ಕರ್ನಾಟಕ

ಲೋಕಾಯುಕ್ತದಲ್ಲಿರುವ ಭ್ರಷ್ಟರ ಎತ್ತಂಗಡಿಗೆ ಮುಂದಾಗಿರುವ ಸರಕಾರ

Pinterest LinkedIn Tumblr

currept

ಬೆಂಗಳೂರು, ಜೂ.9: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ,ಲೋಕಾಯುಕ್ತ ಸಂಸ್ಥೆಯಲ್ಲಿರುವ ಕೆಲವು ಕಳಂಕಿತ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ತೀರ್ಮಾನಿಸಿದೆ. ಹಲವು ವರ್ಷಗಳಿಂದ ಬೀಡುಬಿಟ್ಟು ಸಂಸ್ಥೆಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವ ಕೆಲ ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರ ಮೂಲಕ ಲೋಕಾಯುಕ್ತ ಸಂಸ್ಥೆ ಬಗ್ಗೆ ಜನರಲ್ಲಿ ಉಂಟಾಗಿರುವ ಸಂಶಯವನ್ನು ಹೋಗಲಾಡಿಸಲು ಸರ್ಕಾರ ಈ ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಿದೆ.

ಉನ್ನತ ಅಧಿಕಾರಿಗಳ ವರ್ಗದಿಂದ ಕೆಳಹಂತದವರೆಗೂ ಮೇಜರ್ ಸರ್ಜರಿ ಮಾಡುವ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್, ಉಪ ಲೋಕಾಯುಕ್ತರಾದ ಸುಭಾಷ್ ಬಿ.ಆಡಿ, ಮಜಗೆ ಐಜಿಪಿ ಪ್ರಣಬ್ ಮೊಹಂತಿ, ಎಡಿಜಿಪಿ ಪ್ರೇಮ್‌ಕುಮಾರ್ ಮೀನಾ ಸೇರಿದಂತೆ ಮತ್ತಿತರ ಅಧಿಕಾರಿ ವರ್ಗದ ಜೊತೆ ಮಾತುಕತೆ ನಡೆಸಿದ್ದಾರೆ.

ಕೆಲವರಿಂದ ಸಂಸ್ಥೆಗೆ ಕಳಂಕ ಬಂದಿದ್ದು ಇಂತಹ ಭ್ರಷ್ಟರನ್ನು ತಕ್ಷಣವೇ ಎತ್ತಂಗಡಿ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿಗೆ ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಲೋಕಾಯುಕ್ತದಲ್ಲಿರುವ ಭ್ರಷ್ಟ ಅಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು, ಯಾವುದೇ ವೇಳೆ ಮುಖ್ಯಮಂತ್ರಿಯವರ ಕಚೇರಿಗೆ ತಲುಪಲಿದೆ ಎಂದು ಖಚಿತ ಮೂಲಗಳು ತಿಳಿಸಿವೆ. ಒಂದು ಅಂದಾಜಿನ ಪ್ರಕಾರ, ಸುಮಾರು 25 ಕ್ಕೂ ಹೆಚ್ಚು ಅಧಿಕಾರಿಗಳಿಗೆ ವರ್ಗಾವಣೆಯ ಬಿಸಿ ತಟ್ಟುವುದು ಖಚಿತ. ಕಳೆದ ತಡ ರಾತ್ರಿಯವರೆಗೂ ಲೋಕಾಯುಕ್ತ ನ್ಯಾಯಮೂರ್ತಿ ಸರಣಿ ಸಭೆ ನಡೆಸಿ, ಕೆಲ ತಿಮಿಂಗಿಲಗಳನ್ನು ವರ್ಗಾಯಿಸದೆ ವಿಧಿಯಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಯುಕ್ತ ನ್ಯಾಯಮೂರ್ತಿಗಳಿಗೆ ತಮ್ಮ ಸಂಸ್ಥೆಯಲ್ಲಿರುವ ಯಾವುದೇ ಹಂತದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರವಿಲ್ಲ. ಸರ್ಕಾರಕ್ಕೆ ಶಿಫಾರಸು ಮಾಡಿ, ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿ, ಇಲ್ಲವೇ ನೇಮಕ ಮಾಡಿ ಎಂದು ಸಲಹೆ ಮಾಡಬಹುದು. ಮೂಲಗಳ ಪ್ರಕಾರ ವರ್ಗಾವಣೆ ಮಾಡಲಿರುವ ಅಧಿಕಾರಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಳುಹಿಸಲಾಗಿದೆ. ಇದಕ್ಕೆ ಅವರು ಸಮ್ಮತಿಸಿದ ಬಳಿಕವೇ ಭಾಸ್ಕರರಾವ್ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಲೋಕಾಯುಕ್ತ ಅಧಿಕಾರಿಗಳ ವರ್ಗಾವಣೆಗೆ ಸಂಸ್ಥೆಯಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳು ತಮ್ಮ ಹೆಸರು ಹೇಳಿಕೊಂಡು ಕೆಲವರಿಂದ ಹಣ ವಸೂಲಿ ಮಡುತ್ತಿದ್ದಾರೆಂದು ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ದೂರು ನೀಡಿದ್ದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಗೆ 1 ಕೋಟಿ ಲಂಚ ನೀಡದಿದ್ದರೆ ನಿಮ್ಮ ಮನೆ ಮೇಲೆ ದಾಳಿ ನಡೆಸಲಾಗುವುದೆಂದು ಲೋಕಾಯುಕ್ತ ಅಧಿಕಾರಿಗಳು ಬ್ಲಾಕ್‌ಮೇಲ್ ಮಾಡಿದ್ದರು ಎನ್ನಲಾಗಿದೆ. ಇದರ ಜೊತೆಗೆ ಸೋಮವಾರ ಲೋಕಾಯುಕ್ತ ಕಚೇರಿಯಲ್ಲೇ 2 ಲಕ್ಷ ನಗದು ಸಿಕ್ಕಿರುವುದು ಭಾರೀ ಸಂಶಯಕ್ಕೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಂದಲೇ ಕೆಲ ಮಿಕಗಳನ್ನು ಎತ್ತಂಗಡಿ ಮಾಡಲು ಭಾಸ್ಕರರಾವ್ ಮುಂದಾಗಿದ್ದಾರೆ.

ಪೊಲೀಸ್ ಇಲಾಖೆಗೆ ಸರ್ಜರಿ : ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅಕ್ರಮ ಲಾಟರಿ ಪ್ರಕರಣದಿಂದ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಇಲಾಖೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಎತ್ತಂಗಡಿಗೆ ಮುಹೂರ್ತ ನಿಗದಿಪಡಿಸಿದೆ. ಲಾಟರಿ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಹಗರಣಗಳಲ್ಲಿ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಎತ್ತಂಗಡಿ ಶಿಕ್ಷೆ ನೀಡುವುದರ ಜತೆಗೆ ಇನ್‌ಸ್ಪೆಕ್ಟರ್ ಹಾಗೂ ಎಸ್‌ಐಗಳ ವರ್ಗಾವಣೆಗೂ ಚಿಂತನೆ ನಡೆಸಿದೆ. ವರ್ಗಾವಣೆ ಸಂಬಂಧ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳು ಸಭೆ ಕರೆಯಲಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ. ಕೇಂದ್ರ ವಲಯದ ಐಜಿಪಿ ಅರುಣ್ ಚಕ್ರವರ್ತಿ ಹಾಗೂ ಈಶಾನ್ಯ ವಲಯದ ಐಜಿಪಿ ಸುನಿಲ್ ಅಗರ್‌ವಾಲ್ ಎತ್ತಂಗಡಿಗೆ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಕೆಲ ಡಿವೈಎಸ್ಪಿ, ಎಸ್ಪಿ, ಇನ್‌ಸ್ಪೆಕ್ಟರ್ ಹಾಗೂ ಎಸ್‌ಐ ದರ್ಜೆಯ ಅಧಿಕಾರಿಗಳು 2-3 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಜತೆಗೆ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೇರೂರಿರುವ ಅಧಿಕಾರಿಗಳನ್ನು ಸಹ ವರ್ಗಾಯಿಸಲು ಪಟ್ಟಿ ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Write A Comment