ಮೂಲ್ಕಿ,ಮಾರ್ಚ್.25: ಗ್ರಾಮೀಣ ಭಾಗದಲ್ಲಿ ನಿದ್ದೆಗೆಡಿಸಿರುವ ಪಾದೂರು ಪೈಪ್ಲೈನ್ನ್ನು ಸಂಘಟನಾತ್ಮಕವಾಗಿ ಹೋರಾಟ ಮಾಡಲು ಗ್ರಾಮ ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕು, ತಮ್ಮ ಜಮೀನು ಬಳಕೆ ಆಗುವುದಿಲ್ಲ ಎಂಬ ಅಸಡ್ಡೆಯನ್ನು ಇತರ ಗ್ರಾಮಸ್ಥರು ತೋರದೆ ಸಂತ್ರಸ್ತರೊಂದಿಗೆ ಒಗ್ಗೂಡಿ ವಿರೋಧಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಕಳತ್ತೂರು ಜನಜಾಗೃತಿ ಸಮಿತಿಯ ದೇವಿಪ್ರಸಾದ ಶೆಟ್ಟಿ ಬೆಳಪು ಹೇಳಿದರು.
ಅವರು ಬಳ್ಕುಂಜೆ ಗ್ರಾಮ ಪಂಚಾಯಿತಿಯಲ್ಲಿ ಪಾದೂರು ಪೈಪ್ಲೈನ್ ವಿರುದ್ಧ ಬುಧವಾರ ನಡೆದ ಊರ ಪ್ರಮುಖರೊಂದಿಗೆ ನಡೆದ ಮಾತುಕತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮಾತನಾಡಿ ಪಾದೂರು ಪೈಪ್ಲೈನ್ ಕಾಮಗಾರಿಯನ್ನು ಏಕಾಏಕಿ ಸ್ಥಳೀಯರನ್ನು ಕತ್ತಲಲ್ಲಿಟ್ಟು ಪ್ರಾರಂಭಿಸಲಾಗಿದೆ. ಇದು ಗುತ್ತಿಗೆದಾರರ ಉದ್ಧಟತನವೇ ಅಥವ ಕಂಪೆನಿಯವರ ಕೈವಾಡ ಏನೆಂದು ಜನತೆಗೆ ತಿಳಿಹೇಳಬೇಕಾಗಿದೆ. ಗ್ರಾಮೀಣ ಬಾಗದ ಜನರ ಮೂಲ ಕಸುಬು ಕೃಷಿಗೆ ಇದರಿಂದ ಕೊಡಲಿ ಪೆಟ್ಟು ಬಿದ್ದಿದೆ ಎಂದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಪ್ರತಿಕ್ರಿಯಿಸಿ ಪಾದೂರಿನಲ್ಲಿ ಶೇಕಡ ತೊಂಬತ್ತರಷ್ಟು ಕಾಮಗಾರಿ ಮುಗಿದಿದೆ. ಇದರಿಂದ ಪೈಪ್ಲೈನ್ ನಡೆಸುವುದು ನಿಶ್ಚಿತವಾಗಿದೆ ಗ್ರಾಮ ಪಂಚಾಯಿತಿಗಳಿಗೆ ಇದರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಜನರ ವಿರೋಧದ ನಡುವೆ ಕಾಮಗಾರಿ ಮಾಡಲು ಸಾಧ್ಯವಿಲ್ಲ, ರೈತರಿಗೆ ನ್ಯಾಯಯುತ ಬೆಲೆಯನ್ನೂ ನೀಡಿಲ್ಲ, ಸರಿಯಾದ ಸರ್ವೆ ಆಗಿಲ್ಲ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಪೈಪ್ಲೈನ್ಗೆ ಒಳಗಾದ ಆಸುಪಾಸಿನ ಜಮೀನನ್ನು ಪರಾಬಾರೆ ಮಾಡಲು ಸಾದ್ಯವಿಲ್ಲ ಎಂದರು.
ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಬ್ಯಾಂಕ್ನ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಹರೀಶ್ಚಂದ್ರ ಶೆಟ್ಟಿ, ಅರುಣ್ ಕುಮಾರ್, ಲಾರೆನ್ಸ್ ಫೆರ್ನಾಂಡಿಸ್, ಶಿವರಾಮ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ರವೀಂದ್ರ ಶೆಟ್ಟಿ, ಪೌಲ್. ಡಿ ಸೋಜ, ಅನಿತಾ ಶೆಟ್ಟಿ, ಪದ್ಮ, ಸುಶೀಲಾ, ಮೋಹನ್ ಇನ್ನಿತರರು ಇದ್ದರು.
ನರೇಂದ್ರ ಕೆರೆಕಾಡು_
