ಚೆನ್ನೈ: ದೇವರ ವಿಗ್ರಹಗಳನ್ನು ಕಳವು ಮಾಡುತ್ತಿದ್ದ ನಿರ್ಮಾಪಕನೋರ್ವನನ್ನು ಚೆನ್ನೈ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಸಹ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಧನಲಿಂಗಂ (387 ವರ್ಷ) ಎಂಬಾತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಸುಮಾರು 77 ಕೋಟಿ ರೂ. ಮೌಲ್ಯದ 18 ಕೆಜಿ ತೂಗುವ 8 ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ. ಹಳೆಯ ವಿಗ್ರಹಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು ಸಾವಿರಾರು ಕೋಟಿ ರು. ಲೆಕ್ಕಾಚಾರದಲ್ಲಿ ವ್ಯವಹಾರ ನಡೆಯುತ್ತಿದೆ. ಇದನ್ನೇ ದಾಳವಾಗಿಸಿಕೊಂಡಿದ್ದ ಧನಲಿಂಗ ತನ್ನ ಸಹಚರರೊಂದಿಗೆ ಸೇರಿ ಹಳೆಯ ವಿಗ್ರಹಗಳನ್ನು ಕಳವು ಮಾಡಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರಿಗೆ ಅನುಮಾನ ಬಾರದಿರಲಿ ಎಂಬ ಕಾರಣದಿಂದ ವಿಗ್ರಹಗಳನ್ನು ಆಟೋದಲ್ಲಿ ರವಾನಿಸುತ್ತಿದ್ದ ಧನಲಿಂಗಂ, ಒಬ್ಬರ ಕೈಯಿಂದ ಮತ್ತೊಬ್ಬರಿಗೆ ಹಸ್ತಾಂತರವಾಗುವಂತೆ ನೋಡಿಕೊಳ್ಳುತ್ತಿದ್ದ. ವಿಗ್ರಹ ಕಳ್ಳ ಸಾಗಣೆ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಧನಲಿಂಗಂನನ್ನು ಬಂಧಿಸಿದ್ದಾರೆ. ಚೆನ್ನೈನ ಮಾಂಬಲಂ ಪ್ರದೇಶದಲ್ಲಿ ಧನ ಲಿಂಗಂನಿಂದ ಸುಮಾರು 77 ಕೋಟಿ ರೂ. ಮೌಲ್ಯದ 18 ಕೆಜಿ ತೂಗುವ ವಿಗ್ರಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ವಿಗ್ರಹಗಳು ಹತ್ತು ಮತ್ತು ಹನ್ನೊಂದನೇ ಶತಮಾನದಾಗಿದ್ದು, ತಮಿಳುನಾಡಿನ ತಿರುವಣ್ಣಾಮಲೈನ ವಿವಿಧ ದೇವಾಲಯಗಳಲ್ಲಿ ಕಳ್ಳತನ ಮಾಡಿದವುಗಳಿರಬಹುದು ಎಂದು ಪೊಲೀಸರು ಶಂಕಿಸಿದ್ಧಾರೆ.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಪೊಲೀಸರು ಧನಲಿಂಗಂ ಮತ್ತು ಆತನ ನಾಲ್ಕು ಸಹಚರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದಲ್ಲಿ ಮತ್ತಷ್ಟು ಕಾಲಿವುಡ್ ಮಂದಿಯ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ.
