ಲಂಡನ್: ಕೊನೆ ಬಸ್ ಮಿಸ್ ಆಗಿ ಪೇಚಾಡಿಕೊಳ್ಳುವುದು ಜನ ಸಾಮಾನ್ಯರಿಗೆ ಮಾಮೂಲಿ ಅನುಭವ. ಆದರೆ, ಕ್ರಿಕೆಟ್ ದೇವರಿಗೆ ಇಂಥ ಅನುಭವಾಗಿದೆ ಎಂದರೆ ನೀವು ನಂಬಲೇ ಬೇಕು. ಆದರೆ, ಅವರ ಪಾಲಿಗೆ ಇದು ಅಪರೂಪದಲ್ಲಿ ಅಪರೂಪದ ಅನುಭವ.
ವಿಂಬಲ್ಡನ್ ವೀಕ್ಷಣೆಗೆ ಲಂಡನ್‌ಗೆ ಆಗಮಿಸಿರುವ ಸಚಿನ್ ಶನಿವಾರ ಗ್ರೇಟ್ ಹ್ಯಾಸ್‌ಲೇ ಆಕ್ಸ್‌ಫರ್ಡ್‌ಶಯರ್‌ಗೆ ಭೇಟಿ ನಿಡಿದ್ದರು. ಆಗ ಅವರಿಗೆ ಅಲ್ಲಿಂದ ಹೊರಡುವ ಕೊನೆಯ ಬಸ್ಸು ತಪ್ಪಿ ಹೋಯಿತು. ಇದರಿಂದ ಕಂಗೆಟ್ಟ ಸಚಿನ್ ಸಾಮಾಜಿಕ ಜಾಲತಾಣಗಳಲ್ಲಿ ಸಂಕಷ್ಟ ಹಂಚಿಕೊಂಡಿದ್ದರು.
‘ಗ್ರೇಟ್ ಹ್ಯಾಸ್‌ಲೇ ಆಕ್ಸಫರ್ಡ್‌ಶಯರ್‌ನಲ್ಲಿದ್ದೇನೆ. ಕೊನೆಯ ಬಸ್ಸು ತಪ್ಪಿಹೋಗಿದೆ. ಯಾರಾದರೂ ಲಿಫ್ಟ್ ಕೊಡ್ತೀರಾ’ ಎಂದು ಸಚಿನ್ ಟ್ವೀಟ್ ಮಾಡಿದ್ದೇ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಅಲ್ಲೇ ಇರಿ ಬಂದು ಬಿಡ್ತೀನಿ… ದೇವರಿಗೂ ಇಂಥ ಗತಿ ಬಂತಾ…?, ಛೇ ಹೀಗೆ ಬಾರದಿತ್ತು ಎಂದಿದ್ದಾರೆ.
ತುರ್ತು ಸಂದೇಶದೊಂದಿಗೆ ಬಸ್ ನಿಲ್ದಾಣದಲ್ಲಿ ಅಸಹಾಯಕನಾಗಿ ಕುಳಿತಿರುವ ಫೋಟೋವನ್ನು ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಸಚಿನ್ ಅಭಿಮಾನಿಗಳ ಅನುಕಂಪ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ವಿಟರ್‌ನಲ್ಲಿ ಅವರಿಗೆ 70 ಲಕ್ಷ ಫಾಲೋಯರ್‌ಗಳಿದ್ದು, ಅವರ ಸಂದೇಶ ಸುಮಾರು 400ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.
ಈ ಘಟನೆಗೂ ಒಂದು ದಿನ ಮೊದಲು ವಿರಾಟ್ ಕೊಹ್ಲಿ ಜತೆ ಸಚಿನ್ ವಿಂಬಲ್ಡನ್ ಪಂದ್ಯ ವೀಕ್ಷಿಸಿದ್ದರು.
