ಮಂಗಳೂರು, ಮಾ.15: ಗೋಡಂಬಿ ಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಸಂಶೋಧನೆಯಾಗಬೇಕು. ಆ ಮೂಲಕ ಗೋಡಂಬಿ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ. ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ವಜ್ರ ಮಹೋತ್ಸವದ ಅಂಗವಾಗಿ ಶನಿವಾರ ನಗರದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಸಕ ಜೆ.ಆರ್.ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗೋಡಂಬಿ ಉದ್ಯಮಿಗಳ ಒಕ್ಕೂಟದ ಅಧ್ಯಕ್ಷ ಬೂದೇಶ್ ಅಧ್ಯಕ್ಷತೆ ವಹಿಸಿದ್ದರು.
ಗೇರು ಹಣ್ಣಿನಿಂದ ವೌಲ್ಯವರ್ಧಿತ ಉತ್ಪನ್ನಗಳ ತಯಾರಿ, ಗೋಡಂಬಿಯಲ್ಲಿ ಇರುವ ಪೌಷ್ಟಿಕಾಂಶದ ಬಗ್ಗೆ ಹೆಚ್ಚಿ ನ ಜಾಗೃತಿ ಮೂಡಿಸುವುದು, ಗೇರು ಬೆಳೆಗೆ ಕನಿಷ್ಠ ಖಾತರಿ ದರ ನಿಗದಿ, ಗೇರು ಬೆಳೆಗಾರರ ಸಬಲೀಕರಣ, ಮುಂದಿನ 15 ವರ್ಷಗಳ ಕಾರ್ಯಯೋಜನೆ ಬಗ್ಗೆ ಸಮಾವೇಶದಲ್ಲಿ ಚಿಂತನ ಮಂಥನ ನಡೆಯಲಿದೆ ಎಂದರು.
ಐಎನ್‌ಸಿಯ ಭಾರತೀಯ ರಾಯಭಾರಿ ಪ್ರತಾಪ್ ನಾಯರ್, ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಬಿ.ರಾಹುಲ್ ಕಾಮತ್ ಕಾರ್ಕಳ, ವಜ್ರ ಮಹೋತ್ಸವ ಸಮಿತಿಯ ಕಾರ್ಯದರ್ಶಿಯಾದ ಕೆ.ಪ್ರಮೋದ್ ಕಾಮತ್, ಸಂಚಾ ಲಕರಾದ ಜಿ.ಗಿರಿಧರ ಪ್ರಭು ಹಾಗೂ ಕಲ್ಬಾವಿ ಪ್ರಕಾಶ್ ರಾವ್ ಉಪಸ್ಥಿತರಿದ್ದರು.