ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಶಶಾಂಕ್‌ರಾಜ್ ನಿರ್ದೇಶನದ ಐದನೆ ಚಿತ್ರವಾದ ಗೂಳಿಹಟ್ಟಿ ಚಿತ್ರ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವಂತಹ ಹಲವು ಮುಖಗಳ ಅನಾವರಣ ಈ ಚಿತ್ರದಲ್ಲಿ ತೋರಿಸುವ ಮೂಲಕ ತಂದೆ-ತಾಯಂದಿರ ಜವಾಬ್ದಾರಿ ಹಾಗೂ ಮಕ್ಕಳ ಹಾದಿ ಯಾವ ರೀತಿ ಸಾಗಬೇಕು ಎಂಬುದನ್ನು ಈ ಚಿತ್ರದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರಂತೆ.
ಗೂಳಿಹಟ್ಟಿ ಎಂಬ ಪುಟ್ಟ ಗ್ರಾಮದಿಂದ ಬೆಂಗಳೂರಿಗೆ ಬರುವ ಐವರು ಹುಡುಗರು ಹೊಸ ಜಾಗದಲ್ಲಿ ಯಾವ ರೀತಿಯ ಸಂದರ್ಭಗಳನ್ನು ಎದುರಿಸಿದರು ನಂತರ ಅವರ ಜೀವನ ಯಾವ ರೀತಿಯ ಟರ್ನ್ ಪಡೆಯಿತು ಎಂದು ಹೇಳುವ ಚಿತ್ರವೇ ಗೂಳಿಹಟ್ಟಿ. ಈ ಹಿಂದೆ ಯುಗ ಯುಗಗಳೇ ಸಾಗಲಿ, ಮಾವಳ್ಳಿ ಮಿಲ್ಟ್ರಿ ಹೋಟೆಲ್, ಉಡ ಚಿತ್ರಗಳನ್ನ ನಿರ್ದೇಶಿಸಿದ್ದ ಶಶಾಂಕ್‌ರಾಜ್ ಈ ಚಿತ್ರದ ನಿರ್ದೇಶಕರು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಹಳ್ಳಿಮೇಷ್ಟ್ರು ಚಿತ್ರದಿಂದ ಹಠವಾದಿ ಚಿತ್ರದವರೆಗೆ ಕೆಲಸಮಾಡಿರುವ ಶಶಾಂಕ್‌ರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಂಗಾಯಣ, ನೀನಾಸಂ ಕೇಂದ್ರಗಳಲ್ಲಿ ತರಬೇತಿ ಪಡೆದು ಕಲಾವಿದನಾಗಬೇಕೆಂಬ ಹಂಬಲ ಹೊಂದಿದ್ದ ಭಾರ್ಗವ್ ಈಚಿತ್ರದ ನಿರ್ಮಾಪಕರು.
ಒಬ್ಬ ಖಡಕ ಪೊಲೀಸ್ ಅಧಿಕಾರಿಯಾಗಿ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಕಲಾವಿದನಾಗಬೇಕೆಂಬ ತನ್ನ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಪವನ್‌ಸೂರ್ಯ. ಅರುಣ್‌ಭಗತ್, ಅಪ್ಪು ವೆಂಕಟೇಶ್ ರಾಘವ್ ನಾಗ್, ಇಂಡಿಯನ್ ಮಹೇಶ್ ಗೂಳಿಹಟ್ಟಿ ಚಿತ್ರದ ಐವರು ಗೂಳಿಗಳಾಗಿ ನಟಿಸಿದ್ದಾರೆ. ನಟಿಯರಾದ ತೇಜಸ್ವಿನಿಗೌಡ ಹಾಗೂ ಮಮತಾ ರಾಹುತ್ ನಾಯಕಿಯರಾಗಿದ್ದಾರೆ. ಗೂಳಿಹಟ್ಟಿ ಎಂಬ ಪುಟ್ಟ ಗ್ರಾಮದಿಂದ ಬೆಂಗಳೂರು ಮಹಾನಗರಕ್ಕೆ ಬರುವ ಈ ಹುಡುಗರು ಅಕಸ್ಮಾತ್ತಾಗಿ ಅಂಡರ್‌ವರ್ಲ್ಢ್ ಜಾಲವೊಂದಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಅವರು ಅಲ್ಲಿಂದ ಹೇಗೆ ತಪ್ಪಿಸಿಕೊಂಡು ಬಂದರು ಎನ್ನುವುದೇ ಈ ಚಿತ್ರದ ಹೈಲೈಟ್. ಈ ಚಿತ್ರದಲ್ಲಿ ಹೊಸ ಹುಡುಗರ ಜೊತೆ ಹಲವಾರು ಹಿರಿಯ ಕಲಾವಿದರೂ ನಟಿಸಿರುವುದು ವಿಶೇಷ. ರಂಗಾಯಣ ರಘು,
ದೊಡ್ಡಣ್ಣ, ಅವಿನಾಶ್, ಸುಧಾ ಬೆಳವಾಡಿ, ಎಂ.ಎನ್.ಲಕ್ಷ್ಮೀದೇವಿ, ಶರತ್ ಲೋಹಿತಾಶ್ವ, ಆದಿಲೋಕೇಶ್, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಇನ್ನೂ ಕೆಲ ನಟ, ನಟಿಯರು ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿ ನಟಿಸಿದ್ದಾರೆ. ಚಿತ್ರದ 6 ಹಾಡುಗಳಿಗೆ ಕಿರಿಯ ವಯಸ್ಸಿನ ಸಂಗೀತ ನಿರ್ದೇಶಕ ಶ್ರೀಮಂಜು ಸಂಗೀತ ಸಂಯೋಜನೆ ಮಾಡಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ವಿಷೇಶತೆಗಳ ಬಗ್ಗೆ ನಿರ್ದೇಶಕ ಶಶಾಂಕ್‌ರಾಜ್ ಮಾತನಾಡಿ, ಹಲವಾರು ಆಂಶಗಳನ್ನು ಹೇಳಿಕೊಂಡರು. ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಚಿತ್ರದ ಧ್ವನಿಸುರುಳಿಗಳನ್ನು ಬಿಡುಗಡೆಗೊಳಿಸಿ ಗೂಳಿಹಟ್ಟಿಯ ವಿಶೇಷತೆಗಳ ಬಗ್ಗೆ ಜನರಿಗೆ ಹೇಳಿ
ಚಿತ್ರದ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಕೂಡ ಕಳೆದ ಒಂದು ತಿಂಗಳಿಂದ ನಡೆಸಲಾಗಿದೆ. ಎಂದು ಹೇಳಿಕೊಂಡರು. ಕಾಳಿಮಠದ ಕಾಳಿಸ್ವಾಮಿ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಮೇಲುಕೋಟೆ ಅಲ್ಲದೆ ರಾಣೆಬೆನ್ನೂರಿನ ಮೈಲಾರ ಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಸೇರುವ ಲಕ್ಷಾಂತರ ಜನರನ್ನು ಹೆಲಿಕ್ಯಾಮ್ ಮೂಲಕ ಸೆರೆಹಿಡಿದಿರುವುದು ಸೇರಿದಂತೆ ರಾಜ್ಯದ ಹಲವಾರು ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಈ ಚಿತ್ರವು ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಈ ವಾರ ಬಿಡುಗಡೆಗೊಳ್ಳಲಿದೆ.