ಮಂಗಳೂರು,ಜು.7: ಜನರಿಗೆ ಕಾಲಕಾಲಕ್ಕೆ ಸೂಕ್ತವಾದ ಮಾಹಿತಿಯನ್ನು ನೀಡುವುದರಿಂದ ಅವರಿಗೆ ಶಕ್ತಿ ನೀಡಿದಂತಾಗುತ್ತದೆ. ಸಮಾಜದಲ್ಲಿ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗದ ದಮನಿತರ, ಶೋಷಿತರ ಸೇವೆಗಾಗಿ ಶ್ರಮಿಸಬೇಕಾಗಿದೆ ಎಂದು ಜಾಗತಿಕ ಕ್ರಿಶ್ಚಿಯನ್ ಕಮ್ಯೂನಿಕೇಶನ್ ಸಂಘಟನೆಗಳ ಅಧ್ಯಕ್ಷ ರೆ.ಡಾ.ಸ್ಯಾಮ್ಯುವೆಲ್. ಡಬ್ಲು ಮೆಸ್ಹಾಕ್ ತಿಳಿಸಿದ್ದಾರೆ.
ಅವರು ನಗರದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ವತಿಯಿಂದ ಹಮ್ಮಿಕೊಂಡ ಕಾಸೆಸ್ ದಿನಾಚರಣೆ ಹಾಗೂ ಕಾಸೆಸ್ ಸಂಸ್ಥಾಪಕ ದಿ.ಡಾ.ಬಿಷಪ್ ಜತ್ತನ್ನ ಅವರ ಜನ್ಮದಿನಾಚರಣೆಯ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಒಂದು ಕಾಲದಲ್ಲಿ ಜಾಗತಿಕವಾಗಿ ಎಲ್ಲಾ ವಿಚಾರಗಳು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಪೌರಾತ್ಯ ರಾಷ್ಟ್ರಗಳ ಕಡೆಗೆ ಹರಿದು ಬರುತಿತ್ತು. ಪ್ರಸಕ್ತ ಜಾಗತಿಕವಾಗಿ ಭಾರತ ಸೇರಿದಂತೆ ಪೂರ್ವದ ರಾಷ್ಟ್ರಗಳು ಪಶ್ಚಿಮದ ರಾಷ್ಟ್ರಗಳನ್ನು ಮುನ್ನಡೆಸುವ ಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ಬಹಳ ಕಾಲದ ಹಿಂದೆಯೇ ದಿವಂಗತ ಡಾ.ಬಿಷಪ್ ಜತ್ತನ್ನರಂತಹ ಮಹನೀಯರು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದರು ಎಂದು ಬಿಷಪ್ ಜತ್ತನ್ನರ ಸೇವೆಯನ್ನು ಮೆಸ್ಹಾಕ್ ಸ್ಮರಿಸಿದರು.
ಜಾಗತಿಕ ಕ್ರಿಶ್ಚಿಯನ್ ಕಮ್ಯೂನಿಕೇಶನ್ ಸಂಘಟನೆಗಳು ಜಗತ್ತಿನ ವಿವಿಧ ದೇಶಗಳಲ್ಲಿ ಜ್ಞಾನ ಪ್ರಸರಣ ಕಾರ್ಯಕ್ರಮಗಳ ಜೊತೆ ಶೋಷಿತರ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮೆಸ್ಹಾಕ್ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕೆಟಿಸಿಯ ಪ್ರಾಂಶುಪಾಲ ಹಾಗೂ ಕಾಸೆಸ್ ಕಾರ್ಯದರ್ಶಿ ರೆ.ಡಾ.ಹನಿ ಕಬ್ರಾಲ್ ಕಾಸಸ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಮಾರಂಭದಲ್ಲಿ ಹಂಪಿ ವಿಶ್ವ ವಿದ್ಯಾನಿಲಯದ ಮೂಲಕ ಎಂಫಿಲ್ ಪದವಿ ಪಡೆದ ವೀಣಾ ಪ್ರಸಾದ್ ಕಜೆ,ವಿನೋವಾ ಸೆಂಡ್ರಾ ಸಿಕ್ವೇರಾ,ಜಯಲಕ್ಷ್ಮೀ, ರಂಜಿತಾರವರಿಗೆ ಪ್ರಮಾಣ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ರೆ.ಕ್ರಿಸ್ಟೋಫರ್ ವಿ.ಜಾರ್ಜ್, ರೆ.ಬೈಲಾ ಚೆನ್ನಕೇಶವಲು, ಪ್ರೊ.ಎ.ವಿ.ನಾವುಡ, ಕಾಸೆಸ್ ಕಾರ್ಯದರ್ಶಿ ರೆ.ಡಾ.ಅನಿಲ್ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ.ಸಂದೀಪ್ ಥಿಯೋಫಿಲ್ ಮೊದಲಾದವರು ಉಪಸ್ಥಿತರಿದ್ದರು.