ಮಂಗಳೂರು, ಮಾರ್ಚ್. 16 : ಅಲಹದಾಬಾದ್ ನ್ಯಾಯಾಲಯದ ಮುಂದೆ ಪೊಲೀಸರ ಗುಂಡೇಟಿಗೆ ಬಲಿಯಾದ ವಕೀಲ ನಬೀ ಅಹಮದ್ಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಸೋಮವಾರ ಮಂಗಳೂರು ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಲಯದ ಮುಂದೆ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಅವರು ಉತ್ತರಪ್ರದೇಶ ಸರ್ಕಾರ ಬೇಕಾ ಬಿಟ್ಟಿಯಾಗಿ ವರ್ತಿಸುತ್ತಿದ್ದು ಸಾವಿಗೀಡಗಿರುವ ವಕೀಲ ನಬೀ ಅಹಮದ್ ಅವರಿಗೆ ನ್ಯಾಯ ಒದಗಿಸಬೇಕು ಮತ್ತು ಗುಂಡು ಹಾರಿಸಿದ ಪೊಲೀಸ್ ಶೈಲೇಂದ್ರ ಸಿಂಗ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಯಶೋಧರ ಕರ್ಕೇರ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹೆಚ್. ವಿ, ಖಜಾಂಜಿ ಯತೀಶ್ ಮುಂತಾದವರು ಪಾಲ್ಗೊಂಡಿದ್ದರು. ಬೆಂಗಳೂರಲ್ಲೂ ಕಲಾಪ ಬಹಿಷ್ಕಾರ : ಅಲಹದಾಬಾದ್ ನ್ಯಾಯಾಲಯದಲ್ಲಿ ನಡೆದ ಘಟನೆ ಖಂಡಿಸಿ ಬೆಂಗಳೂರಿನಲ್ಲಿಯೂ ಸಿಟಿ ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ವಕೀಲರು ಕಲಾಪ ಬಹಿಷ್ಕರಿಸಿದರು.




