ಕನ್ನಡ ವಾರ್ತೆಗಳು

ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ: ಸಿ.ಎಮ್. ಸಿದ್ದರಾಮಯ್ಯ

Pinterest LinkedIn Tumblr

CM_Sidda_Ramayya_

ಪುತ್ತೂರು, ಮಾ.15: ಕೋಮುಗಲಭೆ ನಡೆ ಸುವವರ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತ ಬೇಕು. ಸಮಾಜದಲ್ಲಿ ಶಾಂತಿ, ಸಾಮರಸ್ಯ ಇರ ಬೇಕು, ಎಲ್ಲ ಮತೀಯರೂ ಒಂದೇ ತಾಯಿಯ ಮಕ್ಕಳಂತೆ ಬಾಳುವಂತಾಗಬೇಕು. ಇದನ್ನು ಹಾಳು ಮಾಡಿ ಕೋಮು ಗಲಭೆೆ ಸೃಷ್ಟಿಸುವವರನ್ನು ನಮ್ಮ ಸರಕಾರ ಸಹಿಸುವುದಿಲ್ಲ, ಅಂತಹ ಸಮಾಜಘಾತುಕರನ್ನು ಹತ್ತಿಕ್ಕಲಾಗುವುದು. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಶನಿವಾರ ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಡಿ ಪುತ್ತೂರಿನಲ್ಲಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಡಿ ನಗರದ ಹೊರವಲಯದ ಬಲ್ನಾಡಿ ನಲ್ಲಿ ನಿರ್ಮಾಣಗೊಂಡಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲಾ ಕಟ್ಟಡವನ್ನು ಉದ್ಘಾಟಿಸಿ, ನಿರೀಕ್ಷಣಾ ಮಂದಿರದ ಹೆಚ್ಚುವರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಕಿಲ್ಲೆ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕರಾವಳಿ ಪ್ರದೇಶದಲ್ಲಿ ಕೆಲವರು ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಾರೆ, ಅಂತಹ ವರಿಗೆ ಅವಕಾಶ ನೀಡಬಾರದು ಎಂದರು.

ಬಜೆಟ್ ಕುರಿತಂತೆ ಮಾತನಾಡಿದ ಮುಖ್ಯಮಂತ್ರಿ, ನಮ್ಮದು ಕೃಷಿಕರ ಪರವಾದ, ಬಡವರ ಪರವಾದ, ಶೋಷಿತರ ಪರವಾದ, ಪ್ರಗತಿಪರ ಬಜೆಟ್ ಆಗಿದೆ ಎಂದರು. ಅಡಿಕೆ ಕೊಳೆರೋಗದ ಪರಿಹಾರಕ್ಕಾಗಿ ದ.ಕ. ಜಿಲ್ಲೆಗೆ 29 ಕೋ.ರೂ. ಬಿಡುಗಡೆ ಮಾಡಿದ್ದೇವೆ. ಬೇರೆ ಯಾರೂ ಇದನ್ನು ಮಾಡಿಲ್ಲ ಎಂದರಲ್ಲದೆ, ರಾಜಕೀಯ ಕಾರಣಗಳಿಗಾಗಿ ಸರಕಾರವನ್ನು ಟೀಕೆ ಮಾಡಬಾರದು, ವಸ್ತುಸ್ಥಿತಿಯನ್ನು ಜನರ ಮುಂದಿಡಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವರ್ಗದ ಜನರ, ವಿಶೇಷವಾಗಿ ದುರ್ಬಲ ವರ್ಗದವರ ಧ್ವನಿಯಾಗಿ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು ಶ್ಲಾಘಿಸಿದರು.

ಸರಕಾರದಿಂದ ಡೀಮ್ಡ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸುವ ಕೆಲಸ ನಡೆದಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರನ್ನು ಗ್ರಾಮೀಣ ಜಿಲ್ಲಾ ಕೇಂದ್ರವಾಗಿಸಬೇಕು, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸಬೇಕು. ಪುತ್ತೂರನ್ನು ಪ್ರವಾಸಿ ಕೇಂದ್ರವನ್ನಾಗಿಸಬೇಕು. ಬಜೆಟ್‌ನಲ್ಲಿ ಡಾ. ಶಿವರಾಮ ಕಾರಂತರ ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಟ್ಟ ಅನುದಾನದಲ್ಲಿ ಪುತ್ತೂರಿನ ಬಾಲವನಕ್ಕೂ ಅನುದಾನ ನೀಡ ಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಕಂದಾಯ ಸಚಿವ ಡಾ.ಎಚ್.ಸಿ ಮಹಾದೇವಪ್ಪ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಶಾಸಕ ಬಿ. ಮೊಯ್ದಿನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪುರಸಭಾ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಪುಡಾ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಮಂಗಳೂರು ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬಂಟ್ವಾಳ ಬುಡಾ ಅಧ್ಯಕ್ಷ ಪಿಯೂಸ್ ರಾಡ್ರಿಗಸ್, ಜಿ.ಪಂ. ಸದಸ್ಯರಾದ ಮಮತಾ ಗಟ್ಟಿ, ಎಂ.ಎಸ್. ಮುಹಮ್ಮದ್, ಪುತ್ತೂರು ಉಪ ವಿಭಾಗಾಧಿಕಾರಿ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸ್ವಾಗತಿಸಿ, ತಹಶೀಲ್ದಾರ್ ಎಂ.ಟಿ. ಕುಳ್ಳೇ ಗೌಡ ವಂದಿಸಿದರು. ನಿವೃತ್ತ ಉಪನ್ಯಾಸಕ ಪ್ರೊ. ಬಿ.ಜೆ. ಸುವರ್ಣ ನಿರೂಪಿಸಿದರು.

‘ಟೀಕೆ ಸರಿಯಲ್ಲ’
ಕಸ್ತೂರಿ ರಂಗನ್ ವರದಿ ಕೇಂದ್ರ ಸರಕಾರ ಜಾರಿಗೊಳಿಸಿದ್ದು, ವರದಿಯ ಬಗ್ಗೆ ಚರ್ಚೆ ನಡೆಸಲು ಸಚಿವ ಸಂಪುಟದ ಉಪ ಸಮಿತಿ ರಚಿಸಿದ್ದೇವೆ. ಈ ಉಪ ಸಮಿತಿಗಳು ವಿಶೇಷ ಗ್ರಾಮಸಭೆಗಳನ್ನು ನಡೆಸಿ ಸಂಗ್ರಹಿಸಿ ವರದಿಯನ್ನು ಕೇಂದ್ರ ಸರಕಾರಕ್ಕೆ ನಾವು ಮಂಡಿಸಲಿದ್ದೇವೆ. ಮತ್ತೇನಿದ್ದರೂ ಕೇಂದ್ರ ಸರಕಾರವೇ ತೀರ್ಮಾನ ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ಕೇವಲ ಟೀಕೆಗಾಗಿ ಟೀಕಿಸು ವುದು ಸರಿಯಲ್ಲ ಎಂದು ಸಿಎಂ ಹೇಳಿದರು.

‘ಎಲ್ಲಾ ಧರ್ಮಗಳ ಪರ ಇದ್ದೇವೆ’
ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು, ಅಹಿಂದ ವರ್ಗದವರನ್ನು ಓಲೈಸುತ್ತಾರೆ. ಅವರು ಹಿಂದೂ ಪರ ಅಲ್ಲ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಎಲ್ಲಾ ಧರ್ಮದವರ ಪರವಾಗಿ ಇದ್ದೇವೆ. ಸಮಾಜದಲ್ಲಿರುವ ಜಾತಿ, ಪಂಗಡ, ಧರ್ಮಗಳ ಸರ್ವರನ್ನೂ ಸಮಾನವಾಗಿ ಕಾಣುವುದು ಸರಕಾರದ ಜವಾಬ್ದಾರಿ. ಹಿಂದೂಗಳ ಗುತ್ತಿಗೆದಾರರು ಎಂಬಂತೆ ಮಾತನಾಡುವವರು ಇದನ್ನು ಅರ್ಥೈಸಿಕೊಳ್ಳಬೇಕು ಎಂದು ಸಿಎಂ ಹೇಳಿದರು.

Write A Comment