ಮಂಗಳೂರು, ಜೂನ್.10 ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಜೂ.12ರಂದು ಉದ್ಘಾಟನೆಗೊಳ್ಳಲಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮಂಗಳೂರು ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಆರಂಭಿಸುವ ಸಲುವಾಗಿ ಅಕಾಡಮಿ ಮಾಡಿದ ಪ್ರಯತ್ನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 2 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಕೊಂಕಣಿ ಭಾಷೆಯ ಚರಿತ್ರೆ ಮತ್ತು ಬೆಳವಣಿಗೆ ಹಾಗೂ ಕೊಂಕಣಿ ಭಾಷಾ ವಿಜ್ಞಾನದ ವಿವಿಧ ವಿಚಾರಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನಾ ಕಾರ್ಯ ಕೈಗೊಳ್ಳುವುದು, ಕೊಂಕಣಿ ಜನರ ಜನಪದ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಆಚರಣೆಗಳನ್ನು ವಿಶ್ಲೇಷಿಸಿ ಅಧ್ಯಯನ ನಡೆಸುವುದು, ಭಾಷಾಭಿಮಾನ ಸದೃಢಗೊಳಿಸುವುದು ಸೇರಿದಂತೆ ವಿವಿದ ಉದ್ದೇಶಗಳನ್ನು ಪೀಠ ಹೊಂದಿದೆ ಎಂದು ಹೇಳಿದರು.
6ನೆ ತರಗತಿಯಿಂದ ಶಾಲೆಗಳಲ್ಲಿ ಕೊಂಕಣಿ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಾಗು ವಂತೆ ಕೊಂಕಣಿ ಅಕಾಡಮಿಯು ರಾಯಭಾರಿ ಎಂಬ ನೂತನ ಕಲ್ಪನೆಯನ್ನು ಹಮ್ಮಿ ಕೊಂಡಿದೆ. ರಾಘವೇಂದ್ರ ರಾವ್ ಮಂಗಳೂರು, ಉಲ್ಲಾಸ್ ಕಾಮತ್ ಕಾರವಾರ, ಪ್ರೊ. ಜಿ. ವೆಂಕಟೇಶ ಪೈ ಉಡುಪಿ ಅವರನ್ನು ಆಯಾ ಜಿಲ್ಲಾ ಪ್ರಮುಖರನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕೊಂಕಣಿ ವಿಷಯ ವನ್ನು ತೃತೀಯ ಭಾಷೆಯಾಗಿ ಆರಂಭಿಸಲು, ಕೊಂಕಣಿ ಕ್ಲಬ್ ಮುಂತಾದ ಭಾಷಾ ಚಟು ವಟಿಕೆ ಪ್ರಾರಂಭಿಸುವ ಬಗ್ಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅಕಾಡಮಿಯ ರಿಜಿಸ್ಟ್ರಾರ್ ಡಾ ಬಿ.ದೇವದಾಸ ಪೈ, ಕೊಂಕಣಿ ಪೀಠ ಸ್ಥಾಪನಾ ಸಮಿತಿಯ ಸದಸ್ಯರಾದ ಬಸ್ತಿ ವಾಮನ್ ಶೆಣೈ, ಎಂ.ಪಿ. ನೊರೊನ್ಹ ಉಪಸ್ಥಿತರಿದ್ದರು.

