ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಸೋಮವಾರ ಮಧ್ಯಾಹ್ನದ ಸುಮಾರಿಗೆ ಕರೆ ಮಾಡಿ 10ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಬಗ್ಗೆ ಶಾಸಕರು ಸ್ಥಳೀಯ ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಾರೆ.
ಸೋಮವಾರ ಮಧ್ಯಾಹ್ನದ ಸುಮಾರಿಗೆ ಶುಭ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮೊಬೈಲಿಗೆ ಅಪರಿಚಿತ ವಿದೇಶಿ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಅದನ್ನು ಸ್ವೀಕರಿಸಿದಾಗ ಅತ್ತ ಕಡೆಯಿಂದ ತುಳು ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ, ತನ್ನನ್ನು ಭೂಗತ ಪಾತಕಿ ರವಿ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದು, ತನಗೆ 10 ಕೋಟಿ ಹಣ ಕೊಡಬೇಕು ಎಂಬುದಾಗಿ ತಿಳಿಸಿದ್ದಾನೆ. ಆದರೇ ಅದೇ ವೇಳೆ ಕರೆ ಸ್ಥಗಿತಗೊಂಡಿದ್ದು ಕೆಲವೇ ಕ್ಷಣಗಳಲ್ಲಿ ಇನ್ನೊಂದು ವಿದೇಶಿ ಸಂಖ್ಯೆಯಿಂದ ಕರೆಬಂದಿದೆ. ಆ ಸಂಭಾಷಣೆ ನಡುವೆ ರವಿ ಪೂಜಾರಿ, “ತನಗೆ 10 ಕೋಟಿ ಹಣ ಕೊಡಬೇಕು, ನನ್ನ ಇನ್ನೊಂದು ದೂರವಾಣಿ ಸಂಖ್ಯೆ ತೆಗೆದುಕೊಳ್ಳಿ, ಹಣ ಕೊಡುವ ಬಗ್ಗೆ ಆಲೋಚಿಸಿ ಮಾಹಿತಿ ಕೊಡಿ ಎಂದಿದ್ದಾನೆ. ಅದಕ್ಕೆ ಶಾಸಕರು ‘ತಾನು ಯಾರಿಗೂ ಹಣ ಕೊಡುವುದಿಲ್ಲ, ನಿಮ್ಮ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಸಿದ ಆತ ಹಣ ನೀಡದಿದ್ದಲ್ಲಿ ಮುಂದಿನ ದಾರಿ ನೋಡಬೇಕಗುತ್ತದೆ ಎಂದು ಬೆದರಿಕೆ ಹಾಕುವ ಮೂಲಕ ಕರೆ ಸ್ಥಗಿತಗೊಳಿಸಿದ್ದಾನೆ. ಕರೆಯು ಆಸ್ಟ್ರೇಲಿಯಾ ಮೂಲದಿಂದ ಬಂದಿದೆ ಎನ್ನಲಾಗಿದ್ದು ಇದೊಂದು ಇಂಟರ್-ನೆಟ್ ಕಾಲ್ ಎನ್ನಲಾಗುತ್ತಿದೆ.
ಶಾಸಕರಿಗೆ ಸಂಬಂಧಿಕರಾಗಿರವರೋರ್ವರು ಆಸ್ಟ್ರೇಲಿಯಾದಿಂದ ಕರೆ ಮಾಡುತ್ತಿರುವುದು ಮಾಮೂಲಿಯಾಗಿತ್ತು. ಆದ್ದರಿಂದ ವಿದೇಶಿ ಸಂಖ್ಯೆಯಿಂದ ಕರೆ ಬಂದ ಕಾರಣ ಹಾಲಾಡಿಯವರು ಕರೆಯನ್ನು ಸ್ವೀಕರಿಸಿದ್ದಾರೆ. ರವಿ ಪೂಜಾರಿ ಕರೆಯೆಂದು ತಿಳಿದ ಬಳಿಕ ಸಂಭಾಷಣೆಯಲ್ಲಿ ಹಣ ನೀಡುವುದೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಶಾಸಕರು, ತಾನ್ಯಾರಿಗೂ ಹಣ ನೀಡೋಲ್ಲ, ನನ್ನದು ಅಕ್ರಮವೂ ಇಲ್ಲ, ಅವ್ಯವಹಾರವೂ ಇಲ್ಲ ಎಂದಿದ್ದಾರೆ.
ಕುಂದಾಪುರ ಶಾಸಕ ಹಾಲಾಡಿಯವರು ಈ ಬಗ್ಗೆ ಶಂಕರನಾರಾಯಣ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಹಾಲಾಡಿಯವರಿಗೆ ಪಾತಕಿಯಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆಯನ್ನು ನೀಡಲಾಗಿದೆ.
ಹಲವು ವರ್ಷಗಳಿಂದಲೂ ರಾಜಕಾರಣದಲ್ಲಿ ಸಕ್ರೀಯರಾಗಿದ್ದ ಹಾಲಾಡಿಯವರಿಗೆ ಈ ಹಿಂದೆಯೆಲ್ಲೂ ಇಂತಹ ಬೆದರಿಕೆ ಕರೆಗಳು ಬಂದಿರಲಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಪೊಲಿಸರು ತನಿಖೆ ಚುರುಕುಗೊಳಿಸಿದ್ದಾರೆ.
