ನವದೆಹಲಿ: ತಾನೊಬ್ಬ ಅನಿವಾಸಿ ಭಾರತೀಯ ವೈದ್ಯನೆಂದು ಹೇಳಿಕೊಂಡು ವಧು ಬೇಕಾಗಿದ್ದಾಳೆಂಬ ಜಾಹೀರಾತು ನೀಡಿದ್ದ ವಂಚಕನೊಬ್ಬ ಅನಿವಾಸಿ ಭಾರತೀಯ ವೈದ್ಯನ ಜೊತೆ ವಿವಾಹವಾಗಬಯಸಿದ್ದ ವೈದ್ಯೆಯೊಬ್ಬರಿಗೆ ಬರೋಬ್ಬರಿ 48 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ.
ಮೋಹನ್ ಎಂಬ ಹೆಸರಿನಲ್ಲಿ ಈ ಜಾಹೀರಾತು ಹಾಕಿದ್ದು, ವಿಶ್ವ ಸಂಸ್ಥೆಯ ಕಾರ್ಯಕ್ರಮವೊಂದರ ಅನುಸಾರ ತಾನು ಇರಾಕಿನಲ್ಲಿರುವುದಾಗಿ ಆತ ಹೇಳಿಕೊಂಡಿದ್ದನೆನ್ನಲಾಗಿದೆ. ಇದನ್ನು ನೋಡಿದ ವೈದ್ಯೆ ಆನ್ ಲೈನ್ ಮೂಲಕ ಆತನ ಸಂಪರ್ಕ ಮಾಡಿದ್ದು, ಇವರಿಬ್ಬರು ವೈಬರ್ ನಲ್ಲಿ ಪರಸ್ಪರ ಸಂಭಾಷಣೆ ನಡೆಸುತ್ತಿದ್ದರೆನ್ನಲಾಗಿದೆ.
ವೈದ್ಯೆಗೆ ನಂಬಿಕೆ ಹುಟ್ಟಿಸುವ ಸಲುವಾಗಿ ಆತ ಕೆಲವೊಮ್ಮೆ ಅಂತರಾಷ್ಟ್ರೀಯ ದೂರವಾಣಿ ಕರೆಯನ್ನೂ ಮಾಡುತ್ತಿದ್ದು, ವೈದ್ಯೆಯನ್ನು ಸಂಪೂರ್ಣವಾಗಿ ಮರಳು ಮಾಡಿದ್ದಾನೆ. ಬಳಿಕ ತನಗೆ ಇರಾಕಿನಲ್ಲಿ ಹಲವು ಗಿಫ್ಟ್ ಹಾಗೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಲಭಿಸಿದ್ದು, ಕೋಟ್ಯಾಂತರ ರೂ. ಬೆಲೆ ಬಾಳುವ ಇವುಗಳನ್ನು ಭಾರತಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದ್ದಾನೆ.
ಕೆಲ ದಿನಗಳ ನಂತರ ವೈದ್ಯೆಗೆ ಕರೆಯೊಂದು ಬಂದಿದ್ದು ಕಸ್ಟಮ್ ಏಜೆಂಟ್ ಕಛೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾರೆ. ತಮಗೆ ಬಂದ ಪಾರ್ಸೆಲ್ ಬಿಡಿಸಿಕೊಳ್ಳಲು ಇಂತಿಷ್ಟು ಹಣ ಕಟ್ಟಬೇಕೆಂದು ಹೇಳಿದ್ದಾರೆ. ಅದರಂತೆ ವೈದ್ಯೆ ಹಣ ಪಾವತಿಸಿದ್ದು, ಹೀಗೆ ಹಲವು ಬಾರಿ ಆಕೆಯಿಂದ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾರೆ. ಹೀಗೆ ಒಟ್ಟು 48 ಲಕ್ಷ ರೂ.ಗಳನ್ನು ವಸೂಲಿ ಮಾಡಿಕೊಂಡ ಬಳಿಕ ತಮ್ಮ ಮೊಬೈಲ್ ಸ್ವಿಚ್ಚಾಫ್ ಮಾಡಿಕೊಂಡಿದ್ದಾರೆ. ಆಗ ವೈದ್ಯೆಗೆ ಅನುಮಾನ ಬಂದು ಕಸ್ಟಮ್ಸ್ ಕಛೇರಿಗೆ ತೆರಳಿ ವಿಚಾರಿಸಿದಾಗ ಆಕೆಯ ಹೆಸರಿಗೆ ಯಾವುದೇ ಪಾರ್ಸೆಲ್ ಬಂದಿಲ್ಲವೆಂದು ಹೇಳಲಾಗಿದೆ. ಮೋಸ ಹೋಗಿದ್ದರ ಅರಿವಾಗಿರುವ ವೈದ್ಯೆ ಈಗ ಪೊಲೀಸರ ಮೊರೆ ಹೊಕ್ಕಿದ್ದಾರೆ.
