ಕರ್ನಾಟಕ

ವಿಡಿಯೋ ಕಾನ್ಫರೆನ್ಸ್ ಮೂಲಕ ಕೈದಿಗಳ ವಿಚಾರಣೆ ವ್ಯವಸ್ಥೆ

Pinterest LinkedIn Tumblr

Video-Conferece

ಬೆಂಗಳೂರು,ಜೂ.5-ವಿಚಾರಣಾಧೀನ ಕೈದಿಗಳ  ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆ ಮತ್ತಿತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರವಾಗಿ 62 ಕಾರಾಗೃಹಗಳು ಮತ್ತು ಕ್ರಿಮಿನಲ್ ಕೋರ್ಟ್‌ಗಳಲ್ಲಿ ವಿಡಿಯೋ ಸಂವಾದ(ಕಾನ್ಫರೆನ್ಸ್)ದ ಮೂಲಕ ವಿಚಾರಣೆ ನಡೆಸುವ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಮುಂದಾಗಿದೆ.

ಈ ಕುರಿತಂತೆ 30 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ದವಾಗಿದ್ದು , ಸಂಪುಟದ  ಅನುಮೋದನೆ ಪಡೆದು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿ ಈ ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದು, ಸರ್ಕಾರಕ್ಕೆ ಕಳುಹಿಸಿದೆ. ಸದ್ಯ ಜಾರ್ಖಂಡ್ ರಾಜ್ಯದಲ್ಲಿ ನಕ್ಸಲ್ ವಿಚಾರಣೆಗೆ ಈ ವ್ಯವಸ್ಥೆಯಿದ್ದು, ದೇಶದಲ್ಲಿ 2ನೇಯದಾಗಿ ಕರ್ನಾಟಕ ಇದನ್ನು ಜಾರಿಗೆ ತರಲಿದೆ ಎಂದು ಸಚಿವದ್ವಯರು ಹೇಳಿದರು.

ನವದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳು ಮತ್ತು ನ್ಯಾಯಾಧೀಶರ ಸಮಾವೇಶದಲ್ಲಿಯೂ ಈ ವ್ಯವಸ್ಥೆಯ ಬಗ್ಗೆ ಪ್ರಸ್ತಾವನೆಯಾಗಿದೆ. ಈ ಸಂಬಂಧ ವಿಡಿಯೋ ವಿಚಾರಣೆಗೆ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು.  ಅಲ್ಲದೆ ಈ ವಿಡಿಯೋ ಸಂವಾದದ ಕಾರ್ಯಕ್ರಮದಲ್ಲಿ ಸಂಬಂಧಪಟ್ಟವರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುವುದು. ಜೈಲುಗಳಲ್ಲಿ ಅಪರಾಧಿಗಳಿಗೆ ಅನಾರೋಗ್ಯವುಂಟಾದರೆ ಅವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ವ್ಯವಸ್ಥೆಯನ್ನು ತಪ್ಪಿಸಲು ಟೆಲಿಮೆಡಿಸಿನ್ ಜಾರಿಗೆ ತರಲಾಗುವುದು. ಈಗಾಗಲೇ ಬಳ್ಳಾರಿ ಜೈಲಿನಲ್ಲಿ ಈ ವ್ಯವಸ್ಥೆ ಇದೆ ಎಂದರು. ರಾಜ್ಯದಲ್ಲಿ  ಒಟ್ಟು  6,39,241 ಕ್ರಿಮಿನಲ್ ಕೇಸ್‌ಗಳು ವಿಚಾರಣೆ ಹಂತದಲ್ಲಿದೆ. ಈ ಪೈಕಿ ಮಹಿಳೆಯರಿಗೆ ಸಂಬಂಧಿಸಿದಂತೆ 16,664 ಪ್ರಕರಣಗಳು ಭ್ರಷ್ಟಾಚಾರದ 1,965 ಪ್ರಕರಣಗಳು, ಪರಿಶಿಷ್ಟ ಜಾತಿ/ ವರ್ಗಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ 1,609 ಪ್ರಕರಣಗಳು, ಮಕ್ಕಳಿಗೆ ಸಂಬಂಧಿಸಿದ 1899, ಹಿರಿಯ ನಾಗರಿಕರಿಗೆ ಸಂಬಂಧಿಸಿದ 20,010, ವಿಕಲಚೇತನರಿಗೆ ಸಂಬಂಧಿಸಿದ 149 ಹಾಗೂ ಬಾಲಾಪರಾಧಿಗಳಿಗೆ ಸಂಬಂಧಿಸಿ 1,696 ಪ್ರಕರಣಗಳು ಇದರಲ್ಲಿ ಸೇರಿವೆ.

Write A Comment