ಕನ್ನಡ ವಾರ್ತೆಗಳು

ಘನತ್ಯಾಜ್ಯ ನಿರ್ವಹಣೆ ಅಸಮರ್ಪಕ :ಮನಪಾ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರಿಂದ ಭಿತ್ತಿಪತ್ರ ಹಿಡಿದು ಪ್ರತಿಭಟನೆ

Pinterest LinkedIn Tumblr

Mcc_Meet_Protest_1

ಮಂಗಳೂರು, ಮಾ.31: ಮನಪಾ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಆಕ್ಷೇಪ, ವಿರೋಧ ಹಾಗೂ ಸದಸ್ಯರ ಪ್ರತಿಭಟನೆಗೂ ಮನಪಾ ಸಾಮಾನ್ಯ ಸಭೆ ಇಂದು ಸಾಕ್ಷಿಯಾಯಿತು. ನೂತನ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಇಂದು ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ ತೀವ್ರ ಚರ್ಚೆಗೆ ಕಾರಣವಾಯಿತು.

Mcc_Meet_Protest_2

ಘನತ್ಯಾಜ್ಯ ನಿರ್ವಹಣೆಗೆ ಪ್ರಸ್ತುತ ವಿಧಿಸಲಾಗಿರುವ ದರ ಸಮರ್ಪಕವಾಗಿಲ್ಲ. 250ರಿಂದ 400 ರೂ. ವಾರ್ಷಿಕ ತೆರಿಗೆ ಕಟ್ಟುವ ಜನಸಾಮಾನ್ಯರು ಘನತ್ಯಾಜ್ಯ ನಿರ್ವಹಣಾ ಶುಲ್ಕವಾಗಿ 480 ರೂ.ಗಳಷ್ಟು ನೀಡಬೇಕಾಗುತ್ತದೆ ಎಂದು ಮನಪಾದ ಹಿರಿಯ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೊ ಸದನದ ಗಮನ ಸೆಳೆದರು. ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಹಾಗೂ ಸದಸ್ಯ ಪ್ರೇಮಾನಂದ ಶೆಟ್ಟಿಯವರು ಮನೆಗಳಿಂದ ಕಸ ಸಂಗ್ರಹ ಸೂಕ್ತವಾಗಿ ಆಗುತ್ತಿಲ್ಲ ಎಂದು ಆಕ್ಷೇಪಿಸಿದರೆ, ಆಡಳಿತ ಪಕ್ಷದ ಸದಸ್ಯೆ ಕವಿತಾ ಸನಿಲ್ ತೆರೆದ ವಾಹನದಲ್ಲಿ ಕಸ ವಿಲೇವಾರಿ ನಡೆಯುತ್ತಿದೆ ಎಂದು ದೂರಿದರು. ಮುಂಬೈಯ ಆ್ಯಂಟನಿ ಕಂಪೆನಿಗೆ 7 ವರ್ಷಗಳ ಅವಧಿಗೆ ಟೆಂಡರ್ ನೀಡಿ ಎರಡು ತಿಂಗಳು ಕಳೆದರೂ ಅವರಿನ್ನೂ ಪ್ರಾಥಮಿಕ ಹಂತದಲ್ಲೇ ಇದ್ದಾರೆ ಎಂದು ವಿಪಕ್ಷ ಸದಸ್ಯೆ ರೂಪಾ ಡಿ. ಬಂಗೇರ ಆರೋಪಿಸಿದರು.

Mcc_Meet_Protest_3 Mcc_Meet_Protest_4

ಈ ನಡುವೆ ಸಿಪಿಎಂ ಸದಸ್ಯ ದಯಾನಂದ ಶೆಟ್ಟಿ, ಜೆಡಿಎಸ್‌ನ ಅಬ್ದುಲ್ ಅಝೀಝ್ ಕುದ್ರೋಳಿ, ರಮೀಝಾ ಬಾನು ಹಾಗೂ ಎಸ್‌ಡಿಪಿಐ ಸದಸ್ಯ ಅಯಾಝ್ ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ ಕುರಿತಾದ ಭಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದು ಮೇಯರ್ ಪೀಠದೆದುರು ತೆರಳಿ ವಿರೋಧ ವ್ಯಕ್ತ ಪಡಿಸಿದರು. ‘ಲಕ್ಷದ ಕಾಮಗಾರಿ ಕೋಟಿಗೆ ಕೊಟ್ಟರೂ ಕೆಲಸ ಮಾತ್ರ ಶೂನ್ಯ, ಶುಲ್ಕ ಸಂಗ್ರಹ ಮಾಡುವ ಎಲ್ಲಾ ಮನೆಗಳಿಂದ ಕಸ ಸಂಗ್ರಹ ಆಗುತ್ತಿಲ್ಲ’, ಗುಡಿಸುವವರಿಲ್ಲ, ಕೇಳುವವರಿಲ್ಲ, ಕಾರ್ಮಿಕರಿಗೆ ಸಂಬಳ ಇಲ್ಲ, ಆಂ್ಯಟನಿ ಕಂಪೆನಿ ವೇಸ್ಟ್ ವೇಸ್ಟ್’, ‘ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ಆಗುತ್ತಿಲ್ಲ’ ಎಂಬ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಕೆಲ ಹೊತ್ತು ಪ್ರತಿಭಟಿಸಿದರು.

Mcc_Meet_Protest_9

 

ಈ ಸಂದರ್ಭ ಆಯುಕ್ತೆ ಹೆಫ್ಸಿಬಾರಾಣಿ ಕೊರ್ಲಪಟಿ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ. ಆ್ಯಂಟನಿ ಸಂಸ್ಥೆಯವರು ಮುಂಬೈನಲ್ಲಿ ಕೂತು ಇಲ್ಲಿ ಕಸ ವಿಲೇವಾರಿ ಮಾಡುವ ಬದಲು ಇಲ್ಲೇ ಬಂದು ಕಾರ್ಯ ನಿರ್ವಹಿಸಬೇಕೆಂಬ ತಾಕೀತಿನೊಂದಿಗೆ ಅವರಿಗೆ ಪಾವತಿಯನ್ನೂ ಬಾಕಿ ಇರಿಸಲಾಗಿದೆ ಎಂದು ಹೇಳಿದರು. ಆದರೆ ಆಯುಕ್ತರ ಉತ್ತರದಿಂದ ವಿಪಕ್ಷ ಸದಸ್ಯರು ತೃಪ್ತರಾಗದೆ ತಮ್ಮ ವಿರೋಧವನ್ನು ಮುಂದುವರಿಸಿದರು.

Mcc_Meet_Protest_5

ಈ ಸಂದರ್ಭ ಪ್ರತಿಕ್ರಿಯಿಸಿದ ನೂತನ ಮೇಯರ್ ಜೆಸಿಂತಾ, ತೆರೆದ ವಾಹನಗಳಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘನತ್ಯಾಜ್ಯ ಶುಲ್ಕಕ್ಕೆ ಸಂಬಂಧಿಸಿ ತೆರಿಗೆ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ಮುಂದಿನ ಸಭೆಯಲ್ಲಿ ನಿರ್ಧಾರ ಮಂಡಿಸಲಾ ಗುವುದು ಎಂದು ಭರವಸೆ ನೀಡಿದರು.

ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಆದೇಶ :

ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಕುರಿತಂತೆ ನಡೆದ ಚರ್ಚೆಯ ಹ್ನಿನೆಲೆಯಲ್ಲಿ, ಅನಧಿಕೃತ ಜಾಹೀರಾತು ಫಲಕಗಳಿದ್ದಲ್ಲಿ ಅದನ್ನು ತಕ್ಷಣ ತೆರವುಗೊಳಿಸುವಂತೆ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಆದೇಶಿಸಿದರು.

ಜಾಹೀರಾತು ಫಲಕಗಳ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸುಧೀರ್ ಶೆಟ್ಟಿ, ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪರಿಷತ್‌ನಲ್ಲಿ ಮಂಗಳೂರು ನಗರದಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಕುರಿತಾದ ಪ್ರಶ್ನೆಗೆ 19 ಅನಧಿಕೃತ ಫಲಕಗಳಿರುವುದಾಗಿ ಮನಪಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ನಾನು ವೈಯಕ್ತಿಕವಾಗಿ ಈ ಬಗ್ಗೆ ಪಾವಂಜೆಯಿಂದ ಕೆಪಿಟಿ ಹಾಗೂ ಕೆಪಿಟಿಯಿಂದ ಏರ್‌ಪೋರ್ಟ್‌ವರೆಗಿನ ಎರಡು ರಸ್ತೆಯನ್ನು ಸಮೀಕ್ಷೆ ಮಾಡಿದಾಗ 36 ಫಲಕಗಳು ಕಂಡುಬಂದಿವೆ ಎಂದು ಭಾವಚಿತ್ರದ ದಾಖಲೆಯನ್ನು ಸಭೆಗೆ ಮಂಡಿಸಿದರು.

Mcc_Meet_Protest_6

ನರ್ಮ್ ಬಸ್ : ಜಿಲ್ಲಾಧಿಕಾರಿಗೆ ಕೋರಿಕೆ ಪಟ್ಟಿ

ನಗರದಲ್ಲಿ ನರ್ಮ್ ಯೋಜನೆಯಡಿ 35 ಬಸ್ಸುಗಳನ್ನು ಓಡಿಸಲಿದ್ದಾರೆ. ಪತ್ರಿಕೆಯೊಂದರ ಮಾಹಿತಿಯ ಪ್ರಕಾರ ಕೆಎಸ್ಸಾರ್ಟಿಸಿಯವರು ಈಗಾಗಲೇ ಸಿಟಿ ಬಸ್ಸುಗಳು ಬಹುತೇಕವಾಗಿ ಇರುವ ಮಾರ್ಗಗಳಲ್ಲೇ ಆ ಬಸ್ಸುಗಳನ್ನು ಓಡಿ ಸಲು ಮುಂದಾಗಿದ್ದಾರೆ ಎಂದು ಮನಪಾ ಸದಸ್ಯ ಅಬ್ದುರ್ರವೂಫ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಸಂದರ್ಭ ಮೇಯರ್ ಮಾತನಾಡಿ, ನಗರದಲ್ಲಿ ಯಾವ ಮಾರ್ಗಗಳಲ್ಲಿ ಬಸ್ಸಿನ ಅಗತ್ಯವಿದೆ ಎಂಬುದನ್ನು ನಿಗದಿಪಡಿಸಿ ಒಂದು ವಾರದೊಳಗೆ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಲಾಗುವುದು ಎಂದು ನಿರ್ಧಾರ ಪ್ರಕಟಿಸಿದರು.

Mcc_Meet_Protest_7

ಕೇಬಲ್ ಅಳವಡಿಕೆ : ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲು ನಿರ್ಣಯ

ರಸ್ತೆಗಳನ್ನು ಅಗೆದು ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ, ಮನಪಾದಿಂದ ಒಪ್ಪಿಗೆ ಪಡೆಯದೆ ಅವ್ಯಾಹತವಾಗಿ ಕೇಬಲ್‌ಗಳನ್ನು ಅಳವಡಿಸುತ್ತಿರುವ ಬಗ್ಗೆ ಚರ್ಚೆಯ ಕುರಿತಂತೆ ಪ್ರತಿಕ್ರಿಯಿಸಿದ ಮೇಯರ್ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಲು ನಿರ್ಣಯಿಸಿದರು. ನೀರಿನ

ನೀರಿನ  ಸಮಸ್ಯೆಗೆ ಸಿಗದ ಪರಿಹಾರ!

ಸಭೆಯಲ್ಲಿ ಮನಪಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕುರಿತಂತೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಸದಸ್ಯರಾದ ಸುಮಿತ್ರಾ, ರೇವತಿ, ಪ್ರತಿಭಾ ಕುಳಾಯಿ
ಮತ್ತಿತರರು ತಮ್ಮ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುವಂ ತಾಗಿದೆ. ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರಕುತ್ತಿಲ್ಲ ಎಂದು ದೂರಿದರು.

Mcc_Meet_Protest_8

 

ಸದಸ್ಯ ತಿಲಕ್‌ರಾಜ್ ಮಾತನಾಡಿ, ಹಲವಾರು ಅನಧಿಕೃತ ಸಂಪರ್ಕಗಳಿ ರುವ ಬಗ್ಗೆ ಅಧಿಕಾರಿಗಳೇ ಒಪ್ಪಿಕೊಂಡರೂ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಆದರೆ ಸದಸ್ಯರ ಆಕ್ಷೇಪ ಮುಂದುವರಿದಂತೆಯೇ ಮೇಯರ್ ಪ್ರಶ್ನಾವಳಿ ಅವಧಿಯನ್ನು ಕೊನೆಗೊಳಿಸಿ ಕಾರ್ಯಸೂಚಿ ಮಂಡಿ ಸಲು ಮುಖ್ಯ ಸಚೇತಕರಿಗೆ ಅವಕಾಶ ನೀಡಿದರು.

ಸಭೆಯಲ್ಲಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರಿನಾಥ್, ದೀಪಕ್ ಪೂಜಾರಿ, ಪ್ರಕಾಶ್ ವಿ. ಸಾಲ್ಯಾನ್, ಕೇಶವ ಉಪಸ್ಥಿತರಿದ್ದರು.

Write A Comment