ಮನೋರಂಜನೆ

ಹಿಂದಿ ಚಿತ್ರರಂಗದ ‘ಚಾಕಲೇಟ್‌’ ಹೀರೊ ಶಶಿಕಪೂರ್‌ಗೆ ಫಾಲ್ಕೆ ಪ್ರಶಸ್ತಿ ಗೌರವ: ‘ಮೇರೆ ಪಾಸ್‌ ಮಾ ಹೈ!’

Pinterest LinkedIn Tumblr

shasi

ನವದೆಹಲಿ: 2014ನೇ ಸಾಲಿನ  ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಹಿರಿಯ ನಟ, ನಿರ್ಮಾಪಕ  ಶಶಿ ಕಪೂರ್‌ (77)  ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು  ಸ್ವರ್ಣ ಕಮಲ ಸ್ಮರಣಿಕೆ ಮತ್ತು ₨ 10 ಲಕ್ಷ ನಗದು ಒಳಗೊಂಡಿದೆ.

ಅವರು ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ 46ನೇ ಮತ್ತು ಕಪೂರ್‌ ಕುಟುಂಬದ ಮೂರನೇ ವ್ಯಕ್ತಿ. ನಟ, ನಿರ್ಮಾ­ಪಕ­ರಾಗಿದ್ದ ಅವರ ತಂದೆ ಪೃಥ್ವಿರಾಜ್‌ ಕಪೂರ್‌ ಮತ್ತು ಭಾರತೀಯ ಚಿತ್ರರಂಗದ ಷೋಮ್ಯಾನ್‌ ಅಣ್ಣ ರಾಜ್‌ ಕಪೂರ್‌ ಫಾಲ್ಕೆ  ಪ್ರಶಸ್ತಿ ಪಡೆದಿದ್ದರು. ಜತೆಗೆ ಈ ಮೂವರಿಗೂ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

ಹಿಂದಿ ಚಿತ್ರರಂಗದ ‘ಚಾಕಲೇಟ್‌’ ಹೀರೊ ಶಶಿಕಪೂರ್‌ಗೆ ಫಾಲ್ಕೆ ಪ್ರಶಸ್ತಿ ಗೌರವ: ‘ಮೇರೆ ಪಾಸ್‌ ಮಾ ಹೈ!’

ದೀವಾರ್ ಚಿತ್ರ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದ ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್‌ ಚಿತ್ರೋದ್ಯಮಿ ಎನ್. ಆರ್. ಮಾಂಡ್ರೆ ಅವರ ಜತೆ ಪ್ರಜಾವಾಣಿ ಸಂಗ್ರಹ ಚಿತ್ರ‌

‘ಆಜ್‌ ಮೇರೆ ಪಾಸ್‌ ಬಿಲ್ಡಿಂಗ್‌ ಹೈ, ಬಂಗ್ಲಾ ಹೈ, ಗಾಡೀ ಹೈ, ಬ್ಯಾಂಕ್‌ ಬ್ಯಾಲನ್ಸ್‌ ಹೈ. ತೇರೇ ಪಾಸ್‌ ಕ್ಯಾ ಹೈ?
-ಅಮಿತಾಭ್ ಬಚ್ಚನ್‌ ತನ್ನ ಕಂಚಿನ ಕಂಠದಲ್ಲಿ ಪ್ರಶ್ನಿಸುತ್ತಾರೆ. ಶಶಿಕಪೂರ್‌ ಅಷ್ಟೇ ತಣ್ಣನೆಯ ಆದರೆ ದೃಢವಾದ ಸ್ವರದಲ್ಲಿ ಉತ್ತರಿಸುತ್ತಾರೆ- ‘ಮೇರೆ ಪಾಸ್‌ ಮಾ  ಹೈ..’

-ಅದು ‘ದೀವಾರ್‌’. 70ರ ದಶಕದಲ್ಲಿ ಬಾಲಿವುಡ್‌ ಸಿನಿಮಾಗಳಿಗೆ ಹೊಸ ಭಾಷ್ಯವೊಂದನ್ನು ಬರೆದ ಸೂಪರ್‌ಹಿಟ್‌  ಸಿನಿಮಾ. ಯಶ್‌ ಚೋಪ್ರಾ ಎಂಬ ನಿರ್ದೇಶಕ ತನ್ನೆಲ್ಲ ಪ್ರತಿಭೆಯನ್ನೂ ಬಸಿದು ಮಾಡಿದ ಆ ಚಿತ್ರದಲ್ಲಿ ಸಲೀಂ- ಜಾವೇದ್‌ ಎಂಬ ಜೋಡಿ ಬರೆದ ಡೈಲಾಗ್‌ನ ಮೋಡಿಗೆ ಥಿಯೇಟರ್‌ನಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ.

ಕಳೆದ ಶತಮಾನದ 70ರ ದಶಕದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕು ಚಿತ್ರಗಳಲ್ಲಿ ಒಂದೆಂದು ಖ್ಯಾತಿ ಪಡೆದ ‘ದೀವಾರ್‌’ ಅನ್ನು ಅನುಸರಿಸಿ ಬಾಲಿವುಡ್‌ನಲ್ಲಿ ಇವತ್ತಿಗೂ ಹೊಸ ಸಿನಿಮಾಗಳು ಬರುತ್ತಿವೆ! ಬಾಲಿವುಡ್‌ನ ಈವರೆಗಿನ ಅತ್ಯುತ್ತಮ 25 ಚಿತ್ರಗಳಲ್ಲಿ ‘ದೀವಾರ್‌’ ಮೊದಲ ಸಾಲಿನಲ್ಲಿ ನಿಲ್ಲುತ್ತದೆಂದು ಈಗಲೂ ವಿಮರ್ಶಕರು ಷರಾ ಬರೆಯುತ್ತಾರೆ. ‘ದೀವಾರ್‌’ ಎನ್ನುವ ಸಿನಿಮಾ ಅಮಿತಾಭ್‌ಗೆ ತಂದುಕೊಟ್ಟ ‘ಆ್ಯಂಗ್ರಿ ಯಂಗ್ ಮ್ಯಾನ್’ ಇಮೇಜ್‌, ಆ ಬಳಿಕ 30 ವರ್ಷಗಳ ಕಾಲ ನಡೆದುಕೊಂಡು ಬಂತು. ಯಶ್‌ ಚೋಪ್ರಾ ಇಮೇಜ್‌ ಆಕಾಶಕ್ಕೇರಿತು. ಸಲೀಂ ಜಾವೇದ್‌ ಅಂತೂ ಇತಿಹಾಸ ನಿರ್ಮಿಸಿದರು. ಆದರೆ ಶಶಿಕಪೂರ್‌?

ಮೇರೆ ಪಾಸ್‌ ಮಾ ಹೈ- ಎಂಬ ತಣ್ಣನೆಯ ಡೈಲಾಗ್‌ನಷ್ಟೇ ತಣ್ಣಗೆ ಬೆಳೆಯುತ್ತಾ ಹೋದರು ಶಶಿಕಪೂರ್‌! ನೋಡಲು ಅಷ್ಟೇನೂ ಸ್ಪುರದ್ರೂಪಿಯಲ್ಲದ, ಕಟ್ಟುಮಸ್ತಾದ ದೇಹದಾರ್ಢ್ಯವೂ ಇಲ್ಲದ ಶಶಿಕಪೂರ್‌, ತನ್ನ ತೀಕ್ಷ್ಣ ಕಣ್ಣು, ಧ್ವನಿಯ ಏರಿಳಿತ ಮತ್ತು ನೇರ ನಡೆನುಡಿಗಳಿಂದಲೇ ಬಾಲಿವುಡ್‌ನಲ್ಲಿ ಹೀರೊ ಆಗಿ ಮೆರೆದರು. ಹಾಗೆಂದೇ ಈಗ ಐವರು ಜ್ಯೂರಿಗಳ ಸಮಿತಿಯು ಶಶಿಕಪೂರ್‌ ಅವರನ್ನು ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದೆ. 4ರ ಎಳವೆಯಲ್ಲೇ ತಂದೆ ಪೃಥ್ವಿರಾಜ್‌ ಕಪೂರರ ನಾಟಕ ಸಂಸ್ಥೆಯಲ್ಲಿ ಮುಖಕ್ಕೆ ಬಣ್ಣ ಹಚ್ಚಿ, ಕಳೆದ ವಾರವಷ್ಟೇ (ಮಾರ್ಚಿ 18) 77ಕ್ಕೆ ಕಾಲಿಟ್ಟ ಶಶಿಕಪೂರ್‌ ಅವರಿಗೆ ನಿಜಕ್ಕೂ ಇದು ಜೀವಮಾನದ ಗೌರವ.

ಪೈಪೋಟಿಯ ಯುಗದಲ್ಲಿ..
ಬಾಲಿವುಡ್‌ನ ಹೀರೋ ಕೇಂದ್ರಿತ ಕಮರ್ಷಿಯಲ್‌ ಚಿತ್ರವ್ಯವಸ್ಥೆಯಲ್ಲಿ ಶಶಿಕಪೂರ್‌ ವಹಿಸಿದ ಪಾತ್ರವೂ ಅತ್ಯಂತ ವಿಶಿಷ್ಟ. ತನ್ನ ಕಾಲದ ಅತ್ಯಂತ ಪ್ರತಿಭಾವಂತ ನಟರ ಜತೆಗೆಲ್ಲ ಪೈಪೋಟಿಯಿಂದ ನಟಿಸಬೇಕಾಗಿ ಬಂದದ್ದು ಶಶಿಕಪೂರ್‌ ಎದುರಿಸಿದ ಕಷ್ಟವೂ ಹೌದು; ಅವರ ಸಾಮರ್ಥ್ಯವೂ ಹೌದು. ಒಟ್ಟು 61 ಸಿನಿಮಾಗಳಲ್ಲಿ ಸಿಂಗಲ್‌ ಹೀರೋ ಆಗಿ ನಟಿಸಿದ ಶಶಿಕಪೂರ್, 55 ಮಲ್ಟಿಸ್ಟಾರ್‌ ಸಿನಿಮಾಗಳಲ್ಲಿ ಇನ್ನೊಬ್ಬ ಹೀರೋ ಆಗಿ ನಟಿಸಿದ್ದರು! ಅಮಿತಾಭ್‌ ಜತೆ 1974ರಲ್ಲಿ ‘ರೋಟಿ ಕಪ್‌ಡಾ ಔರ್‌ ಮಕಾನ್‌’ ನಿಂದ ಹಿಡಿದು, ಕಭೀ ಕಭೀ, ತ್ರಿಶೂಲ್, ಕಾಲಾಪತ್ಥರ್‌, ಸುಹಾಗ್‌, ಶಾನ್‌, ಸಿಲ್‌ಸಿಲಾ- ಹೀಗೆ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಮ ಸ್ಪರ್ಧೆ ನೀಡಿದರು. ಸಂಜೀವ್‌ಕುಮಾರ್‌ ಜತೆ 77ರಲ್ಲಿ ‘ಮುಕ್ತಿ’ ಸಿನಿಮಾದಿಂದ ತೊಡಗಿ ಆರು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದರು.

‘ಚರಿತ್ರನಟ’ ಪ್ರಾಣ್‌ ಜತೆಗೆ 9 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದರು. ವಿನೋದ್‌ ಖನ್ನಾ, ಜಿತೇಂದ್ರ, ರಣಧೀರ್‌ ಕಪೂರ್‌, ರಿಶಿ ಕಪೂರ್‌- ಹೀಗೆ ಆ ಕಾಲದ ಸೂಪರ್‌ ಹೀರೋಗಳ ಜತೆಗೆ ಹೆಗಲೆಣೆಯಾಗಿ ನಟಿಸಿ ಆ ಸಿನಿಮಾಗಳನ್ನು ಯಶಸ್ಸಿನತ್ತ ಒಯ್ದರು. ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಈ ಮಹಾತಾರೆಯರ ಜತೆಗೆ ನಟಿಸಿದ ಎಲ್ಲ ಸಿನಿಮಾಗಳಲ್ಲೂ ಶಶಿಕಪೂರ್‌ ಅವರೆಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎನ್ನುವುದು! ಹಿಂದಿ ಚಿತ್ರೋದ್ಯಮ ಅಷ್ಟರಮಟ್ಟಿಗೆ ಅವರ ಪ್ರತಿಭೆಯನ್ನು ಸರಿಯಾಗಿ ಗುರುತಿಸಿತ್ತು.

ಅಪ್ಪನ ‘ಪೃಥ್ವಿ’ ಥಿಯೇಟರ್‌ನಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಮತ್ತು ನಟ- ಎರಡೂ ದ್ವಿಪಾತ್ರ. 1940ರಲ್ಲೇ ಬಾಲನಟನಾಗಿ ನಟಿಸಿದಾಗ ಇದ್ದ ಹೆಸರು ಶಶಿರಾಜ್‌. ನಿಜ ನಾಮಧೇಯ ಬಲ್ಬೀರ್‌ ರಾಜ್‌ ಪೃಥ್ವಿರಾಜ್‌ ಕಪೂರ್‌! ರಾಜ್‌ಕಪೂರ್‌ ಮತ್ತು ಶಮ್ಮಿ ಕಪೂರ್‌ರ ತಮ್ಮನಾದರೂ, ನಟನೆಯಲ್ಲಿ ಅವರಿಗಿಂತ ಭಿನ್ನವಾಗಿ ತನ್ನದೇ ಆದ ಛಾಪು ಮೂಡಿಸಿದವರು.

ಅಮಿತಾಭ್‌ಗಿಂತ ವಯಸ್ಸಿನಲ್ಲಿ ಐದು ವರ್ಷ ದೊಡ್ಡವರು ಈ ಶಶಿಕಪೂರ್‌. (ಜನ್ಮದಿನ  18/3/1938) ಆದರೆ ‘ದೀವಾರ್‌’ ಚಿತ್ರದಲ್ಲಿ ನಟಿಸಿದ್ದು ಅಮಿತಾಭನ ತಮ್ಮನ ಪಾತ್ರದಲ್ಲಿ. ಅದೂ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರ. ಕಳ್ಳಸಾಗಣೆದಾರ ಅಣ್ಣನ ಎದುರು ತಪ್ಪೊಪ್ಪಿಗೆಯ ಪತ್ರ ತೋರಿಸಿ ಸಹಿ ಹಾಕೆಂದು ಒತ್ತಾಯಿಸಿದಾಗ, ಅಣ್ಣ ಪ್ರಶ್ನೆಗಳ ಸುರಿಮಳೆಗೈಯುತ್ತಾನೆ. ಆಗ ಒಮ್ಮಿಂದೊಮ್ಮೆಲೆ ಸಿಟ್ಟಿಗೆದ್ದು ‘ಭಾಯ್‌.. ತುಮ್‌ ಸೈನ್‌ ಕರೋಗೇ ಯಾ ನಹೀ’ ಎಂದು ಅಬ್ಬರಿಸುವ ಶಶಿಕಪೂರ್‌, ಮರುಕ್ಷಣದಲ್ಲೇ ‘ಯೆ ಸಚ್ಛಾಯಿ ತುಮಾರೆ ಔರ್‌ ಮೇರೆ ಬೀಚ್‌ ಮೆ ಏಕ್‌ ದೀವಾರ್‌ ಹೈ ಭಾಯ್‌’ ಎಂದು ಗದ್ಗದ ಸ್ವರಕ್ಕೆ ಇಳಿಯುತ್ತಾರೆ. ಧ್ವನಿಯ ಏರಿಳಿತಗಳಲ್ಲಿ ಶಶಿಕಪೂರ್‌ ಸಾಧಿಸಿದ್ದ ಹಿಡಿತ ಅಪೂರ್ವವಾದದ್ದು.

ಇಲ್ಲಿ ಪದೇ ಪದೇ ‘ದೀವಾರ್‌’ ನೆನಪಾಗಲು ಕಾರಣವಿದೆ. ಆ ವರ್ಷ (1975) ಒಟ್ಟು ಏಳು ವಿಭಾಗಗಳಲ್ಲಿ ಆ ಸಿನಿಮಾ ‘ಫಿಲಂಫೇರ್‌’ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ ಅಲ್ಲದೆ ಶಶಿಕಪೂರ್‌ ಅವರ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯೂ ಅದರಲ್ಲಿ ಸೇರಿತ್ತು. ಆ ಸಿನಿಮಾ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ ಅಮಿತಾಭ್‌ಗೆ ಅದರಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಸಿಗಲಿಲ್ಲ. ಇಬ್ಬರು ಸೋದರರ ಮಧ್ಯೆ ತಾಯಿಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ ನಿರೂಪಾ ರಾಯ್‌ ಅವರಿಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಆದರೆ ಶಶಿ
ಕಪೂರ್‌ ಪೋಷಕ ನಟ  ಪ್ರಶಸ್ತಿ ಗೆದ್ದರು.

ಕೋಲ್ಕತ್ತಾದಲ್ಲಿ ಜನಿಸಿದ ಶಶಿ ಕಪೂರ್‌, 1951ರಲ್ಲಿ ರಾಜ್‌ಕಪೂರ್‌ಗೆ ಖ್ಯಾತಿ ತಂದುಕೊಟ್ಟ ‘ಆವಾರ’ ಚಿತ್ರದಲ್ಲಿ ಎಳೆಯ ರಾಜ್‌ಕಪೂರನಾಗಿ ನಟಿಸಿದ್ದರು.  ‘ಸಂಗ್ರಾಮ್‌’ ಚಿತ್ರದಲ್ಲಿ ಅಶೋಕ್‌ಕುಮಾರ್‌ ಸಣ್ಣವನಾಗಿದ್ದಾಗಿನ ಪಾತ್ರ ನಿರ್ವಹಿಸಿದ್ದರು.  ಅದು ಬಾಲ್ಯದಲ್ಲಿ ಸಿನಿಮಾ ಕುಟುಂಬದ ಕೊಡುಗೆ. ಆದರೆ ಬಳಿಕ ಮುಂಬೈಯಲ್ಲಿ ನಟನಾಗಿ ಬೆಳೆದು ನಿಂತದ್ದಕ್ಕೆ, ಪಾತ್ರಗಳ ಹದವರಿತು ಅಭಿನಯವನ್ನು ರೂಢಿಸಿಕೊಂಡದ್ದು ದೊಡ್ಡ ಕಾರಣ. ರಂಗಭೂಮಿಯ ಅನುಭವ ಬೆನ್ನೆಲುಬಾಗಿ ನೆರವಾಯಿತು. 56ರಲ್ಲಿ ರಂಗಭೂಮಿಯಲ್ಲಿಯೇ ಪರಿಚಯವಾದವರು ಜೆನಿಫರ್‌. ಎರಡು ವರ್ಷಗಳ ಸ್ನೇಹದ ಬಳಿಕ ಮದುವೆಯ ಪ್ರಸ್ತಾಪ ಮುಂದಿಟ್ಟಾಗ ಜೆನಿಫರ್‌ ಕುಟುಂಬದಿಂದ ಪ್ರತಿರೋಧ ಬಂದದ್ದೂ ಸುಳ್ಳಲ್ಲ.

ಹಾಗೆ ನೋಡಿದರೆ ಶಶಿಕಪೂರ್‌ ಹೀರೋ ಆಗುವುದಕ್ಕೆ ಮುಂಚೆ ಸಹಾಯಕ ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದರು. 60ರಲ್ಲಿ ’ಪೋಸ್ಟ್‌ ಬಾಕ್ಸ್‌ 999’ ಎಂಬ ಸಿನಿಮಾದಲ್ಲಿ ಮೊತ್ತ ಮೊದಲು ಸಹಾಯಕ ನಿರ್ದೇಶಕನಾದದ್ದು. ಅದು ಸುನಿಲ್‌ ದತ್‌ ನಾಯಕನಾಗಿ ನಟಿಸಿದ ಮೊದಲ ಚಿತ್ರ. ಕ್ಯಾಮೆರಾ ಹಿಂದಿನ ಅನುಭವ ನಟನಾಗಲು ಪ್ರೇರೇಪಿಸಿತು. 148 ಹಿಂದಿ ಸಿನಿಮಾ ಮತ್ತು 12 ಇಂಗ್ಲಿಷ್ ಸಿನಿಮಾಗಳಲ್ಲೂ ನಟಿಸಿದರು. 1986ರಲ್ಲಿ ‘ನ್ಯೂಡೆಲ್ಲಿ ಟೈಮ್ಸ್‌’ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದರು. 1993ರಲ್ಲಿ ‘ಮುಹಾಫಿಜ್‌’ ಚಿತ್ರದ ನಟನೆಗೆ ಜ್ಯೂರಿ ಪ್ರಶಸ್ತಿ ಲಭಿಸಿತು. 1979ರಲ್ಲಿ ನಿರ್ಮಿಸಿದ ‘ಜುನೂನ್‌’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ನಟ, ನಿರ್ಮಾಪಕ, ನಿರ್ದೇಶಕರಾಗಿ ಶಶಿಕಪೂರ್‌ ಬಾಲಿವುಡ್‌ನಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

84ರಲ್ಲಿ ಪತ್ನಿ ಜೆನಿಫರ್‌ ಕ್ಯಾನ್ಸರ್‌ನಿಂದ ಮೃತಪಟ್ಟ ಬಳಿಕ ಶಶಿಕಪೂರ್‌ ಆರೋಗ್ಯ ನಿಧಾನಕ್ಕೆ ಹದಗೆಟ್ಟಿತು. ಸ್ಲಿಮ್‌ ಆಗಿದ್ದ ಅವರು ಬಳಿಕ ಅತಿಯಾದ ತೂಕ ಏರಿಸಿಕೊಂಡರು. ಪೋಷಕ ಪಾತ್ರಗಳತ್ತ ಹೊರಳಿದರು. 1998ರಲ್ಲಿ ‘ಜಿನ್ನಾ’ ಚಿತ್ರದಲ್ಲಿ ನಿರೂಪಕನ ಪಾತ್ರ ವಹಿಸಿದ್ದೇ ಕೊನೆ. ರಾಖಿ ಜತೆಗೆ ಶಶಿಕಪೂರ್‌ ಜೋಡಿ ಬಾಲಿವುಡ್‌ನಲ್ಲಿ ಸಾಕಷ್ಟು ಕ್ಲಿಕ್‌ ಆಯಿತು. ಶರ್ಮಿಳಾ ಠಾಗೋರ್‌, ಜೀನತ್‌ ಅಮಾನ್‌ ಅವರು ಶಶಿಯವರ ಜತೆಗೆ ಮಿಂಚಿದ ಇನ್ನಿಬ್ಬರು ಹೀರೋಯಿನ್‌ಗಳು. ಹೇಮಾಮಾಲಿನಿ, ಪರ್ವೀನ್ ಬಾಬಿ ಮತ್ತು ಮೌಸಮಿ ಚಟರ್ಜಿ ಜತೆಗೂ ಶಶಿಕಪೂರ್‌ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈಗ ಚಿತ್ರರಂಗಕ್ಕೆ ನೀಡಿದ ಅಪೂರ್ವ ಕೊಡುಗೆಗಾಗಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿದೆ. ಶಶಿಕಪೂರ್‌ ಅವರನ್ನು ಯಾವತ್ತು ನೆನಪಿಸಿದರೂ ಕಿವಿಯಲ್ಲಿ ರಿಂಗಣಿಸುವುದು ‘ಮೇರೆ ಪಾಸ್‌ ಮಾ ಹೈ’ ಎನ್ನುವ ಸಂಭಾಷಣೆ. ಇತ್ತೀಚೆಗೆ ತೀರಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಚೇತರಿಸಿಕೊಂಡಿರುವ ಶಶಿಕಪೂರ್‌ ಅವರಲ್ಲಿ ಈ ಪ್ರಶಸ್ತಿ ನವ ಚೈತನ್ಯ ಚಿಮ್ಮಿಸಲಿ.

Write A Comment