ಬಹಳ ಮಂದಿ ಬಹಳ ಕೆಲಸಗಳನ್ನು ಮಾಡುತ್ತಾರೆ. ಕೆಲಸಗಳಲ್ಲಿ ನೈಪುಣ್ಯ ಸಾಧಿಸಿದವರಿಗೆ ದೊಡ್ಡ ದೊಡ್ಡ ಅವಕಾಶಗಳು ಲಭಿಸುತ್ತವೆ. ನೋಡನೋಡುತ್ತಲೇ ಬದುಕಿನಲ್ಲಿ ಬೆಳವಣಿಗೆಯ ಏಣಿ ಏರಿ, ಖ್ಯಾತಿ ಗಿಟ್ಟಿಸುತ್ತಾರೆ.. ಬೇರೆಯವರಿಗೆ ಮಾದರಿಯೂ ಆಗಿಬಿಡುತ್ತಾರೆ! ಮಾಹಿರಾ ಖಾನ್, ಇದೀಗ ಆ ಹಂತ ತಲುಪಿರುವವರಂತೆ ಆತ್ಮವಿಶ್ವಾಸದಿಂದ ಮಾತನಾಡುತ್ತಿರುವವರು. ಶಾರುಖ್ ಖಾನ್ ನಾಯಕತ್ವದ ‘ರಯೀಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮಹದವಕಾಶ ಪಡೆಯುವಷ್ಟು ಪ್ರಭಾವಿ ಪ್ರತಿಭೆ ಈ ಪಾಕಿಸ್ತಾನಿ ಬೆಡಗಿ, ರಂಗಭೂಮಿ ಮತ್ತು ಕಿರುತೆರೆ ಹಾದಿ ಸವೆಸಿ, ಸದ್ಯ ಬಾಲಿವುಡ್ ಮೂಲಕ ವಿಶ್ವದ ಗಮನ ಸೆಳೆಯಲು ಕಾತುರರಾಗಿದ್ದಾರೆ. ಅದ್ಸರಿ, ಮಾಹಿರಾ ಅದ್ಯಾವ ಅರ್ಥದಲ್ಲಿ ನೈಪುಣ್ಯ ಸಾಧಿಸಿದ್ದಾರೆ?
ಈ ಪ್ರಶ್ನೆಗೆ ತಕ್ಷಣಕ್ಕೆ ಕೊಡಬಹುದಾದ ಉತ್ತರ, ಮಾಹಿರಾ ಎಂಬ ಪದದ ಅರ್ಥವೇ ‘ನೈಪುಣ್ಯ’! ಹೆಸರಿನ ಅರ್ಥದಂತೆ ವ್ಯಕ್ತಿತ್ವವೂ ಇರುತ್ತಾ? ಮಾಹಿರಾ ಮಾತುಗಳಲ್ಲಿ ಆ ಮುನ್ಸೂಚನೆ ಎದ್ದು ಕಾಣಿಸುತ್ತದೆ. ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಪಾಕ್ ಚಿತ್ರ ‘ಬೋಲ್’ನಲ್ಲಿ ಉತ್ತಮ ಅಭಿನಯ ನೀಡಿದ 30ರ ಹರೆಯದ ಮಾಹಿರಾ, ಈಗ ‘ಬಿನ್ ರೋಯೆ’, ‘ಹೋ ಮನ್ ಜಹ್ಞಾಂ’ ಅನ್ನುವ ಮತ್ತೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇವು ಬಿಡುಗಡೆ ಘಟ್ಟಕ್ಕೆ ಬಂದಿರುವಾಗಲೇ ರಾಹುಲ್ ಢೊಲಾಕಿಯಾ ನಿರ್ದೇಶನದ ‘ರಯೀಸ್’ ಶೂಟಿಂಗ್ ಮುಗಿದಿದೆ. ಮಾಹಿರಾಗೆ ಏಕಕಾಲಕ್ಕೆ ಅಲ್ಲೂ ಸಲ್ಲುವ, ಇಲ್ಲೂ ಸಲ್ಲುವ ಸನ್ನಾಹ.
ಶಾರುಖ್ ಜತೆ ಬಾಲಿವುಡ್ಗೆ ಪದಾರ್ಪಣೆ ಮಾಡಿದ ನಾಯಕಿಯರೆಲ್ಲ ಬಹುಕಾಲ ನೆಲೆ ನಿಲ್ಲುತ್ತಾರೆ ಅನ್ನುವುದನ್ನು ಇತಿಹಾಸವೇ ಹೇಳುತ್ತೆ. ಮಾಹಿರಾಗೂ ಆ ಅದೃಷ್ಟ ಖುಲಾಯಿಸುವ ಲಕ್ಷಣಗಳಿವೆ. ಈ ಅದೃಷ್ಟ ತಮಗೂ ಒಲಿಯಲಿ ಎನ್ನುವಾಸೆಯಿಂದ ವಿಧೇಯ ವಿದ್ಯಾರ್ಥಿನಿಯಂತೆ ಪಾತ್ರಕ್ಕೆ ಅರ್ಪಿಸಿಕೊಂಡಿದ್ದರಂತೆ ಅವರು. ‘ನಾನು ಸ್ಪಂಜಿನ ಮನಸ್ಥಿತಿಯಲ್ಲಿದ್ದೆ. ಎಲ್ಲ ಅನುಭವಗಳನ್ನು ಹೀರಿಕೊಳ್ಳುವುದು, ಆ ಮೂಲಕ ಸಾಧ್ಯವಾಷ್ಟು ಕಲಿಯುವುದು ನನ್ನ ಉದ್ದೇಶವಾಗಿತ್ತು. ಶಾರುಖ್ ಅವರಿಗೆ ಸರಿ ಜೋಡಿಯಾಗಿ ಅಭಿನಯಿಸೋದು ನನ್ನಂಥ ಹೊಸಬಳಿಗೆ ಬಹಳ ಕಷ್ಟದ ಮಾತು. ಆದರೂ ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ’ ಎಂಬುದು ಮಾಹಿರಾ ಹೇಳಿಕೆ.
ಪಾಕಿಸ್ತಾನಿ ಸಿನಿಮಾಗಳಲ್ಲಿ ನಟಿಸುವಾಗ ಕಥೆ, ಚಿತ್ರಕಥೆ, ಸಂಭಾಷಣೆ ವಿಚಾರವಾಗಿ ಆಪ್ತವಾಗಿಯೇ ಸಲಹೆ ಸೂಚನೆ ಕೊಡುತ್ತಿದ್ದ ಅವರು, ‘ರಯೀಸ್’ ವಿಚಾರದಲ್ಲಿ ತುಟಿ ಪಿಟಕ್ ಅಂದಿಲ್ಲ. ಕಾರಣ ಗೊತ್ತಾ? ‘ಅಲ್ಲೂ ನೀನು ಈ ಮೂಗು ತೂರಿಸುವ ಬುದ್ಧಿ ತೋರಿಸಿಬಿಟ್ಟೀಯಾ ಆಮೇಲೆ…’ ಎಂದು ಗೆಳೆಯರು ಕೊಟ್ಟ ಎಚ್ಚರಿಕೆ ಸಂದೇಶ!
