ಉಡುಪಿ: ಮಂಗಳೂರಿನಿಂದ ಅನಿಲವನ್ನು ತುಂಬಿಕೊಂಡು ಬೆಳಗಾಂನತ್ತ ಸಾಗುತ್ತಿದ್ದ ಬುಲ್ಲೇಟ್ ಟ್ಯಾಂಕರೊಂದು ಎದುರುನಿಂದ ವೇಗವಾಗಿ ಬಂದ ವಾಹನವನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾದ ಘಟನೆ ಕೋಟ ಸಮೀಪದ ಹಿರೇಮಹಾಲಿಂಗೇಶ್ವರ ದೇವಳದ ಎದುರು ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಘಟನೆ ವಿವರ: ಮಂಗಳೂರು ಎಂ.ಆರ್.ಪಿ.ಎಲ್. ನಿಂದ ಇಂಡೇನ್ ಗ್ಯಾಸ್ ಕಂಪೆನಿಯ ಗ್ಯಾಸ್ ತುಂಬಿದ ೧೭.೫ ಟನ್ ತೂಕದ ಅನಿಲ ಹೊಂದಿದ್ದ ಟ್ಯಾಂಕರ್ ಇದಾಗಿದ್ದು ಬೆಳಗಾಂನತ್ತ್ ಸಾಗುತ್ತಿತ್ತು. ಕೋಟ ಸಮೀಪ ಟ್ಯಾಂಕರ್ ಬರುತ್ತಿರುವಾಗ ಓವರ್-ಟೇಕ್ ಬರದಲ್ಲಿ ಸಾಗಿಬಂದ ವಾಹನವನ್ನು ತಪ್ಪಿಸಲು ಹೋದ ಟ್ಯಾಂಕರ್ ಚಾಲಕ ಟ್ಯಾಂಕರನ್ನು ಎಡಕ್ಕೆ ತಿರುಗಿಸಿದ್ದಾನೆ, ಈ ವೇಳೆ ಟ್ಯಾಂಕರ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ವಿಭಾಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಘಟನೆಯಲ್ಲಿ ಚಾಲಕ ತಮಿಳುನಾಡು ಮೂಲದ ಮಣಿ ಹಾಗೂ ನಿರ್ವಾಹಕ ಶಿವ ಎನ್ನುವವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಟ್ಯಾಂಕರ್ ಕೂಡ ಯಾವುದೇ ನಜ್ಜುಗುಜ್ಜಾಗದಿದ್ದು ಅನಿಲ ಸೋರಿಕೆಯಾಗಿಲ್ಲ. ಇದರಿಂದ ಸಂಭವನೀಯ ದುರಂತ ತಪ್ಪಿದಂತಾಗಿದೆ.
ಹೆದ್ದಾರಿ ಅವ್ಯವಸ್ಥೆ: ಕೋಟ ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹೆದ್ದಾರಿ ಚತುಷ್ಪತ ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದ್ದು, ಇದು ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿದೆ. ಶೀಘ್ರ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.








