ರಾಗಿಣಿ ಮತ್ತು ಶ್ರೀನಿವಾಸ ರಾಜು ನಡುವಿನ ‘ನಾಟಿಕೋಳಿ’ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಶ್ರೀನಿವಾಸ್ ರಾಜು ಕುರಿತು ಅಂತರ್ಜಾಲದಲ್ಲಿ ಬರೆದಿರುವ ರಾಗಿಣಿ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
ರಾಗಿಣಿ ಮತ್ತು ಶ್ರೀನಿವಾಸ ರಾಜು ನಡುವಿನ ‘ನಾಟಿಕೋಳಿ’ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಫೋಟೋಶೂಟ್ ವೇಳೆ ನಡೆದ ಘಟನೆ, ಆಮೇಲಿನ ಕೆಲ ಬೆಳವಣಿಗೆ ಗಳಿಂದ ಕೋಳಿಜಗಳ ಸ್ವಲ್ಪ ತಣ್ಣಗಾಗಿತ್ತು. ‘ನಾವು ರಾಗಿಣಿ ಅವರನ್ನು ಚಿತ್ರದಿಂದ ಕಿತ್ತುಹಾಕಿದ್ದೇವೆ’ ಎನ್ನುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿತ್ತು ಚಿತ್ರತಂಡ. ‘ಅವರಿಗೆ ನಾವು ನೀಡಿರುವ ಮುಂಗಡ ಹಣ ವಾಪಸ್ ಕೊಡಿಸಿ’ ಅಂತ ವಾಣಿಜ್ಯ ಮಂಡಳಿಗೆ ದೂರು ಸಹ ಕೊಟ್ಟಿದ್ದರು ನಿರ್ವಪಕ ವೆಂಕಟ್. ಇದುವರೆಗೂ, ಅಡ್ವಾನ್ಸ್ ಹಿಂದಿರುಗಿಸುವ ಬಗೆಗೆ ರಾಗಿಣಿ ಏನೊಂದು ಹೇಳಿಕೊಂಡಿರಲಿಲ್ಲ. ಆದರೀಗ, ಮಾತನಾಡಿದ್ದಾರೆ. ಮುಂಗಡ ಕೊಡುವ ಕುರಿತಲ್ಲ. ನಿರ್ದೇಶಕ ಶ್ರೀನಿವಾಸ ರಾಜು ವೃತ್ತಿಪರತೆ ಬಗ್ಗೆ!
‘ನಿಜಕ್ಕೂ ‘ನಾಟಿಕೋಳಿ’ ಚಿತ್ರವನ್ನು ನಾನೇಕೆ ಬಿಟ್ಟೆ’ ಎಂಬುದನ್ನು ಅಂತರ್ಜಾಲ ತಾಣದಲ್ಲಿ ಬರೆದುಕೊಂಡು, ತಮ್ಮ ಅಭಿಮಾನಿಗಳಿಗೆ ಕೆಲ ಕಹಿಸತ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ರಾಗಿಣಿ. ‘ಶ್ರೀನಿವಾಸ್ ರಾಜು ವೃತ್ತಿಪರತೆ ಇಲ್ಲದ ನಿರ್ದೇಶಕ. ಅವರ ಪ್ರಕಾರ ಸಿನಿಮಾ ಎಂದರೆ, ಸೆಕ್ಸ್ ಮತ್ತು ಆಶ್ಲೀಲತೆ. ತೆರೆಮೇಲೆ ನಾಯಕಿಯರನ್ನು ವಿವಸ್ತ್ರರನ್ನಾಗಿ ಮಾಡುವುದಷ್ಟೇ. ಚಿತ್ರದ ಕಥೆ ಮತ್ತು ನಿರೂಪಣೆ ಬಗ್ಗೆ ಅವರಿಗೇ ಸ್ಪಷ್ಟತೆ ಇಲ್ಲ. ಏನಾದರೂ ಕೇಳಿದರೆ, ‘ಸೆಟ್ನಲ್ಲಿ ನನ್ನ ತಲೆಗೆ ಬರುತ್ತೆ’ ಎನ್ನುವ ನಿರ್ದೇಶಕನಾತ. ಅಲ್ಲದೇ, ಸಿನಿಮಾ ಕಾಂಟ್ರಾಕ್ಟ್ಗೆ ಸಹಿ ಮಾಡುವಂತೆ ಒತ್ತಡ ಹಾಕುತ್ತಿದ್ದರು. ಕಥೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗದ ಕಾರಣ, ‘ನಾಟಿಕೋಳಿ’ಗೆ ಗುಡ್ ಬೈ ಹೇಳಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
‘ಒಬ್ಬ ನಟಿಯಾಗಿ ಚಿತ್ರದ ಕಥೆ, ನಿರೂಪಣೆ ಬಗ್ಗೆ ಕೇಳುವುದು ನನ್ನ ಹಕ್ಕು. ಆದರೆ ಅವರು ಒಪ್ಪಂದಕ್ಕೆ ಸಹಿ ಮಾಡುವಂತೆ ಹೇಳಿದರು. ಗೌರವವಿಲ್ಲದ ಕಡೆ ನಾನು ಇರುವುದಿಲ್ಲ. ನನಗೆ ಬೆಂಬಲಿಸಿದ ಕಲಾವಿದರ ಸಂಘ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧನ್ಯವಾದ’ ಎಂದೂ ಮಾರುದ್ದ ಸ್ಟೇಟಸ್ ಹಾಕಿಕೊಂಡಿರುವ ರಾಗಿಣಿ, ಶ್ರೀನಿವಾಸ್ ರಾಜು ಅವರಿಗೆ ಚೆನ್ನಾಗಿಯೇ ಜಾಡಿಸಿದ್ದಾರೆ.
