ಮಂಗಳೂರು /ಉಳ್ಳಾಲ : ಉತ್ತರ ಭಾರತ ಪ್ರವಾಸಕ್ಕೆ ಹೊರಟು ದಿಲ್ಲಿ ತಲುಪಿದ್ದ ಉಳ್ಳಾಲದ ಸುಮನಾ ಪೈ (60) ಅನಾರೋಗ್ಯದಿಂದ ಅಲ್ಲಿನ ಆಸ್ಪತ್ರೆಯಲ್ಲಿ ಮೇ 24ರಂದು ಮೃತಪಟ್ಟಿದ್ದು, ಅವರ ಮೃತದೇಹವನ್ನು ವೈದ್ಯಕೀಯ ವಿಧಿವಿಧಾನ ಪೂರೈಸಿ ಎರಡೇ ದಿನಗಳಲ್ಲಿ ಮಂಗಳೂರಿಗೆ ತಲುಪಿಸುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಾನವೀಯತೆ ಮೆರೆದದಿದ್ದಾರೆ.
ಮಂಗಳೂರಿನಿಂದ ಉತ್ತರಭಾರತ ಪ್ರವಾಸದೊಂದಿಗೆ ಹರಿದ್ವಾರಕ್ಕೆಂದು ಉಳ್ಳಾಲದಿಂದ ತೆರಳಿದ ಶ್ರೀಕರ ಕಿಣಿ ನೇತೃತ್ವದ 15 ಮಂದಿಯ ತಂಡದಲ್ಲಿ ಸುಮನಾ ಪೈ ತೆರಳಿದ್ದರು. ದಿಲ್ಲಿ ತಲುಪಿದಾಗ ಅವರು ಅನಾರೋಗ್ಯಕ್ಕೆ ತುತ್ತಾದರು. ಅವರನ್ನು ದಿಲ್ಲಿಯ ರಾಜೇಂದರ್ ನಗರದ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮೇ 24ರಂದು ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಸುಮನಾ ಪೈ ಸಂಬಂಧಿಕರು ವೈದ್ಯಕೀಯ ವಿಧಿವಿಧಾನಗಳನ್ನು ಪೂರೈಸುವ ಮತ್ತು ಉಳ್ಳಾಲಕ್ಕೆ ಮೃತದೇಹವನ್ನು ತರುವ ವಿಚಾರದಲ್ಲಿ ಸಚಿವ ಯು.ಟಿ. ಖಾದರ್ ಸಹಕಾರ ಕೇಳಿದ್ದು, ತತ್‌ಕ್ಷಣ ಸ್ಪಂದಿಸಿದ ಖಾದರ್ ಸಂಬಂಧಿತ ಆಸ್ಪತ್ರೆಗೆ ದಿಲ್ಲಿಯಲ್ಲಿರುವ ತನ್ನ ಆಪ್ತರನ್ನು ಕಳುಹಿಸಿ ಮೃತರ ಕುಟುಂಬಕ್ಕೆ ಸಹಕರಿಸಿದರು. ಆಸ್ಪತ್ರೆಯ ವೈದ್ಯರ ಸಹಕಾರದಿಂದ ಸೋಮವಾರ ದಿಲ್ಲಿಯಿಂದ ಪಾರ್ಥಿವ ಶರೀರ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದು, ಉಳ್ಳಾಲದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಸುಮನಾ ಅವರ ಸಂಬಂಧಿಕರು ಪತ್ರಿಕೆಗೆ ತಿಳಿಸಿದ್ದಾರೆ.
ಸುಮನಾ ಪೈ ಮೂವರು ಪುತ್ರಿ, ಒರ್ವ ಪುತ್ರನನ್ನು ಅಗಲಿದ್ದಾರೆ.
