ಕನ್ನಡ ವಾರ್ತೆಗಳು

ಮಾನಸಿಕ ಸ್ಥಿರತೆ ಕಳೆದುಕೊಂಡ ಗಿರಿಜಮ್ಮ ಸ್ನೇಹಾಲಯಕ್ಕೆ ಸೇರ್ಪಡೆ.

Pinterest LinkedIn Tumblr

girjamma_clean_photo_1

ಮಂಗಳೂರು,ಮಾರ್ಚ್.14 : ಕಳೆದ 9 ವರ್ಷಗಳಿಂದ ಮಾನಸಿಕ ಸ್ಥಿಮಿತ ಕಳೆದು ಕೊಂಡು, ಕೊಳಕು ಬಟ್ಟೆ, ಕೆದರಿದ ಕೂದಲು, ತಿಂಡಿ, ಊಟ ಯಾರಾದರೂ ಕೊಟ್ಟರೆ ಕ್ಷಣಮಾತ್ರದಲ್ಲಿ ತಿಂದು ಜೀವನ ಸಾಗಿಸುವ ಗಿರಿಜಾಮ್ಮ.. ಈಕೆಯ ಸ್ಥಿತಿ ಕಂಡು ಗೋಳಿತ್ತಡಿಯಲ್ಲಿ ಹೋಟೆಲ್ ನಡೆಸುತ್ತಿ ರುವ ರಮೇಶ್ ಪೂಜಾರಿ ತನ್ನ ಹೋಟೆಲ್‌ನಿಂದ ತಿಂಡಿ ಕೊಟ್ಟು ಕಳುಹಿಸುತ್ತಾರೆ. ಎದುರಿಗೆ ಯಾರಾದರೂ ಸಿಕ್ಕರೆ ಒಮ್ಮೆ ದುರುಗುಟ್ಟಿ ನೋಡುತ್ತಾಳೆ, ಆ ಸಂದರ್ಭಕ್ಕೆ ಏನು ತೋಚುತ್ತದೋ ಹಾಗೇ ಬೈಗುಳ, ಕ್ಷಣಾರ್ಧದಲ್ಲಿ ಸೌಮ್ಯ.

ಬೆಳಗ್ಗೆ ಕೋಳಿ ಕೂಗುವ ಮುನ್ನವೇ ಎಚ್ಚರಗೊಂಡರೆ ತನ್ನ ಮುರುಕಲು ಮನೆ ಎದುರಿನ ಗೇರು ಮರದಡಿಗೆ ಬರುವುದು, ಹೋಗುವುದು….ಹೀಗೆ ಬೆಳಗ್ಗೆಯಿಂದ ಸಂಜೆ ತನಕ ನಡೆಯುತ್ತಲೇ ಇರುತ್ತದೆ.

girjamma_clean_photo_4 girjamma_clean_photo_2 girjamma_clean_photo_3

ಈಕೆಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ. ಪುತ್ರಿಯರಿಬ್ಬರು ಪುತ್ತೂರು ರಾಮಕೃಷ್ಣ ಆಶ್ರಮದಲ್ಲಿ ಓದುತ್ತಿದ್ದಾರೆ. ಮಗ ಆತೂರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ.

ಆನಂದ ಹಾಗೂ ಗಿರಿಜಾಳದ್ದು ಪ್ರೇಮ ವಿವಾಹ. ಸುಮಾರು 16 ವರ್ಷ ಹಿಂದೆ ಪಕ್ಕದ ಹಳೆನೇರೆಂಕಿಯಿಂದ ಈಕೆಯನ್ನು ವಿವಾಹ ಮಾಡಿಕೊಳ್ಳಲಾಗಿತ್ತು. ಆ ಸಂದರ್ಭ ಆಕೆಗಿನ್ನೂ ಸಣ್ಣ ವಯಸ್ಸು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಇಬ್ಬರು ಮಕ್ಕಳಾಗುವ ತನಕ ಸರಿಯಾಗೇ ಇದ್ದಳು. ಮೂರನೇ ಮಗುವಿಗೆ ಜನ್ಮ ನೀಡಿದ ಬಳಿಕ ಈಕೆಯ ಮನಸ್ಥಿತಿ ಬದಲಾಗಿದೆ. ಎಲ್ಲರಂತೆ ಇದ್ದ ಗಿರಿಜಾ ಅರೆ ಹುಚ್ಚಿಯಂತೆ ವರ್ತಿಸಲಾರಂಭಿಸಿದಳು. ಆ ಸಂದರ್ಭ ಅದೆಷ್ಟೋ ಬಾರಿ ಮಳೆ, ಗಾಳಿ ಎನ್ನದೆ ಪುಟ್ಟ ಮಗು ವಿನೊಂದಿಗೆ ಗುಡ್ಡೆ, ಮನೆಯ ಹೊರಗೆ ಕಳೆದಿದ್ದಾಳೆ. ಬಳಿಕ ರಾತ್ರಿ ಹೊತ್ತು ಅಳುತ್ತಾ ಕೂರುವುದು ವಾಡಿಕೆಯಾಯಿತು. ಮನೆಯ ಹೊರಗೆ ಅತ್ತಿಂದಿತ್ತ ಹೋಗುವುದು, ಬರುವುದು ನಡೆಯುತ್ತಲೇ ಬಂತು. ಪತಿ ಆನಂದ ಒಂದಷ್ಟು ಕೂಲಿ ಮಾಡಿ ಗಂಜಿ ಬೇಯಿಸಿ ಹಾಕುತ್ತಾನೆ. ಈಕೆಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಈ ಬದುಕನ್ನೇ ರೂಢಿ ಮಾಡಿಕೊಂಡಿದ್ದಾನೆ.

ಮನೆ ಶಿಥಿಲಗೊಂಡು ವರ್ಷಗಳೇ ಕಳೆದಿವೆ. ಮಾಡು, ಗೋಡೆಗಳು ಕುಸಿದಿವೆ, ಪ್ಲಾಸ್ಟಿಕ್ ಹೊದಿಸಿ ಮಳೆಯಿಂದ ರಕ್ಷಣೆ ಮಾಡಲಾಗುತ್ತಿದೆ. ಮನೆಗೆ ವಿದ್ಯುತ್ ಸಂಪರ್ಕವಿಲ್ಲ, ಪಡಿತರ ಚೀಟಿಯೂ ಇಲ್ಲ. ಇತ್ತೀಚೆಗೆ ಯಾರದೋ ಒತ್ತಾಯಕ್ಕೆ ಆಧಾರ್ ಕಾರ್ಡ್ ಮಾಡಲಾಗಿದೆ, ಬ್ಯಾಂಕ್ ಖಾತೆ ಯಾವುದೂ ಇಲ್ಲ. ಪಂಚಾಯಿತಿಯವರು ಮನೆ ಕೊಡಿಸಲು ಮುಂದಾದರೂ ಅದನ್ನು ಬಳಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

girjamma_clean_photo_5 girjamma_clean_photo_6

ಮಕ್ಕಳು ಈ ಮನೆಯಲ್ಲಿ ಇರುವುದು ಅಪರೂಪ. ಹೆಚ್ಚಿನ ದಿನ ಪಕ್ಕದಲ್ಲಿರುವ ನಾಟಕ ಕಲಾವಿದ ರವಿಯವರ ಮನೆಯಲ್ಲೇ ಇದ್ದು, ಊಟ, ತಿಂಡಿ ಮಾಡಿಕೊಂಡು ಹೋಗುತ್ತಾರೆ. ಮನೆಯಲ್ಲಿ ಬಡತನ ಇದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಬಾರದಂತೆ ನೋಡಿಕೊಳ್ಳಲಾಗಿದೆ. ಈ ಕುಟುಂಬಕ್ಕೆ ಕೆಲವರು ಅಷ್ಟಿಷ್ಟು ಸಹಾಯ ಮಾಡಿ ಹೋಗಿದ್ದಾರೆ. ಆದರೆ ಚಿಕಿತ್ಸೆಗೆ ವ್ಯವಸ್ಥೆ ಆಗಿಲ್ಲ. ಆರೋಗ್ಯ ಇಲಾಖೆಯವರು ಒಮ್ಮೆ ಇಲ್ಲಿಗೆ ಬಂದು ವಿಚಾರಿಸಿ ಇದು ವಾಸಿಯಾಗುವ ಕಾಯಿಲೆ, ಚಿಕಿತ್ಸೆ ಅನಿವಾರ್ಯ ಎಂದು ಹೇಳಿದ್ದಾರೆ.

ಚಿಕಿತ್ಸೆ ಯೋಗ: ಮಾನಸಿಕ ಅಸ್ವಸ್ಥಳಾಗಿ ಬಳಲುತ್ತಿದ್ದ ಗಿರಿಜಾಳನ್ನು ಚಿಕಿತ್ಸೆಗೆ ದಾಖಲಿಸುವಲ್ಲಿ ಕಡಬದ ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ಪ್ರಾಮಾಣಿಕತೆ ಮೆರೆದಿದೆ.

ಗಿರಿಜಾಳ ಅಸಹಾಯಕ ಸ್ಥಿತಿ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಕೊಲ್ಯ ಮಠದ ರಮಾನಂದ ಸ್ವಾಮೀಜಿ, ಗಿರಿಜಾಳ ಮನೆಗೆ ಭೇಟಿ ನೀಡಿ ಅಕ್ಕಿ, ಪಡಿತರ ಹಾಗೂ ನಗದು ನೀಡಿದ್ದರು. ಕೆಲವರು ಕೈಲಾದ ಸಹಾಯ ಮಾಡಿ ಹೋಗಿದ್ದರು. ಆದರೂ ಪರಿಸ್ಥಿತಿ ಬದಲಾಗಿರಲಿಲ್ಲ. ಈ ಮಧ್ಯೆ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವಿ ಮಾಡಲಾಗಿತ್ತು, ಗ್ರಾಮ ಸಭೆಯಲ್ಲೂ ವಿಷಯ ಪ್ರಸ್ತಾಪವಾಗಿತ್ತು. ಸಂಬಂಧಪಟ್ಟ ಇಲಾಖೆಗಳಿಗೂ ಮನವಿ ಮಾಡಲಾಗಿತ್ತು. ಯಾವುದೂ ಪ್ರಯೋಜನಕ್ಕೆ ಬಂದಿರಲಿಲ್ಲ.

girjamma_clean_photo_8 girjamma_clean_photo_7

ಈ ವಿಚಾರವನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕೇಶವ ಗಾಂಧಿಪೇಟೆ ಕಡಬದ ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆಯ ಪ್ರಮುಖರಿಗೆ ಮನವರಿಕೆ ಮಾಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಂಘಟನೆಯ ಅಧ್ಯಕ್ಷ ಕೆ. ಸೀತಾರಾಮ ಗೌಡ ಹಾಗೂ ಇತರ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಿರಿಜಾಳಿಗೆ ಒಂದು ನೆಲೆ ಕೊಡುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಸಂಘಟನೆಯವರು ಮಂಗಳೂರಿನ ತೊಕ್ಕೊಟ್ಟು ಸ್ನೇಹಾಲಯ ಕೇಂದ್ರದವರನ್ನು ಸಂಪರ್ಕಿಸಿ ಅವರನ್ನು ಗೋಳಿತ್ತಡಿಯ ಗಿರಿಜಾಳ ವಾಸಸ್ಥಳಕ್ಕೆ ಕರೆಸಿದರು.

ಕದಂಬ ಸಾಮಾಜಿಕ ಹಿತರಕ್ಷಣೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸ್ನೇಹಾಲಯದ ಪ್ರಮುಖರು ಗಿರಿಜಾಳನ್ನು ಸ್ನಾನ ಮಾಡಿಸಿ, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಸ್ನೇಹಾಲಯಕ್ಕೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮಾತ್ರವಲ್ಲದೆ ರಾಮಕುಂಜ ಗ್ರಾಪಂಗೆ ತೆರಳಿ ಗಿರಿಜಾಳಿಗೆ ಸೂರು ಕಲ್ಪಿಸಬೇಕೆಂಬ ಮನವಿ ಮಾಡಿದ್ದಾರೆ. ಇದಕ್ಕೆ ಪಂಚಾಯಿತಿ ಕೂಡ ಸ್ಪಂದಿಸಿದೆ.

Write A Comment