ಬೆಂಗಳೂರು: ಬಹು ಕೋಟಿ ಒಂದಂಕಿ ಲಾಟರಿ ಹಗರಣ ಬಯಲಿಗೆ ಬಂದ ನಂತರ ಒಂದೊಂದೆ ಸತ್ಯಗಳು ಅನಾವರಣಗೊಳ್ಳುತ್ತಿದ್ದು, ಪ್ರಕರಣದ ಕಿಂಗ್ ಪಿನ್ ಕೋಲಾರ ಮೂಲದ ಪಾರಿರಾಜನ್ ತಿರುಪತಿ ಲಾಡು ಹಾಗೂ ವಿವಿಧ ದೇವಸ್ಥಾನಗಳ ಪ್ರಸಾದ ನೀಡುವ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದನೆನ್ನಲಾಗಿದೆ.
ಮೊದಲಿಗೆ ಸಭ್ಯಸ್ಥನಂತೆ ಪೋಸ್ ನೀಡುತ್ತಿದ್ದ ಪಾರಿರಾಜನ್ ಈ ಅಧಿಕಾರಿಗಳು ತನ್ನ ನಿಕಟ ಸಂಪರ್ಕಕ್ಕೆ ಬರುತ್ತಲೇ ಹಣದ ಆಮಿಷ ಒಡ್ಡುವ ಮೂಲಕ ಲಾಟರಿ ದಂಧೆಗೆ ಯಾವುದೇ ಅಡ್ಡಿ ಆತಂಕ ಬಾರದಂತೆ ನೋಡಿಕೊಳ್ಳುತ್ತಿದ್ದುದಲ್ಲದೇ ಒಂದೊಮ್ಮೆ ಯಾರಾದರೂ ಕಿರಿಯ ಅಧಿಕಾರಿಗಳು ಕ್ರಮಕ್ಕೆ ಮುಂದಾದರೇ ತನಗೆ ಪರಿಚಿತರಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಹೇಳಿಸಿ ಬಚಾವಾಗುತ್ತಿದ್ದನೆನ್ನಲಾಗಿದೆ.
ಬಂಗಾರಪೇಟೆಯ ಭಾರತ್ ಕಾಲೋನಿಯಲ್ಲಿ ನಿವಾಸ ಹೊಂದಿದ್ದ ಪಾರಿರಾಜನ್ ದಿನನಿತ್ಯವೂ ಬೆಂಗಳೂರಿಗೆ ಬರುತ್ತಿದ್ದು, ಈತನ ದಂಧೆಯ ಕಿಂಚಿತ್ತು ಸುಳಿವು ಕುಟುಂಬ ಸದಸ್ಯರಿಗೆ ಇರಲಿಲ್ಲವೆನ್ನಲಾಗಿದೆ. ಈತನೊಬ್ಬ ದೊಡ್ಡ ರಿಯಲ್ ಎಸ್ಟೇಟ್ ಎಂದೇ ಕುಟುಂಬ ಸದಸ್ಯರಾದಿಯಾಗಿ ಅಲ್ಲಿನ ನಿವಾಸಿಗಳು ಭಾವಿಸಿದ್ದರೆಂದು ತಿಳಿದುಬಂದಿದೆ. ಬಂಗಾರಪೇಟೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆದ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತಾನು ನಿಂತಿರುವ ಬೃಹತ್ ಫ್ಲೆಕ್ಸ್ ಗಳನ್ನು ಈತ ಹಾಕಿಸುತ್ತಿದ್ದ ಕಾರಣ ಈತನ ಕುರಿತು ಅಲ್ಲಿನವರಿಗೆ ಗೌರವಾದರಗಳಿದ್ದವೆಂದು ಹೇಳಲಾಗಿದೆ.
