–ಡಿ.ಎಂ.ಕುರ್ಕೆ ಪ್ರಶಾಂತ
ಸ್ಯಾಂಡಲ್ವುಡ್ನಲ್ಲಿ ನಂಬರ್ ಒನ್ ನಟಿ ಯಾರು ಎಂದರೆ ಬಹು ಮಂದಿ ಪ್ರೇಕ್ಷಕರು ಮುದ್ರೆ ಒತ್ತುವುದು ರಾಧಿಕಾ ಪಂಡಿತ್ ಹೆಸರಿಗೆ. ಅವರ ಸಿನಿಮಾ ಬದ್ಧತೆ ಬಗ್ಗೆ ಹಿರಿಯ ನಟ–ನಟಿಯರೂ ಪ್ರಶಂಸೆಯ ಮಾತಾಡುತ್ತಾರೆ. ‘ಎಂದೆಂದಿಗೂ’, ‘ಝೂಮ್’ ಇತ್ಯಾದಿ ಸಿನಿಮಾಗಳ ಸವಿಯನ್ನು ಅಂಗೈಲಿಟ್ಟುಕೊಂಡು ಮೆಲ್ಲುತ್ತಿರುವ ಈ ‘ಅಚ್ಚಗನ್ನಡತಿ’ ಮಾತಿನಲ್ಲಿ ಸದಾ ಕಚಗುಳಿ ಇರುತ್ತದೆ. ಆ ಕಚಗುಳಿ–ಚಿನಕುರಳಿಯ ಪರಿಚಯ ಇಲ್ಲಿದೆ.
‘ಝೂಮ್’ ಸಿನಿಮಾದಲ್ಲಿ ಯಾರ ಮೇಲೆ ಝೂಮ್ ಹಾಕಿದ್ದೀರಿ?
ಯಾರ ಮೇಲೂ ಇಲ್ಲ. ನನ್ನ ಮೇಲೆ ನಾನೇ ಝೂಮ್ ಹಾಕಿ ಕೊಂಡು ನೋಡಿಕೊಳ್ಳುತ್ತಿದ್ದೇನೆ. ಸದ್ಯಕ್ಕೆ ಏನೂ ಕಂಡಿಲ್ಲ; ಶೂಟಿಂಗ್ ಇನ್ನೂ ಮುಗಿದಿಲ್ಲ.
ಒಂದು ವೇಳೆ ಸಿನಿಮಾ ಸಹವಾಸಕ್ಕೆ ಬರದಿದ್ದರೆ ಏನು ಆಗುತ್ತಿದ್ರಿ?
ಟೀಚರ್.
ಮಕ್ಕಳಿಗೆ ಹೊಡೆಯುವುದು, ಪಾಠ ಮಾಡುವುದು ಅಂದ್ರೆ ಅಷ್ಟೊಂದು ಇಷ್ಟನಾ?
ಅಯ್ಯೋ ಹಾಗೇನಿಲ್ಲ! ಪ್ರತಿ ದಿನ ಚಾಕೊಲೇಟ್ ಸಿಕ್ಕುತ್ತೆ, ಬ್ಲಾಕ್ಬೋರ್ಡ್ ಮೇಲೆ ಬರೆಯಬಹುದು ಎನ್ನುವ ಆಸೆ ಅಷ್ಟೇ. ನಮ್ಮ ಸ್ಕೂಲಲ್ಲಿ ನಿತ್ಯ ಒಬ್ಬರಲ್ಲ ಒಬ್ಬ ವಿದ್ಯಾರ್ಥಿ ಟೀಚರ್ಗೆ ಚಾಕೊಲೇಟ್ ತಂದುಕೊಡುತ್ತಿದ್ದರು. ನಾನೂ ಟೀಚರ್ ಆದರೆ ನನಗೂ ಚಾಕೊಲೇಟ್ ಸಿಕ್ಕುತ್ತೆ ಎನ್ನುವ ಆಸೆ. ಅದೇನೋ ಗೊತ್ತಿಲ್ಲ ನನಗೆ ಬ್ಲಾಕ್ಬೋರ್ಡ್ ಮೇಲೆ ಬರೀಬೇಕು ಅನ್ನೋ ಆಸೆ ತುಂಬಾ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಟೀಚರ್ ಆದರೆ ಎಷ್ಟು ಬೇಕಾದರೂ ಮಾತನಾಡಬಹುದು. ಕೇಳುವುದಕ್ಕೆ ಸ್ಟೂಡೆಂಟ್ಸ್ ಇರ್ತಾರಲ್ಲ.
ನೀವು ಟೀಚರ್ಗೆ ಚಾಕೊಲೇಟ್ ಕೊಟ್ಟಂಗಿದೆ?
ಹೌದು! ಎಲ್ಲರಿಗೂ ಒಂದು ರೀತಿ ಚಾಕೊಲೇಟ್ ಕೊಡುತ್ತಿದ್ದೆ. ಆದರೆ ಗಣಿತ ಟೀಚರ್ಗೆ ಡೈರಿ ಮಿಲ್ಕ್. ನನಗೆ ಮ್ಯಾಥ್ಸ್ ಅಂದ್ರೆ ತುಂಬಾ ಕಷ್ಟ. ಗುಣಾಕಾರ, ಭಾಗಾಕಾರ ಯಾವುದೂ ನೆಟ್ಟಗೆ ಬರುತ್ತಿರಲಿಲ್ಲ!
ಕಾಲೇಜು ದಿನಗಳಲ್ಲಿ ಯಾರಾದ್ರೂ ಹುಡುಗರು ಕಣ್ಣು ಮಿಟುಕಿಸಿದ್ದು ಉಂಟಾ?
ಇಲ್ಲ! ನಾನು ಚಿಕ್ಕಂದಿನಿಂದ ಓದಿದ್ದು ಹುಡುಗೀರ ಸ್ಕೂಲಲ್ಲಿ, ಕಾಲೇಜಿನಲ್ಲಿ. ಆದರೆ ಒಂದು ಘಟನೆ ನೆನಪಿದೆ. ನಮ್ಮ ಕಾಲೇಜಿನಲ್ಲಿ ಇಬ್ಬರೇ ಗಂಡಸರು. ಒಬ್ಬರು ವಾಚ್ಮನ್, ಮತ್ತೊಬ್ಬರು ಬೆಲ್ ಹೊಡೆಯುವವರು. ನನ್ನ ಸೀನಿಯರ್ಸ್ ಗುಲಾಬಿ ಹೂವು ತೆಗೆದುಕೊಂಡು ಹೋಗಿ ವಾಚ್ಮನ್ಗೆ ಪ್ರಪೋಸ್ ಮಾಡಬೇಕು ಎಂದು ರ್ಯಾಗ್ ಮಾಡಿದರು. ನಾನು ಗುಲಾಬಿ ಹಿಡಿದು ಹೋದೆ ‘ಅಯ್ಯೋ ಬಂದೇನಮ್ಮ ಬಾ… ಬಾ… ಬೇಗ ಹೂವು ಕೊಟ್ಟು ಅದೇನು ಹೇಳಿ ಕ್ಲಾಸ್ಗೆ ಹೋಗಮ್ಮ ಅಂದ್ರು’ ಆ ವಾಚ್ಮನ್. ಅದು ಅವರಿಗೆ ಮಾಮೂಲಿ ಆಗಿಬಿಟ್ಟಿತ್ತು.
ಲವ್ ಮ್ಯಾರೇಜ್ ಇಷ್ಟವೋ ಅರೇಂಜ್ ಮ್ಯಾರೇಜ್ ಇಷ್ಟವೋ?
ಯಾವುದಾದರೂ ಓಕೆ. ಆದರೆ ಮುಂದೆ ಹೇಗಿರುತ್ತೇವೆ, ಚೆನ್ನಾಗಿರುತ್ತೇವಾ ಅನ್ನೋದು ಮುಖ್ಯ. ಈಗ ಇವೆರಡನ್ನು ದಾಟಿ ಫೇಸ್ಬುಕ್ ಮ್ಯಾರೇಜ್ ಬಂದಿದೆಯಲ್ಲ!
‘ಡ್ರಾಮಾ’ದಲ್ಲಿ ಯೋಗರಾಜ ಭಟ್ಟರಿಗೆ ಸಖತ್ ಡ್ರಾಮಾ ಮಾಡಿಸಿದ್ರಂತೆ?
‘ಬೊಂಬೆ ಆಡಿಸುವವರು ಅವರೇ’ ಇದು ಯಾರನ್ನೇ ಕೇಳಿದರೂ ಹೇಳುವ ಮಾತು. ಆದರೆ ಆ ಚಿತ್ರದಲ್ಲಿ ಒಂದು ಫನ್ನಿ ಇನ್ಸಿಡೆಂಟ್ ಹೇಳ್ತೀನಿ ಕೇಳಿ. ಅವರು ಏನಾದರೂ ಹೇಳಿಕೊಡಬೇಕು ಅಂದರೆ ಅದನ್ನು ಮಾಡಿ ತೋರಿಸುತ್ತಾರೆ. ‘ಡ್ರಾಮಾ’ ಚಿತ್ರದಲ್ಲಿ ನಾನು ಅಪ್ಪನನ್ನ ಒಪ್ಪಿಸುವ ದೃಶ್ಯವಿತ್ತು.
‘ಅಪ್ಪ ಅಪ್ಪ ಪ್ಲೀಸ್ ಅಪ್ಪ… ಪ್ಲೀಸ್ ಅಪ್ಪ…’ ಎಂದು ನಾಚಿಕೆಯಿಂದ ಹೇಳಬೇಕಿತ್ತು. ಆ ದಪ್ಪದೇಹವನ್ನು ನಾಚಿಕೆ ಪಟ್ಟು ತಿರುವಿ ತಿರುವಿ ಆ ದೃಶ್ಯವನ್ನು ಅವರು ಮಾಡಿತೋರಿಸುವಾಗ ಎಲ್ಲರಿಗೂ ಸಖತ್ ನಗು. ಬೇಕಂತಲೇ ನಾನು ‘ಸರ್ ಇದು ನನಗೆ ಅರ್ಥ ಆಗಿಲ್ಲ ಮತ್ತೆ ಮಾಡಿ’ ಎಂದು ಮೂರು ಸಲ ರಿಹರ್ಸಲ್ ಮಾಡಿಸಿದ್ದೇನೆ.
ನಿಮ್ಮಿಂದ ಗಾಸಿಪ್ಗಳು ಆದಷ್ಟು ದೂರವಿದೆ?
ಅವಾರ್ಡ್ಗಳಿಗೆ ರಾಧಿಕಾ ಅಂದ್ರೆ ಇಷ್ಟ. ಗಾಸಿಪ್ಗಳಿಗೆ ನಾನಂದ್ರೆ ಕಷ್ಟ.
ಯಶ್ ಮತ್ತು ನಿಮ್ಮ ಸಿನಿಮಾ ನಾಗಾಲೋಟ ಮುಂದುವರೆಯುತ್ತಾ?
ಖಂಡಿತಾ. ಹ್ಯಾಟ್ರಿಕ್ ಆಯ್ತು. ಮುಂದೆ ಡಬ್ಬಲ್ ಹ್ಯಾಟ್ರಿಕ್…
ಡ್ರೀಮ್ ಬಾಯ್ ಚಿತ್ರ ಕನಸಿನಲ್ಲಿ ಬರುತ್ತಿಲ್ಲವೇ?
ಆ ಡ್ರೀಮ್ ಬಾಯ್ ಹೇಗಿರಬೇಕು ಎಂದು ಬಾಯಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಡ್ರಾಯಿಂಗ್ ಮಾಡಿ ತೋರಿಸ್ತೀನಿ ಬಿಡಿ.
50ರ ಪ್ರಾಯ ದಾಟಿರುವ ಯಾವ ನಟನ ಜತೆ ಅವಕಾಶ ಸಿಕ್ಕರೆ ಡ್ಯುಯೆಟ್ ಆಡುವ ಆಸೆ ಇದೆ?
ಪ್ರಣಯ ರಾಜ ಶ್ರೀನಾಥ್. ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರದಲ್ಲಿ ಅವರ ಜತೆ ಕೆಲಸ ಮಾಡಿದ್ದು ಒಳ್ಳೆಯ ಜರ್ನಿ.
ಈ ಕನ್ನಡತಿ ಬಳಿ ಪರಭಾಷಾ ಪ್ರವೀಣರು ಏಕೆ ಬರಲಿಲ್ಲ?
ಆ ವಿಚಾರದಲ್ಲಿ ನಾನು ತುಂಬಾ ಲಕ್ಕಿ. ನನ್ನ ನಾನೇ ‘ಕನ್ನಡದ ಆಸ್ತಿ’ ಎಂದು ಹೇಳಿಕೊಳ್ಳುತ್ತೇನೆ.
ಅವಾಜ್ ಹಾಕುವ, ಕತ್ತಿ ಹಿಡಿಯುವ ಪಾತ್ರ ಸಿಕ್ಕರೆ?
ಸಿನಿಮಾಗಳಲ್ಲಿ ಇಲ್ಲಿವರೆಗೂ ಯಾರಿಗೂ ಅವಾಜ್ ಹಾಕಿಲ್ಲ. ನನಗೆ ಆ್ಯಕ್ಷನ್ ಸಿನಮಾನೇ ಬಂದಿಲ್ಲ. ರಿಯಲ್ ಲೈಫಲ್ಲಿ ಯಾರಿಗೂ ಅವಾಜ್ ಹಾಕಿಲ್ಲ. ‘ಕಡ್ಡಿಪುಡಿ’ ಚಿತ್ರದಲ್ಲಿ ಒಂದು ಸೀನ್ನಲ್ಲಿ ಲಾಂಗ್ ಹಿಡಿದಿದ್ದೇನೆ. ಅದೇ ಮೊದಲ ಬಾರಿ ಲಾಂಗ್ ಹಿಡಿದು ಕೊಂಡಿದ್ದು. ಒಂದು ವೇಳೆ ಸಿನಿಮಾದಲ್ಲಿ ಮಚ್ಚು ಹಿಡಿಯುವ ಅವಕಾಶ ಸಿಕ್ಕಿರೆ ಖಂಡಿತ ಹಿಡಿಯುವೆ.
‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಪ್ರಭಾವದಿಂದ ಎನ್ನುವ ರೀತಿ ‘ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ’ ಎನ್ನುವ ಧಾರಾವಾಹಿಯೂ ಬಂದಿದೆ?
ನಮ್ಮ ರಾಮಾಚಾರಿ ಹಾಲಿವುಡ್ ರೇಂಜಿನ ಚಿತ್ರ! ಇದರ ಪ್ರಭಾವದಿಂದಲೇ ಹಾಲಿವುಡ್ ನಲ್ಲಿ ‘ಮಿಸ್ಟರ್ ಅಂಡ್ ಮಿಸೆಸ್ ಸ್ಮಿತ್’ ಸಿನಿಮಾ ಬಂದಿದೆ.
ರಾಧಿಕಾ ಇನ್ನೂ ಕ್ಯೂಟ್ ಕ್ಯೂಟ್ ಆಗಿ ಮಾತನಾಡುತ್ತಾರೆ ಎನ್ನುತ್ತಾರಲ್ಲ ಗಾಂಧಿನಗರದ ಮಂದಿ?
ಹಾಗೇ ಅಂದುಕೊಳ್ಳಲಿ ಬಿಡಿ. ದೊಡ್ಡ ವಳು ಎಂದುಕೊಳ್ಳುವುದಕ್ಕಿಂತ ಪಾಪು ಎಂದು ಕರೆಸಿಕೊಳ್ಳುವುದೇ ಚೆಂದ ಅಲ್ಲವೇ.
ನಾನು ಸ್ಕೂಲ್ನಲ್ಲಿದ್ದಾಗ ಕ್ರಿಕೆಟರ್ ಅಜೇಯ್ ಜಡೇಜಾ ಅಂದರೆ ನನಗೆ ತುಂಬಾ ಇಷ್ಟ ಇತ್ತು. ಪೇಪರ್ನಲ್ಲಿ ಬಂದಿದ್ದ ಅವರ ಚಿತ್ರವನ್ನು ಕಟ್ ಮಾಡಿಕೊಂಡು ಪುಸ್ತಕದೊಳಗೆ ಇಟ್ಟುಕೊಂಡಿದ್ದೆ. ಒಂದು ದಿನ ಅದು ಟೀಚರ್ ಮುಂದೆ ಕೆಳಗೆ ಬಿತ್ತು. ಇವರು ಯಾರು? ಎಂದು ಕೇಳಿದರು. ನಮ್ಮಣ್ಣ ಅಂತ ಹೇಳಿದ್ದೆ. ಆಮೇಲೆ ಸ್ವಲ್ಪ ಬೇಜಾರಾಗಿತ್ತು. ಅಯ್ಯೋ ಇವರು ನನಗೆ ಸಖತ್ ಇಷ್ಟ, ಇವರನ್ನು ಅಣ್ಣ ಎಂದುಬಿಟ್ಟನಲ್ಲಾ ಎಂದು!
ನನಗೆ ಬ್ಯಾಸ್ಕೆಲ್ ಬಾಲ್ ಆಟ ಅಂದರೆ ಇಷ್ಟ. ಆದರೆ ನನ್ನ ಕಡೆ ಬಾಲ್ ಬಂದು ನನ್ನ ಕೈಗೆ ಸಿಕ್ಕುತ್ತಲ್ಲ ಆಗ ಆ ಬಾಲ್ ಚೇಸ್ ಮಾಡುವುದಕ್ಕೆ ಬರುತ್ತಿದ್ದರಲ್ಲ ಅವರನ್ನು ನೋಡಿದರೆ ವಿಪರೀತ ಭಯ. ಆಗ ಆ ಬಾಲ್ ತೆಗೆದುಕೊಂಡು ಓಡಿ ಬಿಡುತ್ತಿದ್ದೆ. ಈ ರೀತಿ ಸುಮಾರು ಸಲ ಆಗಿದೆ. ನಮ್ಮ ಕೋಚ್ ಹೇಳುತ್ತಿದ್ದರು, ಇನ್ನೊಂದು ಸಲ ನೀನು ಈ ರೀತಿ ಮಾಡಿದರೆ ನಿನ್ನ ಆಟಕ್ಕೆ ಸೇರಿಸುವುದಿಲ್ಲ ಎಂದು.
