Uncategorized

ಮುಸ್ಲಿಂ ಮುಖಂಡರಿಗೆ ಮೋದಿ ಚಹಾ

Pinterest LinkedIn Tumblr

momu

ನವದೆಹಲಿ: ಎಲ್ಲ ಧರ್ಮದವರ ರಕ್ಷಣೆಗೆ ತಾವು ಬದ್ಧ, ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿಯವರು ಭರವಸೆ ನೀಡಿದ ಬೆನ್ನಲ್ಲೇ ಮುಸ್ಲಿಂ ಮುಖಂಡರ ನಿಯೋಗವೊಂದು ಮಂಗಳವಾರ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಮೋದಿಯವರು ಸ್ವತಃ ತಾವೇ ಅವರಿಗೆಲ್ಲ ಚಹಾ ಸರ್ವ್ ಮಾಡಿ, ಜತೆಗೆ ಕುಳಿತು ತಿಂಡಿ ತಿಂದರು ಎಂದು ವರದಿಯಾಗಿದೆ.

ಮುಖಂಡರ ಜತೆ ಮಾತಿಗಿಳಿದ ಮೋದಿಯವರು, ‘ನಾವು ಜನರ ಮತ್ತು ಧರ್ಮಗಳ ನಡುವೆ ಬಿರುಕು ತರುವ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ. ಎಲ್ಲರ ಹಿತರಕ್ಷಣೆಗೆ ತಾವು ಬದ್ಧ’, ಎಂದು ಆಶ್ವಾಸನೆ ನೀಡಿದ್ದಾರೆ. ಈ ಸಂದರ್ಭದಲ್ಲಿ  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸಹ ಹಾಜರಿದ್ದರು.

ಅಖಿಲ ಭಾರತ ಇಮಾಮ್ ಸಂಸ್ಥೆ ಮುಖ್ಯಸ್ಥ, ಇಮಾಮ್ ಉಮರ್ ಅಹಮದ್ ಇಲ್ಸಾಸಿ ನೇತೃತ್ವದಲ್ಲಿ ಆಗಮಿಸಿದ್ದ ತಂಡದ ಜತೆ ಪ್ರಧಾನಿ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಸ್ಯೆಗಳ ಕುರಿತು ಚರ್ಚಿಸಿದಲ್ಲದೆ, ಈ ಕುರಿತು ಗಮನ ಹರಿಸುವುದಾಗಿ ವಾಗ್ದಾನ ಮಾಡಿದರು.

ಮಾತುಕತೆ ಸಂದರ್ಭದಲ್ಲಿ ಮೋದಿಯವರು  ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ರಾಜಕೀಯ ದೇಶಕ್ಕೆ ಬಹಳ ಸಮಸ್ಯೆಯನ್ನು ತಂದಿಟ್ಟಿದೆ ಎಂದು ಖೇದ ವ್ಯಕ್ತಪಡಿಸಿದರು ಎಂದು ಪಿಎಂಒ ಹೇಳಿದೆ.

ಪ್ರಧಾನಿ ಮೋದಿಯವರ ರೇಸ್‌ಕೋರ್ಸ್ ನಿವಾಸಕ್ಕೆ ಆಗಮಿಸಿದ 30 ಜನ ಮುಖಂಡರನ್ನೊಳಗೊಂಡ ತಂಡ ಮೋದಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಶ್ಲಾಘಿಸಿದೆ.

ಮುಸ್ಲಿಂ ಸಮುದಾಯ ಮತ ಬ್ಯಾಂಕುಗಳ ಮೇಲೆ ಕೇಂದ್ರಿಕೃತವಾದ ಒಡಕನ್ನುಂಟು ಮಾಡುವ ರಾಜಕೀಯವನ್ನು ವಿರೋಧಿಸಿದೆ. ನಾವು ಕೇವಲ ಅಭಿವೃದ್ಧಿಯಲ್ಲಿ ಆಸಕ್ತರಾಗಿದ್ದೇವೆ ಎಂದು ನಿಯೋಗ ಹೇಳಿದೆ.

Write A Comment