ಕರ್ನಾಟಕ

ಸ್ವಾಸ್‌… ಇದು ಸಾಫ್ಟ್‌ವೇರ್‌ ಸಲ್ಯೂಷನ್‌ ಐಟಿ ಕಂಪೆನಿ: ಸಾಧಿಸುವ ಛಲವಿರಬೇಕು…

Pinterest LinkedIn Tumblr

kbec19swaas

–ಪೃಥ್ವಿರಾಜ್ ಎಂ.ಎಚ್.
ಸ್ವಾಸ್‌… ಇದು ಸಾಫ್ಟ್‌ವೇರ್‌ ಸಲ್ಯೂಷನ್‌ ಐಟಿ ಕಂಪೆನಿ. ಇದು ಆರಂಭವಾಗಿ ಇನ್ನೂ ನಾಲ್ಕು ವರ್ಷ ಕಳೆದಿಲ್ಲ, ಕಂಪೆನಿಯ ಪ್ರಗತಿ ರಾಕೆಟ್‌ ವೇಗದಲ್ಲಿ ಸಾಗುತ್ತಿರುವುದು ವಿಶೇಷ. ‘ಹಾಯ್‌ ಡಾಕ್ಟರ್‌’ ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಮೂಲಕ ಸ್ವಾಸ್‌ ತಂಡ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಜನಪ್ರಿಯವಾಗಿದೆ. ಸ್ವಾಸ್‌ ಕಂಪೆನಿಯ ಯಶಸ್ಸಿನ ಹಿಂದೆ ಹತ್ತಾರು ಯುವಕರ ಶ್ರಮವಿದೆ.

ಸ್ವಾಸ್‌ ತಂಡವನ್ನು ಕಟ್ಟಿದವರು ಚೆನ್ನೈ ಮೂಲದ ಆನಂದ್‌ ನಟರಾಜು. ಇವರು ಕೂಡ ಸಾಫ್ಟ್‌ವೇರ್‌ ಎಂಜಿನಿಯರ್‌. ಪ್ರತಿಷ್ಠಿತ ಕಂಪೆನಿ ಗಳಲ್ಲಿ ಕೆಲಸ ಮಾಡಿದ ಅನುಭವ. ಅದ್ಯಾಕೋ ಅತಿ ಕಿರಿಯ ವಯಸ್ಸಿಗೆ ಕೆಲಸದ ಮೇಲೆ ಜುಗುಪ್ಸೆ ಬಂದು ಮನೆ ಸೇರಿದರು. ಆದರೆ ಮನೆ ಸೇರಿ ಸುಮ್ಮನಾಗಲಿಲ್ಲ. ಆನಂದ್‌ ಹೊಸ ಕ್ಷೇತ್ರವೊಂದಕ್ಕೆ ತಂತ್ರಾಂಶವನ್ನು ಪರಿಚಯಿಸುವ ಕುರಿತು ಯೋಚನೆ ಮಾಡಿದರು. ಆಗ ಹೊಳೆದದ್ದು ಔಷಧಿ ಮಾರಾಟ ಕ್ಷೇತ್ರ. ಕೂಡಲೇ ಆನಂದ್‌ ಸ್ವಾಸ್‌ ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಸಿದರು.

ಸಮಾನ ಮನಸ್ಕ ಗೆಳೆಯ ರೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ಔಷಧಿ ತಯಾರಿಕಾ ಕಂಪೆನಿಯೊಂದಕ್ಕೆ ಭೇಟಿ ನೀಡಿ ತಾವು ತಯಾರಿಸುತ್ತಿರುವ ತಂತ್ರಾಂಶ ಮತ್ತು ಆ್ಯಪ್‌ ಬಗ್ಗೆ ವಿವರಿಸಿದರು. ಕೆಲವೇ ತಿಂಗಳಲ್ಲಿ ‘ಹಾಯ್‌ ಡಾಕ್ಟರ್‌’ ಎಂಬ ತಂತ್ರಾಂಶ ಸಿದ್ಧ ವಾಯಿತು. ಇದರಿಂದ ವೈದ್ಯರು ಮತ್ತು ಔಷಧಿ ಮಾರಾಟ ಪ್ರತಿನಿಧಿಗಳಿಗೆ ತುಂಬಾ ಅನುಕೂಲವಾಯಿತು. ಕಾಗದದ ಬಳಕೆ ಕಡಿಮೆ ಯಾಗುವುದರ ಜೊತೆಗೆ ಮಾರಾಟಗಾರರಿಗೂ ಸಮಯ ಉಳಿತಾಯವಾಗುವುದು ಎನ್ನುತ್ತಾರೆ ಆನಂದ್‌.

ತಂತ್ರಜ್ಞಾನದ ಪರಿಚಯವೇ ಇರದ ಕ್ಷೇತ್ರಗಳಿಗೆ ತಂತ್ರಾಂಶ ರೂಪಿಸುವುದು ಸ್ವಾಸ್‌ ತಂಡದ ಮುಖ್ಯ ಕೆಲಸ. ಈಗಾಗಲೇ ಸಾವಿರಾರು ಸಾಫ್ಟ್‌ವೇರ್‌ ಮತ್ತು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿ ವಿವಿಧ ಕಂಪೆನಿಗಳಿಗೆ ನೀಡಿ ದ್ದಾರೆ. ಯೂರೋಪ್‌ ದೇಶಗಳಿಂದ ಸ್ವಾಸ್‌ ಕಂಪೆನಿಯ ತಂತ್ರಾಂಶಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ಆಸ್ಟ್ರೇಲಿಯಾ, ಅಮೆರಿಕ ಮತ್ತು ಮಧ್ಯ ಪ್ರಾಚ್ಯ ದೇಶಗಳಿಗೂ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಆನಂದ್‌ ಹೇಳುತ್ತಾರೆ. www.swaas.in

ಇಶಿತಾ ಶರ್ಮಾ
ದೆಹಲಿಯ ಇಶಿತಾ ಶರ್ಮಾಗೆ ಅಂಗಡಿಗಳಲ್ಲಿ ಹೆಚ್ಚು ಹೆಚ್ಚು ಖರೀದಿಸುವ ಗೀಳು. ಯಾವುದೇ ಅಂಗಡಿ ಕಂಡರೂ ಅಲ್ಲಿ ಏನನ್ನಾದರೂ ಕೊಳ್ಳುವ ತವಕ. ಕಾಲೇಜು ದಿನಗಳಲ್ಲಿ ಹಣ ಇಲ್ಲದಿದ್ದರೂ ಸ್ನೇಹಿತರ ಬಳಿ ಸಾಲ ಮಾಡಿಯಾದರೂ ಕೊಳ್ಳಬೇಕೆಂಬ ಗೀಳು ಇಶಿತಾಗೆ ಇತ್ತು. ಅದು ಮಾನಸಿಕ ಕಾಯಿಲೆಯೂ ಆಗಿತ್ತು. ಮನೆಯವರು ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ಈ ಗೀಳು ಮಾಯವಾಯಿತು.

ಇಶಿತಾ ದೆಹಲಿ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಪದವಿ ಬಳಿಕ ಒಂದೇ ವರ್ಷದಲ್ಲಿ ಹತ್ತಾರು ಕಂಪೆನಿಗಳನ್ನು ಬದಲಿಸಿದರು. ಇಶಿತಾ ಕಂಪೆನಿಗಳಲ್ಲಿ ಕೆಲಸ ಮಾಡಿದ್ದು ನಿಜವಾದರೂ ಸಂಬಳ ಮಾತ್ರ ಕೈಗೆ ಬರುತ್ತಿರಲಿಲ್ಲ. ಯಾಕೆಂದರೆ ಹತ್ತಿಪ್ಪತ್ತು ದಿನ ಕೆಲಸ ಮಾಡಿದರೆ ಯಾವ ಕಂಪೆನಿಯವರು ತಾನೆ ಸಂಬಳ ಕೊಡುತ್ತಾರೆ! ಇಶಿತಾಳ ಈ ವರ್ತನೆ ಮನೆಯವರಿಗೂ ಕಿರಿಕಿರಿ ಉಂಟುಮಾಡಿತ್ತು. ಕೆಲಸದ ಶಿಕಾರಿ ನಿಲ್ಲಿಸಿ ಶಾಪ್‌ ತೆರೆಯಲು ಅಪ್ಪನ ಬಳಿ ಹಣ ಕೇಳಿದರು.

ಇದರಿಂದ ಗಾಬರಿಗೊಂಡ ಅವರು ಇಶಿತಾಗೆ ಮತ್ತೆ ಕೊಳ್ಳುವ ಗೀಳಿನ ಕಾಯಿಲೆ ಉಲ್ಬಣವಾಗಿರಬೇಕು ಎಂದು ಭಾವಿಸಿ ಚಿಕಿತ್ಸೆಗೆ ಕರೆದೊಯ್ದರು. ಆದರೆ ಇಶಿತಾಗೆ ಯಾವ ಕಾಯಿಲೆಯೂ ಇರಲಿಲ್ಲ. ಏನಾದರೂ ಸಾಧಿಸಬೇಕು ಎಂಬ ಛಲ ಅವರಲ್ಲಿ ನೂರ್ಮಡಿಸಿತ್ತು. ಪೋಷಕರು ಬಿಡಿಗಾಸು ನೀಡದೆ ‘ಯಾವುದಾದರೂ ಕಂಪೆನಿಯಲ್ಲಿ ಐದಾರು ವರ್ಷ ಕೆಲಸ ಮಾಡು ಆಮೇಲೆ ಅಂಗಡಿ ತೆರೆಯಲು ಬಂಡವಾಳ ಕೊಡುತ್ತೇವೆ’ ಎಂಬ ಸಬೂಬು ಹೇಳಿದ್ದರು.

ಈ ಹಂತದಲ್ಲಿ ಇಶಿತಾಗೆ ದೇವಿ ಎಂಬ ಯುವಕನ ಪರಿಚಯವಾಯಿತು. ದೇವಿ ವಾಲ್‌ಸ್ಟ್ರೀಟ್‌ ಕಂಪೆನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಇಬ್ಬರೂ ಸೇರಿಕೊಂಡು ಭಾರತೀಯ ಫ್ಯಾಷನ್‌ಗೆ ಸಂಬಂಧಪಟ್ಟ ‘ಕ್ಯಾಂಡಿಡ್ಲಿ ಕೋಚರ್‌’ ಎಂಬ ವೆಬ್‌ ಪೋರ್ಟಲ್‌ ಆರಂಭಿಸಿದರು. 2013ರಲ್ಲಿ ಕೇವಲ ಎರಡು ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಅಪ್ಲಿಕೇಶನ್‌ನೊಂದಿಗೆ ಆರಂಭವಾದ ಈ ಕಂಪೆನಿ ಇಂದು ದಿನಕ್ಕೆ ಸಾವಿರಕ್ಕೂ ಹೆಚ್ಚು ಸರಕುಗಳನ್ನು ಮಾರಾಟ ಮಾಡುತ್ತಿದೆ. ಕೊಳ್ಳುವ ಗೀಳಿನ ಕಾಯಿಲೆಯಿಂದ ಹೊರ ಬಂದು ತನ್ನ ಕಾಲ ಮೇಲೆ ತಾನು ನಿಂತಿರುವ ಇಶಿತಾ ಯುವ ಪೀಳಿಗೆಗೆ ಮಾದರಿ.
www.candidlycouture.com

ಚೇತನ್‌ ಸಿಂಗ್‌ ಸೋಲಂಕಿ
ಬಾಂಬೆ ಐಐಟಿಯ ಯುವ ಉಪನ್ಯಾಸಕ ಡಾ.ಚೇತನ್‌ ಸಿಂಗ್‌ ಸೋಲಂಕಿ ಅವರು ಉದ್ಯಮಿಯಾದ ಕಥೆ ಇದು. ಭೂಮಿಯಲ್ಲಿ ದೊರೆಯುವ ಎಲ್ಲಾ ಇಂಧನ ಮೂಲಗಳು ಖಾಲಿಯಾದ ಬಳಿಕ ಮಾನವ ಕುಲ ಅಂತಿಮವಾಗಿ ನೆಚ್ಚಿಕೊಳ್ಳಬಹುದಾದ ಇಂಧನ ಮೂಲವೆಂದರೆ ಸೌರಶಕ್ತಿ ಮಾತ್ರ ಎನ್ನುತ್ತಾರೆ ಚೇತನ್‌. ಸದ್ಯ ಬಳಕೆಯಲ್ಲಿರುವ ಸೌರ ಪರಿವರ್ತಕಗಳು ನಿಧಾನಗತಿಯಲ್ಲಿ ಶಾಖವನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸುತ್ತಿವೆ. ಇಂತಹ ಪರಿವರ್ತಕಗಳ ವೇಗವನ್ನು ಹೆಚ್ಚಿಸುವ ಸಂಶೋಧನೆಯಲ್ಲಿ ಚೇತನ್‌ಸಿಂಗ್‌ ನಿರತರಾಗಿದ್ದಾರೆ.

2013ರಲ್ಲಿ ಐಐಟಿ ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ‘ಕೆವ್ಯಾಟ್ಸ್ ಸೋಲಾರ್‌ ಸಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌’ ಎಂಬ ಕಂಪೆನಿಯನ್ನು ಆರಂಭಿಸಿದರು. ಇದರ ಮೂಲಕ ಗ್ರಾಹಕರಿಗೆ ಸೌರಶಕ್ತಿ ಸಾಧನಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ ಸೌರ ದೀಪಗಳು, ಸೌರ ಒಲೆಗಳು, ವಾಟರ್‌ ಹೀಟರ್‌ಗಳ ತಯಾರಿಕೆಯನ್ನು ಆರಂಭಿಸಿ ದ್ದಾರೆ. ಬ್ಯಾಂಕ್‌ಗಳಿಗೆ ಸೌರಶಕ್ತಿ ಮೂಲಕ ವಿದ್ಯುತ್‌ ನೀಡುವ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಮುಂಬೈನ ಹಲವಾರು ಬ್ಯಾಂಕ್‌ಗಳಿಗೆ ಈ ತಂತ್ರಜ್ಞಾನವನ್ನು ಪಸರಿಸಿದ್ದಾರೆ.

ಇದರಿಂದ ಕಂಪೆನಿಗೆ ವಾರ್ಷಿಕ 2.5 ಕೋಟಿ ರೂಪಾಯಿ ಆದಾಯ ಬರುತ್ತಿದೆ. ರೈತರು ಕೃಷಿ ಮಾಡುವುದರ ಜೊತೆಗೆ ಸೌರ ವಿದ್ಯುತ್‌ ಉತ್ಪಾದಿಸುವ ಉದ್ಯಮಿ ಗಳಾಗಬೇಕು. ತಮ್ಮ ಜಮೀನುಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್‌ ಉತ್ಪಾದನೆ ಮಾಡಿ ಹಣಗಳಿಸಬಹುದು ಎನ್ನುತ್ತಾರೆ ಚೇತನ್‌.

ವಿದೇಶಿ ವಿಶ್ವವಿದ್ಯಾಲಯ ಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಚೇತನ್‌ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೂ 20ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಇವರಿಗೆ ಭಾರತ ಸರ್ಕಾರ 2009ರಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದೆ.
www.kwattsolutions.com

Write A Comment