ಮನೋರಂಜನೆ

ನಿವೃತ್ತರಿಗಾಗಿ ಟಿ-20 ಸರಣಿ ಆಯೋಜಿಸಲಿರುವ ಸಚಿನ್-ಶೇನ್ ವಾರ್ನ್

Pinterest LinkedIn Tumblr

SACHIN-WARNE

ನವದೆಹಲಿ: ಕ್ರಿಕೆಟ್ ನ ಎರಡು ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಅವರು ಕ್ರಿಕೆಟ್ ನಿಂದ ನಿವೃತ್ತಿಗೊಂಡ ಆಟಗಾರರಿಗಾಗಿ ವಿಶೇಷ ಟಿ-20 ಕ್ರಿಕೆಟ್  ಸರಣಿಯನ್ನು ಆಯೋಜಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಕ್ರಿಕೆಟ್ ಆಲ್ ಸ್ಟಾರ್ಸ್ ಲೀಗ್” ಎಂಬ ನಾಮಧೇಯದಲ್ಲಿ ಈ ಟಿ-20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದ್ದು, ವಿಶ್ವದ ಖ್ಯಾತನಾಮ ಮಾಜಿ ಕ್ರಿಕೆಟಿಗರು ಈ ಸರಣಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಖಾಸಗಿ ನಿಯತಕಾಲಿಕೆಯೊಂದು ವರದಿ ಪ್ರಕಟಿಸಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ರಿಕಿ ಪಾಟಿಂಗ್, ಆ್ಯಡಮ್ ಗಿಲ್ ಕ್ರಿಸ್ಟ್, ಗ್ಲೇನ್ ಮೆಕ್ ಗ್ರಾತ್, ಇಂಗ್ಲೆಂಡ್ ತಂಡದ ಮೈಕೆಲ್ ವಾನ್, ಆ್ಯಂಡ್ರ್ಯೂ ಫ್ಲಿಂಟ್ ಆಫ್ ಮತ್ತು ದಕ್ಷಿಣ ಆಫ್ರಿಕಾ ತಂಡ ಜಾಕ್ ಕಾಲಿಸ್ ಅವರಿಗೆ ಈಗಾಗಲೇ ಈ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ ಮತ್ತು ಈ ಆಟಗಾರರಿಂದಲೂ ಸಹ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ನಿಯತಕಾಲಿಕೆ ವರದಿ ಮಾಡಿದೆ.

ಇನ್ನು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರ ಮ್ಯಾನೇಜರ್ ನೀಲ್ ಮ್ಯಾಕ್ಸ್ ವೆಲ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ತಮ್ಮ ಕಕ್ಷೀದಾರರಾದ ಬ್ರೆಟ್ ಲೀ ಅವರು ಕ್ರಿಕೆಟ್ ಆಲ್ ಸ್ಟಾರ್ಸ್ ಲೀಗ್ ಟಿ-20 ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಆಹ್ವಾನ ಪಡೆದಿದ್ದಾರೆ. ಆದರೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾದ ಒಪ್ಪಿಗೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಸರಣಿಯಲ್ಲಿ ಸುಮಾರು 15 ಪಂದ್ಯಗಳಿದ್ದು,  42 ತಿಂಗಳ ದೀರ್ಘ ಅವಧಿಯಲ್ಲಿ ಈ ಸರಣಿ ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನು ಪ್ರತಿಯೊಂದು ಪಂದ್ಯಕ್ಕೂ ಸುಮಾರು 25 ಸಾವಿರ ಅಮೆರಿಕನ್ ಡಾಲರ್ ಹಣವನ್ನು ಆಟಗಾರರಿಗೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಶೇನ್ ವಾರ್ನ್ ಅವರು ಲಂಡನ್ ನಲ್ಲಿದ್ದು, ಈ 2015ರ ವರ್ಷಾಂತ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಕಂಡು ಸರಣಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟಾರೆ ಐಪಿಎಲ್, ಬಿಗ್ ಬ್ಯಾಶ್ ನಂತಹ ಬಹುಕೋಟಿ ಡಾಲರ್ ಉಧ್ಯಮವನ್ನು ಸೃಷ್ಟಿ ಮಾಡಿರುವ ಕ್ರಿಕೆಟ್ ನಲ್ಲಿ ಇದೀಗ ಮತ್ತೊಂದು ಪ್ರಮುಖ ಸರಣಿಯೊಂದು ಯೋಜನೆಗೊಳ್ಳುತ್ತಿದೆ. ಅದೂ ಕೂಡ ನಿವೃತ್ತರಿಗಾಗಿ ಸರಣಿ ಆಯೋಜನೆಗೊಳ್ಳುತ್ತಿದ್ದು, ಕ್ರಿಕೆಟ್ ನಿಂದ ದೂರವಾಗಿದ್ದ ಮಾಜಿ ಕ್ರಿಕೆಟರ್ ಗಳಿಗೆ ಮತ್ತೆ ಮೈದಾನಕ್ಕಿಳಿಯುವ ಅವಕಾಶ ಲಭಿಸುತ್ತಿದೆ.

Write A Comment