India

ಅಪಘಾತ ಪ್ರಕರಣಗಳಲ್ಲಿ ಲಘುವಾದ ಶಿಕ್ಷೆ ನೀಡುವುದು ನ್ಯಾಯಕ್ಕೇ ಅವಮಾನ : ಸುಪ್ರೀಂ

Pinterest LinkedIn Tumblr

Suprim-court

ನವದೆಹಲಿ, ಮಾ.31-ಅಪಘಾತ ಪ್ರಕರಣಗಳಲ್ಲಿ ಆರೋಪಿಗಳಿಗೆ ತೀರಾ ಲಘುವಾದ ಶಿಕ್ಷೆ ನೀಡುವುದು ನ್ಯಾಯಕ್ಕೇ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯ, ಬಡವರ ಜೀವಗಳಿಗೂ ಶ್ರೀಮಂತರ ಜೀವಿಗಳಿಗಿದ್ದಷ್ಟೇ ಮೌಲ್ಯವಿದೆ ಎಂದು ಖಾರವಾಗಿ ಹೇಳಿದೆ. ಚುನಾಯಿತ ಪ್ರತಿನಿಧಿಗಳು ಅಪಘಾತ ವಿಚಾರಣೆ ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲಿಸಿ ಬಿಗಿ ಕಾನೂನು ರೂಪಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಭಾರತದಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಕಾಯ್ದೆಗಳು ವಿವಾಸ್ಪಾದವಾಗಿಯೇ ಇದೆ.

ಚಾಲಕರ ವಿರುದ್ಧ ಯಾವುದೇ ಸೂಕ್ತ ಕ್ರಮಕ್ಕೆ ಅಲ್ಲಿ ಅವಕಾಶವೇ ಇಲ್ಲ. ಚಾಲಕರು ಮದ್ಯಪಾನ ಮಾಡಿ ನಿರ್ಲಕ್ಷ್ಯದಿಂದ ವಾಹನಗಳನ್ನು ಚಲಾಯಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಬಡ ಜನರೇ ಅವರಿಗೆ ಬಲಿಯಾಗುತ್ತಿದ್ದಾರೆ. ರಸ್ತೆಯ ಮೇಲೆ ವಾಹನಗಳನ್ನು ಚಲಾಯಿಸುವ ಚಾಲಕರು ಅಲ್ಲಿ ತಾವೇ ರಾಜರೆಂದು ತಿಳಿದುಕೊಂಡಿದ್ದಾರೆಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಪ್ರಫುಲ್ಲ ಪಂತ್ ಅವರನ್ನೊಳಗೊಂಡ ಪೀಠ ತೀವ್ರ ಆಕ್ಷೇಪವ್ಯಕ್ತಪಡಿಸಿದೆ.

ಬಡವರಲ್ಲಿ ನಮ್ಮ ಜೀವಕ್ಕೆ ಭದ್ರತೆಯೇ ಇಲ್ಲ ಎಂಬ ಭಾವನೆ ಮೂಡಿದೆ. ಶ್ರೀಮಂತರು ತಮ್ಮ ವಾಹನಗಳನ್ನು ಬೇಕಾಬಿಟ್ಟಿ ಓಡಿಸುತ್ತಾರೆ. ಅವರಿಗೆ ಬಡವರ ಜೀವಗಳ ಬಗ್ಗೆ ಕಾಳಜಿಯೇ ಇಲ್ಲ. ತಾವೇ ದೊಡ್ಡವರು ಎಂದು ಶ್ರೀಮಂತರು ತಿಳಿದಂತಿದೆ. ಅಪಘಾತ ಕಾಯ್ದೆಗೆ ತಿದ್ದುಪಡಿಯಾಗಲೇಬೇಕು. ಅದನ್ನು ಚುನಾಯಿತ ಪ್ರತಿನಿಧಿಗಳು ಮಾಡಬೇಕು. ಅಪಘಾತ ಮಾಡಿದವನಿಗೆ ಸೂಕ್ತ ಶಿಕ್ಷೆಯಾಗುವಂತಿರಬೇಕು ಎಂದು ನ್ಯಾಯಾಧೀಶರು ಚುಚ್ಚಿದ್ದಾರೆ. 2007ರಲ್ಲಿ ಅಪಘಾತ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಸೌರಭ್ ಭಕ್ಷಿ ಎಂಬುವನಿಗೆ ನ್ಯಾಯಾಲಯವೊಂದು ವಿಧಿಸಿದ್ದ 2 ವರ್ಷಗಳ ಶಿಕ್ಷೆಯನ್ನು, ಮೇಲಿನ ನ್ಯಾಯಾಲಯ ಕೇವಲ 24 ದಿನಗಳಿಗೆ ಇಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮಿಶ್ರಾ ಮತ್ತು ಪಂತ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Write A Comment