ಮಂಗಳೂರು, ಜು.11: ಕೇವಲ ಹಸಿವಿನಿಂದ ಇದ್ದರೆ ಅದು ಉಪವಾಸವಾಗುವುದಿಲ್ಲ. ಆರಾಧನೆಯೊಂದಿಗೆ ಉಪವಾಸಿಗನ ಹೃದಯ ಶುದ್ಧಿಯೂ ಇರಬೇಕಾಗಿದೆ. ಅಂತಹ ಉಪವಾಸ ಮಾತ್ರ ಅಲ್ಲಾಹನಿಗೆ ಸ್ವೀಕಾರ್ಹವಾಗಲಿದೆ ಎಂದು ನಗರದ ಪೌಝಿಯಾ ಜುಮಾ ಮಸ್ಜಿದ್‌ನ ಖತೀಬ್ ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಕಾರದೊಂದಿಗೆ ಶುಕ್ರವಾರ ಟಿಆರ್‌ಎಫ್ ಸಭಾಂಗಣದಲ್ಲಿ ಹಮ್ಮಿಕೊಂಡ `ರಮಝಾನ್ ಸ್ನೇಹಕೂಟ’ದಲ್ಲಿ `ಬ್ಯಾರಿ ಸಂಸ್ಕ್ಕೃತಿ ಮತ್ತು ರಮಝಾನ್ ವ್ರತ’ ವಿಷಯದಲ್ಲಿ ಮಾತನಾಡಿದರು.
ಬ್ಯಾರಿ ಎಂಬುದು ಇಸ್ಲಾಮಿನಿಂದ ಪ್ರತ್ಯೇಕವಾದುದಲ್ಲ. ಇಸ್ಲಾಂ ಮಾತೃಭಾಷೆಯನ್ನು ಪ್ರೀತಿಸಲು ಕಲಿಸುತ್ತದೆ.ಹಾಗಾಗಿ ಪ್ರತಿಯೊಬ್ಬ ಬ್ಯಾರಿ ಮುಸಲ್ಮಾನ ಅಕ್ರಮ,ಅನೀತಿಯಿಂದ ದೂರವಿರಬೇಕು ಮತ್ತು ಮಾತೃಭಾಷೆಯ ಬಗ್ಗೆ ಅಭಿಮಾನ ಪಡಬೇಕು ಎಂದು ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ಕರೆ ನೀಡಿದರು.
ಮುಡಾ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಮುಮ್ತಾಜ್ ಅಲಿ,ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಹಿತವಚನ ನೀಡಿದರು. ಟಿಆರ್‌ಎಫ್ ಅಧ್ಯಕ್ಷ ರಿಯಾರಜ್ ಕಣ್ಣೂರು ಉಪಸ್ಥಿತರಿದ್ದರು.
ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯ ಟಿ.ಎ. ಆಲಿಯಬ್ಬ ವಂದಿಸಿದರು. ಟಿಆರ್‌ಎಫ್ ಗೌರವ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.


















