ಉಳ್ಳಾಲ,ಮಾರ್ಚ್.14 : ತೊಕ್ಕೊಟ್ಟು-ಮೆಲ್ಕಾರ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳನ್ನು ಶುಕ್ರವಾರ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತು. 12 ದಿನಗಳ ಹಿಂದೆ ರಸ್ತೆಬದಿಯಲ್ಲೇ ಇದ್ದ 8 ಗೂಡಂಗಡಿಗಳಿಗೆ ಇಲಾಖೆ ನೋಟೀಸು ಜಾರಿಗೊಳಿಸಿ ತೆರವು ಕಾರ್ಯಾಚರಣೆ ನಡೆಯಿತು. ಮೂರು ಅಂಗವಿಕಲರ ಅಂಗಡಿ ಸೇರಿದಂತೆ ಒಟ್ಟು 8 ಅಂಗಡಿಗಳನ್ನು ನೆಲಸಮಗೊಳಿಸಲಾಯಿತು. ಅಗಲೀಕರಣ ಸಂದರ್ಭ ಇಲಾಖೆಯವರು ಬಡವರಿಗೊಂದು ನೀತಿ, ಶ್ರೀಮಂತರಿಗೊಂದು ನೀತಿ ಎಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಬದಲಿ ವ್ಯವಸ್ಥೆ ಮಾಡದೆ ಏಕಾಏಕಿ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿರುವುದರಿಂದ ಹೊಟ್ಟೆಪಾಡಿಗೆ ತೊಂದರೆಯಾಗಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಅಂಗಡಿ ಮಾಲೀಕರು ಆರೋಪಿಸಿದರು.
ಕಳೆದ 22 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದೊರೆತ ಅಂಗಡಿಯಲ್ಲಿ ಪತ್ರಿಕಾ ಏಜೆಂಟರಾಗಿ ಅಂಗಡಿ ನಿರ್ವಹಿಸುತ್ತಿದ್ದ ಅಂಗವಿಕಲ ಮಹಿಳೆ ಪೂರ್ಣಿಮಾ ಪೈ ಅವರು ತಮ್ಮ ಅಂಗಡಿಯನ್ನು ಕಳೆದುಕೊಂಡಿದ್ದಾರೆ. 50ರ ಹರೆಯದ ಪೂರ್ಣಿಮಾ ಅವರು ಅಂಗವಿಕಲೆಯಾಗಿದ್ದು, ಮನೆಯವರು ದೂರ ಮಾಡಿದ ಬಳಿಕ ಹಿರಿಯರೊಬ್ಬರ ಸಹಾಯದಿಂದ, ಇಲಾಖೆ ಸಹಕಾರದಿಂದ ಆಸ್ಪತ್ರೆಯೆದುರು ಅಂಗಡಿ ನಿರ್ಮಿಸಿದರು. ಬಗಂಬಿಲ ಸಮೀಪ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡಿಕೊಂಡು ಪತ್ರಿಕಾ ಅಂಗಡಿ ವ್ಯಾಪಾರದಲ್ಲಿ ಬಂದ ಆದಾಯದಲ್ಲೇ ಜೀವನ ನಿರ್ವಹಿಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಅವರ ಅಂಗಡಿಯನ್ನು ತೆರವುಗೊಳಿಸಲಾಗಿದೆ.
ಅಂಗವಿಕಲೆ ಪೂರ್ಣಿಮಾ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಅರ್ಹತಾ ಪತ್ರ, ಪಂಚಾಯಿತ್ ಅನುಮತಿ ಹಾಗೂ ಎಲ್ಲಾ ದಾಖಲೆಗಳು ಇರುವುದರಿಂದ ಬೇರೆ ಸ್ಥಳದಲ್ಲಿ ಎರಡು ದಿನಗಳಲ್ಲಿ ಅಂಗಡಿ ನಿರ್ಮಿಸುವ ವಿಶ್ವಾಸವನ್ನು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು ಹಾಗೂ ಪಂಚಾಯಿತ್ ನೀಡಿದೆ.
ಕಾರ್ಯಾಚರಣೆ ಸಂದರ್ಭ ಉಳ್ಳಾಲ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.