ಮಂಗಳೂರು, ಮೇ .28 : ಜಿಲ್ಲೆಯಲ್ಲಿ ಹಲವಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಮನೆಯಲ್ಲೇ ಕಾಲ ಕಳೆಯುವಂತಾಗುತ್ತಿದೆ. ಜಿಲ್ಲಾಡಳಿತವಾಗಲಿ ಶಿಕ್ಷಣ ಇಲಾಖೆಯಾಗಲಿ ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ ಎಂದು ಆರೋಪಿಸಿರುವ ನಗರದ ಮಕ್ಕಳ ಹಕ್ಕು ಹೋರಾಟಗಾರರು ಹಾಗೂ ಪೋಷಕರ ಸಂಘವು ಗುರುವಾರ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತಂದು ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳಿಗೆ ಪಾಠ ಮಾಡುವ ಮೂಲಕ ವ್ಯವಸ್ಥೆಯ ವಿರುದ್ಧ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಡೊನೇಷನ್ ಹಾವಳಿಯಿಂದ ಅನೇಕ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪೋಷಕರಿಂದ ಡೊನೇಷನ್ ಮತ್ತು ದುಬಾರಿ ಶುಲ್ಕ ಪಡೆದುಕೊಳ್ಳಬಾರದು ಎಂಬ ನಿಯಮ ಇದ್ದರೂ ದ.ಕ. ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ದುಪ್ಪಟ್ಟು ಹಣ ಪಡೆಯುತ್ತಿವೆ. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಮೊಟಕುಗಳಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಒಂದೆಡೆ ಶಾಲಾ ಪ್ರಾರಂಭೋತ್ಸವ ಸಮಾರಂಭವನ್ನು ನಡೆಸಲಾಗುತ್ತದೆ. ಆದರೆ ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಕೇಳುವವರಿಲ್ಲದಂತಾಗಿದೆ. ತಮ್ಮ ಸಂಘಟನೆ ಈಗಾಗಲೇ ಇಂತಹ ಹಲವಾರು ಮಕ್ಕಳನ್ನು ಪತ್ತೆ ಹಚ್ಚಿದ್ದು ಅವರನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಕರೆತಂದು ಶಾಲೆಗಳಿಗೆ ದಾಖಲಿಸಲು ಒತ್ತಾಯಿಸಲಾಗುವುದು ಎಂದವರು ಹೇಳಿದರು.ಸಂಘಟನೆಯ ಪ್ರಮುಖರಾದ ರಾಧಾಕೃಷ್ಣ, ಪ್ರಸನ್ನ ರವಿ, ಅಕ್ಷತಾ ಶೆಟ್ಟಿ, ಉದಯಕುಮಾರ್ ಮಕ್ಕಳ ಪೋಷಕರು ಮೊದಲಾದವ ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.



