ಕರ್ನಾಟಕ

ಭಟ್ಕಳಿಗ ಎಂಬ ಕಾರಣಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗೆ ತಡೆ

Pinterest LinkedIn Tumblr

BKL

ಭಟ್ಕಳ,: ಭಟ್ಕಳಿಗ ಎಂಬ ಏಕೈಕ ಕಾರಣಕ್ಕೆ ಇಲ್ಲಿನ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಂತಿಮ ವರ್ಷದ ವಿದ್ಯಾರ್ಥಿ ಅರ್ಸಲಾನ್ ಅಹ್ಮದ್ ಖಾಝಿ ಎಂಬಾತನನ್ನು ತಡೆದು ನಿಲ್ಲಿಸಿದ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ವಿನಾಕಾರಣ ಕಿರುಕುಳ ನೀಡಿದ ಘಟನೆ ಬುಧವಾರ ಬೆಳಗ್ಗಿನ ಜಾವ ನಡೆದಿದೆ. ರಜೆಯ ಕಾರಣ ದುಬೈಯಲ್ಲಿರುವ ತನ್ನ ಪಾಲಕರನ್ನು ಭೇಟಿಯಾಗಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅರ್ಸಲಾನ್ ಖಾಝಿಯನ್ನು, ಭಟ್ಕಳಿಗ ಎಂಬ ಕಾರಣಕ್ಕೆ ತಡೆದು ನಿಲ್ಲಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ವಿನಾಕಾರಣ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಭಟ್ಕಳದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಯನ್ನು ತಡೆದು ನಿಲ್ಲಿಸಿದ ವಿಮಾನ ನಿಲ್ದಾಣದ ತಪ್ಪಿತಸ್ಥ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಕಾಲೇಜಿಗೆ ರಜೆ ಇರುವ ಹಿನ್ನೆಲೆಯಲ್ಲಿ ದುಬೈಯಲ್ಲಿರುವ ತನ್ನ ಪಾಲಕರನ್ನು ಭೇಟಿಯಾಗಲು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಏರ್ ಅರೇಬಿಯಾ ವಿಮಾನದಲ್ಲಿ ಬುಧವಾರ ಬೆಳಗಿನ ಜಾವ 4:35ಕ್ಕೆ ದುಬೈ ಹೋಗಬೇಕಿತ್ತು. ಅದರಂತೆ ವಿಮಾನ ನಿಲ್ದಾಣಕ್ಕೆ ತೆರಳಿದ್ದ ತನ್ನನ್ನು ನಿಲ್ದಾಣದ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ. ಅಲ್ಲದೆ ತನ್ನ ಪಾಸ್‌ಪೋರ್ಟ್ ಹಾಗೂ ಮತ್ತಿತರರ ದಾಖಲೆಗಳನ್ನು ವಶಕ್ಕೆ ಪಡೆದು,

ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ವಿಚಾರಣೆ ನಡೆಸಿದ್ದಾರೆ ಎಂದು ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿದ ‘ವಾರ್ತಾಭಾರತಿ’ ಯೊಂದಿಗೆ ಮಾತನಾಡಿದ ಅರ್ಸಲಾನ್ ಖಾಝಿ ಆರೋಪಿಸಿದ್ದಾರೆ.
ನಾನು ಭಟ್ಕಳಿಗ ಎಂಬ ಏಕೈಕ ಕಾರಣಕ್ಕೆ ಅಲ್ಲಿಯ ಸಿಬ್ಬಂದಿ ತನಗೆ ವಿನಾಕಾರಣ ಕಿರುಕುಳ ನೀಡಿದ್ದಾರೆ. ಪರಿಶೀಲನೆಯ ನೆಪದಲ್ಲಿ ತನ್ನ ಬಳಿ ಇದ್ದ ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ ತನ್ನನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆೆಯ ಬಳಿಕವೂ ಪಾಸ್‌ಪೋರ್ಟ್ ಹಾಗೂ ಇತರ ದಾಖಲೆಗಳನ್ನು ತನಗೆ ಮರಳಿ ನೀಡದೆ, ವಿಮಾನ ದುಬೈಗೆ ಹಾರಿದ ನಂತರ ಮರಳಿಸಿದ್ದಾರೆ ಎಂದು ತನ್ನ ಅಳಲನ್ನು ತೋಡಿಸಿಕೊಂಡ ಅರ್ಸಲಾನ್ ಖಾಝಿ, ವಿಮಾನದ ಅಧಿಕಾರಿಗಳು ಯಾಸಿನ್ ಭಟ್ಕಳ್ ಕುರಿತಂತೆ ತನ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದನ್ನು ಸರಕಾರದ ಮಟ್ಟದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಅರ್ಸಲಾನ್ ಖಾಝಿ ಹೊಸ ಟಿಕೆಟ್‌ನೊಂದಿಗೆ ಗುರುವಾರ ಇನ್ನೊಂದು ಏರ್ ಅರೆಬಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣಿಸಿದ್ದಾನೆ. ತನಿಖೆಗೆ ಒತ್ತಾಯ: ಜಾಮಿಯಾ ಇಸ್ಲಾ ಮಿಯಾ ಶಿಕ್ಷಣ ಸಂಸ್ಥೆಯ ಅಂತಿಮ ವರ್ಷದ ವಿದ್ಯಾರ್ಥಿ ಅರ್ಸಲಾನ್ ಅಹ್ಮದ್ ಖಾಝಿ ಎಂಬಾತನನ್ನು ವಿನಾಕಾರಣ ತಡೆದು ವಿಚಾರಣೆ ನಡೆಸಿದ ಬೆಂಗಳೂರು ವಿಮಾಣ ನಿಲ್ದಾಣದ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್, ಭಟ್ಕಳ ಮುಸ್ಲಿಮ್ ಜಮಾಅತ್ ಬೆಂಗಳೂರು, ಭಟ್ಕಳ ಮುಸ್ಲಿಮ್ ಜಮಾಅತ್ ದುಬೈ ಸಂಸ್ಥೆಗಳು ಒತ್ತಾಯಿಸಿವೆ.

Write A Comment