ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ನಿಕ್ಕಿ ಹಾಲೇ ಅವರು ಗವರ್ನರ್ ಆಗಿರುವ ಅಮೆರಿಕದ ದಕ್ಷಿಣ ಕರೋಲಿನಾದ ಚಾರ್ಲ್ಸ್ಟನ್ ನಗರದ ಚಾರಿತ್ರಿಕ ಕರಿಯರ ಚರ್ಚ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುರುವಾರ ನಡೆಸಿದ ಯದ್ವಾತದ್ವ ಗುಂಡಿನ ದಾಳಿಗೆ ಕನಿಷ್ಠ 9 ಜನ ಬಲಿಯಾಗಿದ್ದಾರೆ.
ಎಂಟು ಮಂದಿ ಚರ್ಚ್ ಒಳಗೇ ಮೃತರಾಗಿದ್ದರೆ, ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.ಪೊಲೀಸರು ಶಂಕಿತ ಹಂತಕನಿಗಾಗಿ ಶೋಧ ನಡೆಸುತ್ತಿದ್ದಾರೆ. ‘ನಾವು ದಾಳಿಕೋರನ ಬಗ್ಗೆ ಇನ್ನೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಇನ್ನೂ ಮಾಹಿತಿಗಳು ಲಭಿಸಬೇಕಾಗಿದೆ’ ಎಮದು ಚಾರ್ಲ್ಸ್ಟನ್ ಮೇಯರ್ ಜೋ ರಿಲೇ ಹೇಳಿದರು.‘ಇದೊಂದು ಹೃದಯವಿದ್ರಾವಕ ದುರಂತ. ಪ್ರಾರ್ಥನೆಗಾಗಿ ಬಂದಿದ್ದ ಜನರ ಮೇಲೆೆ ದುಷ್ಟ ವ್ಯಕ್ತಿ ದಾಳಿ ನಡೆಸಿ ಜೀವ ತೆಗೆದಿದ್ದಾನೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಬುಧವಾರ ರಾತ್ರಿ 9 ಗಂಟೆಗೆ ಗುಂಡಿನ ದಾಳಿ ನಡೆದಾಗ ಚರ್ಚ್ನಲ್ಲಿ ಸಭೆ ನಡೆಯುತ್ತಿತ್ತು. ’ಮತಿಗೇಡಿಗಳಿಂದ ನಡೆದ ಈ ದಾಳಿಗೆ ಬಲಿಯಾದವರು ಮತ್ತು ಅವರ ಕುಟುಂಬಗಳಿಗಾಗಿ ನನ್ನ್ನಕುಟುಂಬ ಪ್ರಾರ್ಥಿಸುತ್ತಿದೆ’ ಎಂದು ದಕ್ಷಿಣ ಕರೋಲಿನಾ ಗವರ್ನರ್ ಹಾಲೇ ಹೇಳಿದರು.ದಕ್ಷಿಣ ಕರೋಲಿನಾ ರಾಜ್ಯದ ಇತ್ತಿಹಾಸದಲ್ಲೇ ಅತ್ಯಂತ ಭೀಕರ ಸಾಮೂಹಿಕ ಹತ್ಯಾಕಾಂಡ ಇದಾಗಿದೆ.
ಗುಂಡಿನ ದಾಳಿ ನಡೆಸಿದ ವ್ಯಕ್ತಿ 20ರ ಹರೆಯದ ನುಣ್ಣಗೆ ಕೌರ ಮಾಡಿಕೊಂಡಿದ್ದ ಬಿಳಿಯ ಪುರುಷ ಎಂದು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ವಿವರಗಳನ್ನೂ ಅವರು ಪ್ರಕಟಿಸಿಲ್ಲ. ಘಟನೆ ಸಂಭವಿಸಿರುವ ಎಮ್ಯಾನುಯೆಲ್ ಆಫ್ರಿಕನ್ ಮೆಥೋಡಿಸ್ಟ್ ಎಪಿಸ್ಕೊಪಲ್ ಚರ್ಚ್ 19ನೇಯ ಶತಮಾನದ ಚರ್ಚ್ ಆಗಿದ್ದು ಅಮೆರಿಕದಲ್ಲೇ ಅತ್ಯಂತ ಪುರಾತನ ಚರ್ಚ್. ಚರ್ಚ್ ಸ್ಥಾಪಕರಲ್ಲಿ ಒಬ್ಬರಾದ ಡೆನ್ಮಾರ್ಕ್ ವರ್ಸೆ 1822ರಲ್ಲಿ ವಿಫಲವಾಗಿದ್ದ ಗುಲಾಮೀ ದಂಗೆಯ ನಾಯಕರಾಗಿದ್ದರು.
