ವಿಶ್ವಸಂಸ್ಥೆ, ಮೇ 23: ಪ್ರತಿವರ್ಷ ಮೇ 29ರಂದು ವಿಶ್ವಸಂಸ್ಥೆಯು ಶಾಂತಿಪಾಲನಾ ದಿನವನ್ನಾಗಿ ಅಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 126 ಮಂದಿಗೆ ಶಾಂತಿಪಾಲನಾ ಪದಕಗಳನ್ನು ನೀಡಲಾಗುತ್ತಿದ್ದು, ಇಬ್ಬರು ಭಾರತೀಯ ಯೋಧರು ಮರಣೋತ್ತರವಾಗಿ ಪದಕಗಳನ್ನು ಪಡೆಯಲಿದ್ದಾರೆ.
ಕಾಂಗೊ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದ ಲ್ಯಾನ್ಸ್ ನಾಯ್ಕ್ ನಂದರಾಮ್ ಹಾಗೂ ದಕ್ಷಿಣ ಸುಡಾನ್‌ನಲ್ಲಿ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದ ರಾಜು ಜೋಸೆಫ್ ಈ ಬಾರಿಯ ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನದಂದು ಮರಣೋತ್ತರವಾಗಿ ಪದಗಳನ್ನು ಪಡೆಯಲಿದ್ದಾರೆ.
ಶಾಂತಿಪಾಲನಾ ಕಾರ್ಯಾಚರಣೆ ವೇಳೆ ಕಳೆದ ವರ್ಷ ತಾವು ತೋರಿದ್ದ ಧೈರ್ಯ ಹಾಗೂ ಸಾಹಸಗಳಿಗಾಗಿ ಈ ಪದಕಗಳನ್ನು ನೀಡಲಾಗಿದೆ. ಕಳೆದ ವರ್ಷ ಎಂಟು ಮಂದಿ ಭಾರತೀಯ ಯೋಧರಿಗೆ ಮರಣೋತ್ತರ ಪುರಸ್ಕಾರ ನೀಡಲಾಗಿತ್ತು.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಸೇನೆ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಿರುವ ರಾಷ್ಟ್ರಗಳಲ್ಲಿ ಭಾರತವು ಪ್ರಮುಖವಾಗಿದೆ. ಪ್ರಸಕ್ತ ಸೈಪ್ರಸ್, ಕಾಂಗೊ ಗಣರಾಜ್ಯ, ಹೈಟಿ, ಲೆಬನಾನ್, ಲೈಬೀರಿಯ, ಮಧ್ಯಪ್ರಾಚ್ಯ, ಸುಡಾನ್, ದಕ್ಷಿಣ ಸುಡಾನ್, ಪಶ್ಚಿಮ ಸಹರಾ ಮೊದಲಾದೆಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಲ್ಲಿ ಭಾರತದ ಸುಮಾರು 8,112 ಮಂದಿ ಯೋಧರು ಹಾಗೂ ಪೊಲೀಸ್ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ಇದುವರೆಗೆ ಭಾರತವು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 1,80,000 ಸಿಬ್ಬಂದಿಯನ್ನು ಒದಗಿಸಿದ್ದು, ಅದರಲ್ಲಿ ಲೈಬೀರಿಯದಲ್ಲಿ ಕಾರ್ಯಾಚರಿಸುತ್ತಿರುವ ವಿಶ್ವಸಂಸ್ಥೆಯ ಕಾರ್ಯಪಡೆಯಲ್ಲಿರುವ 103 ಸದಸ್ಯರ ಭಾರತೀಯ ಮಹಿಳಾ ಪೊಲೀಸ್ ಘಟಕವೂ ಒಳಗೊಂಡಿದೆ.
