ಮಂಗಳೂರು, ಜೂ. 20: ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಬಿರುಸು ಪಡೆದುಕೊಂಡಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಸಿಡಿಲಿನ ಆಘಾತಕ್ಕೆ ಓರ್ವ ಬಲಿಯಾಗಿದ್ದರೆ, ಹಲವೆಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಹಲವು ತೆಂಗುಗಳು ಸಮುದ್ರಪಾಲಾಗಿವೆ. ಇದಲ್ಲದೆ ಮುಲ್ಕಿ, ಪುತ್ತೂರು, ಬೆಳ್ತಂಗಡಿ ಮುಂತಾದ ಕಡೆಗಳಲ್ಲಿ ವ್ಯಾಪಕ ಮಳೆಹಾನಿ ವರದಿಯಾಗಿದೆ.
ಕಿನ್ನಿಗೋಳಿ:
ಶುಕ್ರವಾರ ಮುಂಜಾನೆ ಭಾರೀ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕೆರೆಕಾಡು ಪರಿಸರದಲ್ಲಿ ಭಾರಿ ಅನಾಹುತ ಉಂಟಾಗಿದೆ. 25ಕ್ಕೂ ಅಧಿಕ ಮನೆಗಳಿಗೆ ಬಿರುಗಾಳಿಯಿಂದ ಹಾನಿಯಾಗಿದ್ದು, ತೋಟಗಳಲ್ಲೂ ಅಪಾರ ನಷ್ಟ ಉಂಟಾಗಿದೆ. ಹಲವಾರು ಮರಗಳು ಧರೆಗೆ ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮುಂಜಾನೆ ಸುಮಾರು 4.20ರ ಹೊತ್ತಿಗೆ ಬಿರುಗಾಳಿಯೊಂದಿಗೆ ಮಳೆ ಸುರಿದಿದ್ದು, ವಿಜಯಲಕ್ಷ್ಮೀ, ಶೀನ ಮುಂಡಾಳ, ಶಂಕರ, ರವಿ ಆಚಾರ್ಯ, ಬಾಲಕಷ್ಣ, ಶೀನ ಮೇಸ್ತ್ರಿ, ಶಿವರಾಮ, ರಾಜೇಂದ್ರ ಆಚಾರ್ಯ, ಜಯಂತಿ ಗೋಪಿನಾಥ್, ಗಣೇಶ್ ಶೆಟ್ಟಿಗಾರ್ ದೊಂಬಯ್ಯ ಶೆಟ್ಟಿಗಾರ್, ಹರೀಶ್ ಶೆಟ್ಟಿಗಾರ್ ಮತ್ತಿತರರ ಮನೆಗಳ ಹೆಂಚು, ಸಿಮೆಂಟು ಶೀಟುಗಳು ಹಾರಿವೆ. ಶೀನ ಮುಗೇರರ ದನದ ಕೊಟ್ಟಿಗೆ, ಹಲವರ ಹಟ್ಟಿಗಳಿಗೆ ಹಾನಿಯಾಗಿದೆ.
ಕೆಲವು ಮನೆಗಳ ಸಿಮೆಂಟ್ ಶೀಟುಗಳು ಅದೆಷ್ಟೋ ದೂರಕ್ಕೆ ಹಾರಿ ಹೋಗಿಬಿದ್ದಿದ್ದರೆ, ಕೆಲವರ ಶೀಟುಗಳು ಕಾಣೆಯೇ ಆಗಿವೆ. ಕೆಲವರ ಶೀಟು ಪುಡಿಪುಡಿಯಾಗಿದೆ. ಪಡು ಪಣಂಬೂರು ಗ್ರಾ.ಪಂ. ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕುಮುದ ಅವರ ಬಾಡಿಗೆ ಮನೆಯಲ್ಲಿದ್ದ ಹರೀಶ್ ಶೆಟ್ಟಿಗಾರ್ ಅವರ ಮನೆಗೆ ಮರ ಬಿದ್ದು ಮನೆಯವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಗ್ರಾಮಕರಣಿಕ ವಿ ವೆಂಕಟೇಶ್, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ಹಾಗೂ ಜನ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕೊಕ್ಕಡ: ಸಿಡಿಲಿನ ಆಘಾತಕ್ಕೆ ವ್ಯಕ್ತಿ ಬಲಿ
ಕಳೆಂಜ ಗ್ರಾಮದ ಕಾಯರ್ತಡ್ಕ ಮಣ್ಣಗುಂಡಿ ನಿವಾಸಿ ದಿ.ಜತ್ತನ್ನ ಗೌಡರ ಮಗ ಕಷಿಕ ಅಣ್ಣು ಗೌಡ (50) ಶುಕ್ರವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಮನೆ ಸಮೀಪದ ಕೊಟ್ಟಿಗೆಯ ಹತ್ತಿರ ಅಡಕೆ ತೋಟದ ಕೆಲಸಕ್ಕೆಂದು ಪರಿಕರಗಳನ್ನು ಸಿದ್ಧ್ದಗೊಳಿಸುತ್ತಿದ್ದಾಗ ಸಿಡಿಲು ಬಡಿದಿದೆ. ಕುಸಿದು ಬಿದ್ದ ಗೌಡರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪಲ ಸಿಗಲಿಲ್ಲ. ಮನೆ ಸಮೀಪದ ತೋಟದ ತೆಂಗು ಮತ್ತು ಅಡಕೆ ಮರಗಳಿಗೂ ಸಿಡಿಲು ಬಡಿದಿದ್ದು, ಸಿಡಿಲಾಘಾತಕ್ಕೆ ಮನೆಯ ಗೋಡೆಯೂ ಬಿರುಕು ಬಿಟ್ಟಿದೆ, ವಿದ್ಯುತ್ ಲೈನ್ ಸುಟ್ಟು ಕರಕಲಾಗಿದೆ.
ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಸ್ಥಳಕ್ಕೆ ಕೊಕ್ಕಡ ಕಂದಾಯ ನಿರೀಕ್ಷಕ ವಿಜಯ ವಿಕ್ರಮ, ಗ್ರಾಮಕರಣಿಕ ರೂಪೇಶ್, ನೆಲ್ಯಾಡಿ ಪೋಲೀಸ್ ಹೊರಠಾಣೆಯ ದೀಪಕ್, ಮಂಜುನಾಥ್ ಭೇಟಿ ನೀಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು: ಸಿಡಿಲಿನಿಂದ ಪಂಪ್‌ಶೆಡ್‌ಗೆ ಹಾನಿ
ಪುತ್ತೂರು ತಾಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಆರಂಭಗೊಂಡ ಮಳೆ ಶುಕ್ರವಾರ ಇಡೀ ದಿನ ನಿರಂತರವಾಗಿ ಸುರಿದಿದೆ. ಪುತ್ತೂರು ತಾಲೂಕು ಕೇಂದ್ರದಲ್ಲಿ ಗುರುವಾರ 11 ಮಿ.ಮೀ. ಮಳೆಯಾಗಿದ್ದರೆ, ಶುಕ್ರವಾರ 41 ಮಿ.ಮೀ. ಮಳೆ ದಾಖಲಾಗಿದೆ. ಆರ್ಯಾಪು ಗ್ರಾಮದ ಸಂಟ್ಯಾರು ಸಮೀಪ ಸುಂದರವನ ನಿವಾಸಿ ಆರ್.ಸುಬ್ಬರಾವ್ ಎಂಬವರಿಗೆ ಸೇರಿದ ಪಂಪ್‌ಶೆಡ್‌ಗೆ ಸಿಡಿಲು ಬಡಿದಿದೆ. ಇದರಿಂದ ಪಂಪ್ ಶೆಡ್, ಅದರೊಳಗಿದ್ದ ಪಂಪ್‌ಸೆಟ್ ಹಾಗೂ ವಯರಿಂಗ್‌ಗೆ ಹಾನಿಯಾಗಿದ್ದು, ಸುಮಾರು 50 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.
ಬಂಟ್ವಾಳ : ತುಂಬಿ ಹರಿಯುತ್ತಿದೆ ನೇತ್ರಾವತಿ
ಬಂಟ್ವಾಳ ತಾಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಭಾರೀ ಗಾಳಿ ಮಳೆಯಾಗಿದ್ದು, ಶುಕ್ರವಾರವೂ ಮಳೆಯ ಆರ್ಭಟ ಜೋರಾಗಿತ್ತು. ವ್ಯಾಪಕ ಮಳೆಯಿಂದ ಕಳೆದ ಹಲವು ತಿಂಗಳುಗಳಿಂದ ಬತ್ತಿ ಹೋಗಿದ್ದ ನೇತ್ರಾವತಿ ನದಿ ತುಂಬಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸಿದೆ. ಯಾವುದೇ ಮಳೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಸುಬ್ರಹ್ಮಣ್ಯ: ಧಾರಾಕಾರ ಮಳೆ
ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಮುಂಜಾನೆಯಿಂದಲೇ ನಿರಂತರ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಗುತ್ತಿಗಾರು, ಕುಲ್ಕುಂದ, ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಮಡಪ್ಪಾಡಿ, ಐನಕಿದು, ಕಲ್ಮಕಾರು ಮುಂತಾದೆಡೆ ದಿನಪೂರ್ತಿ ಮಳೆಯಾಗಿದೆ. ನಿರಂತರ ಮಳೆಗೆ ಗುಡ್ಡದ ಮೇಲಿನ ನೀರೆಲ್ಲಾ ರಸ್ತೆಗೆ ಹರಿದು ಬಂದುದರಿಂದ ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.













