ಅಂತರಾಷ್ಟ್ರೀಯ

ಗಡಿ ವಿವಾದ ಮತ್ತು ಭದ್ರತೆ ಸಮಸ್ಯೆ ವಿಚಾರದಲ್ಲಿ ಕುಟಿಲ ತಂತ್ರ; ಮೋದಿ ವಿರುದ್ಧ ಚೀನಾ ಪತ್ರಿಕೆ ಟೀಕೆ

Pinterest LinkedIn Tumblr

modi pensieve

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಂತರಿಕ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಚೀನಾದೊಂದಿಗಿನ ಗಡಿ ವಿವಾದ ಮತ್ತು ಭದ್ರತಾ ಬಿಕ್ಕಟ್ಟು ವಿಚಾರಗಳಲ್ಲಿ ಸೂಕ್ಷ್ಮ ಕುಟಿಲ ತಂತ್ರಗಳನ್ನು ನಡೆಸುತ್ತಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪ್ರಮುಖ ಆಂಗ್ಲ ದೈನಿಕವೊಂದು ಆರೋಪಿಸಿದೆ.

ಮೋದಿ ಅವರು ಮೇ 14ರಿಂದ ಮೂರು ದಿನಗಳ ಚೀನಾ ಪ್ರವಾಸ ಕೈಗೊಳ್ಳುತ್ತಿದ್ದು, ಈ ಭೇಟಿಗೆ ಮುನ್ನ ಪತ್ರಿಕೆ ಪ್ರಕಟಿಸಿರುವ ಲೇಖನದಲ್ಲಿ ಮೋದಿ ಅವರನ್ನು ಕಟುವಾಗಿ ಟೀಕಿಸಲಾಗಿದೆ.

‘ಗದ್ದುಗೆಗೇರಿದ ಕ್ಷಣದಿಂದಲೇ ಮೋದಿ ಅವರು ಜಪಾನ್, ಅಮೆರಿಕ ಮತ್ತು ಐರೋಪ್ಯ ದೇಶಗಳೊಂದಿಗಿನ ಸಂಬಂಧ ಬಲಪಡಿಸಲು ಮುಂದಾದರು. ಈ ಮೂಲಕ ದೇಶದ ಮೂಲಸೌಕರ್ಯ ಸಮಸ್ಯೆಯನ್ನು ಬಿಂಬಿಸುವುದರ ಜತೆಗೆ ದೇಶದ ಆರ್ಥಿಕ ಅಭಿವೃದ್ಧಿಯ ಕುರಿತು ಪ್ರಚುರ ಪಡಿಸಲು ಪ್ರಾರಂಭಿಸಿದರು’ ಎಂದು ‘ಮೋದಿ ಅವರ ಭೇಟಿ ಚೀನಾ–ಭಾರತ ನಂಟು ವೃದ್ಧಿಸುವುದೇ?’ ಎಂಬ ಲೇಖನದಲ್ಲಿ ‘ಗ್ಲೋಬಲ್ ಟೈಮ್ಸ್‌’ ಹೇಳಿದೆ.

‘ಕಳೆದ ವರ್ಷದ ಅವರ ಕೆಲವು ರಾಜತಾಂತ್ರಿಕ ನಡೆಗಳು ಮೋದಿ ಕಲ್ಪನಾವಾದಿಗಿಂತಲೂ ವ್ಯವಹಾರಿಕ ವಾದಿ ಎಂಬುದನ್ನು ಸಾಬೀತುಪಡಿಸಿದೆ’ ಎಂದು ವಿಶ್ಲೇಷಿಸಿದೆ.

‘ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಮೋದಿ ಅವರು ವಿವಾದಿತ ಗಡಿ ಪ್ರದೇಶಕ್ಕೆ ಭೇಟಿ ನೀಡಬಾರದು ಮತ್ತು ಅದರ ಕುರಿತು ಮಾತುಕತೆಗೆ ಹಿನ್ನಡೆಯುಂಟುಮಾಡುವಂತೆ ಪ್ರಸ್ತಾಪಿಸಬಾರದು’ ಎಂದು ಲೇಖನದಲ್ಲಿ ಒತ್ತಾಯಿಸಲಾಗಿದೆ.

‘ದಲೈಲಾಮಾ ಅವರಿಗೆ ಬೆಂಬಲ ನೀಡುವುದನ್ನು ಭಾರತ ಸರ್ಕಾರ ನಿಲ್ಲಿಸಬೇಕು. ಟಿಬೆಟ್‌ ಸಮಸ್ಯೆಯನ್ನು ಉಭಯ ರಾಷ್ಟ್ರಗಳ ಸಂಬಂಧದ ನಡುವಣ ಅಡ್ಡಿ ಎಂದು ಬಿಂಬಿಸಬಾರದು’ ಎಂದೂ ಪತ್ರಿಕೆ ಆಗ್ರಹಿಸಿದೆ.

Write A Comment