ಕರ್ನಾಟಕ

ತಮಿಳುನಾಡು ತಗಾದೆ ನಿಲ್ಲಿಸದಿದ್ದರೆ ಸಂಘರ್ಷ : ಹೆಚ್ಡಿಕೆ

Pinterest LinkedIn Tumblr

10hdk

ಬೆಂಗಳೂರು, ಮಾ.11: ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಯೋಜನೆಗೆ ಅಡ್ಡಿ ಪಡಿಸುವುದನ್ನು ತಮಿಳುನಾಡು ನಿಲ್ಲಿಸದೇ ಇದ್ದರೆ ಎರಡು ರಾಜ್ಯಗಳ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಈ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಹೊಗೇನಕಲ್ ಯೋಜನೆಯ ಮೂಲಕ ನೀರು ಸರಬರಾಜು ಮಾಡಲು ಕನ್ನಡಿಗರು ಅವಕಾಶ ಮಾಡಿಕೊಟ್ಟಿದ್ದಾರೆ.

ಆದರೆ, ಈಗ ಹೊಗೇನಕಲ್ ಯೋಜನೆಗೆ ತಮಿಳುನಾಡಿ ಅಡ್ಡಿ ಪಡಿಸುತ್ತಿದೆ. ಗಡಿ ಭಾಗದಲ್ಲಿ ಜನರು ಜಮಾವಣೆಗೊಂಡು ದಾಳಿ ಮಾಡುವ ಮನೋಭಾವ ಪ್ರದರ್ಶಿಸುತ್ತಿದ್ದಾರೆ. ಇದು ಸರಿಯಲ್ಲ. ಕರ್ನಾಟಕದ ಜನ ತಾಳ್ಮೆಯಿಂದಿದ್ದಾರೆ. ತಾಳ್ಮೆ ಕಳೆದುಕೊಂಡರೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾಗುತ್ತದೆ. ತಮಿಳುನಾಡು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅನಗತ್ಯವಾದ ವಿರೋಧವನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.

ಮೇಕೆದಾಟು ಯೋಜನೆಗೆ ಯಾರದೇ ಅಪ್ಪಣೆ ಬೇಕಿಲ್ಲ. ಕರ್ನಾಟಕ ಸರ್ಕಾರ ಪ್ರತಿ ವರ್ಷ 20ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿ ಬಯಲು ಪ್ರದೇಶದ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ವಿಶ್ವಬ್ಯಾಂಕ್‌ನಿಂದ 50ಸಾವಿರ ಕೋಟಿ ಸಾಲ ಪಡೆದರೂ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಈಗಾಗಲೇ ಜನಪ್ರಿಯ ಯೋಜನೆಗಳಿಗಾಗಿ 30ಸಾವಿರ ಕೋಟಿ ಸಾಲ ಮಾಡಲಾಗಿದೆ. ಅದೇ ರೀತಿ ನೀರಾವರಿ ಯೋಜನೆಗಳಿಗೆ ಸಾಲ ಮಾಡಿಯಾದರೂ ಬಯಲು ಸೀಮೆಯ ಜನರಿಗೆ ನೀರು ಕೊಡಿ ಎಂದು ಅವರು ಒತ್ತಾಯಿಸಿದರು. ಇದೇ ತಿಂಗಳ 14ರಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡುವಂತೆ ಅವರು ಮನವಿ ಮಾಡಿದರು.

Write A Comment