಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.  ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ವಿಧಾನಪರಿಷತ್‌ನಲ್ಲಿ ರಚನೆಯಾಗಿರುವ ಸೆಲೆಕ್ಟ್ ಕಮಿಟಿ ಇನ್ನೂ ವರದಿ ನೀಡಿಲ್ಲ.

ಆ ಸಮಿತಿ ವರದಿ ಮತ್ತು ತಜ್ಞರ ಸಮಿತಿ ವರದಿಗಳೆರಡನ್ನೂ  ಪರಿಶೀಲಿಸಿದ ನಂತರ ಸರ್ಕಾರ ಸೂಕ್ತ ತೀರ್ಮಾನಕ್ಕೆ ಬರಲಿದೆ ಎಂದು ತಿಳಿಸಿದರು.  ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಮಾತನಾಡಿ, ತಜ್ಞರ ಸಮಿತಿ ವರದಿಯಲ್ಲಿ ಜನರಿಗೆ ಹೆಚ್ಚಿನ ಅಧಿಕಾರ ನೀಡುವ ಶಿಫಾರಸ್ಸಿನ ಜೊತೆಗೆ ಪಾಲಿಕೆ ಸದಸ್ಯರು ಜನರಿಗೆ  ಉತ್ತರದಾಯಿತ್ವವಾಗಿರಬೇಕು ಎಂದು ಉಲ್ಲೇಖಿಸಲಾಗಿದೆ. ಸ್ಥಳೀಯ ಪ್ರತಿನಿಧಿಗಳ ಸಮಿತಿಗೆ ಶಿಫಾರಸು , ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸೇರಿದಂತೆ ಮೂರು ಹಂತದ ಆಡಳಿತ ವ್ಯವಸ್ಥೆಗೆ ಶಿಫಾರಸು ಮಾಡಲಾಗಿದೆ ಎಂದರು.

Write A Comment