ಕರ್ನಾಟಕ

ಸಮತೋಲನ ಬಜೆಟ್‌ಗೆ ಆದ್ಯತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siddaramaiah

ಬೆಂಗಳೂರು, ಮಾ.11: ಅಗ್ಗದ ಜನಪ್ರಿಯ ಯೋಜನೆಗಳಿಗೆ ಮಣೆ ಹಾಕದೆ ಸಮತೋಲನ ಬಜೆಟ್ ಮಂಡಿಸಲು ಉದ್ದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಒಂದೂವರೆ ಲಕ್ಷ ಕೋಟಿ ರೂ.ವರೆಗೆ ಬಜೆಟ್ ಗಾತ್ರ ವಿಸ್ತರಿಸುವ ಸಾಧ್ಯತೆ ಇದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 10ನೇ ಬಜೆಟ್ ಮಂಡನೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು, 2015-16ನೇ ಸಾಲಿನ ಬಜೆಟ್ ಪೂರ್ವಸಿದ್ಧತೆಗಳು ನಿರಂತರವಾಗಿ ನಡೆದು ಇಂದು ಅಂತಿಮ ರೂಪ ಪಡೆಯಿತು. ನಾಳೆ ಇದರ ಕರಡು ಪರಿಶೀಲನೆ ನಡೆಸಲಿದ್ದಾರೆ. ಕಳೆದ ಬಾರಿ 1,38,000 ಕೋಟಿ ರೂ.ಗಳ ಬಜೆಟ್ ಮಂಡನೆಯಾಗಿತ್ತು.
ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಅನುದಾನ ಕಡಿತವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಸ್ಥಿತಿಗೆ ಒತ್ತು ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.ತೆರಿಗೆ ಹೊರೆ ಇಲ್ಲದಂತೆ ಬಜೆಟ್ ಮಂಡಿಸಲು ನಿರ್ಧರಿಸಲಾಗಿದ್ದು, ವಾರ್ಷಿಕ ಶೇ.10ರಷ್ಟು ಏರಿಕೆಯಾಗುವ ಬಜೆಟ್ ಗಾತ್ರ ಅನುಸರಿಸಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ.

ಶಾಲಾ ಮಕ್ಕಳಿಗೆ ಸೈಕಲ್, 1ರೂ.ಗೆ ಒಂದು ಕೆಜಿ ಅಕ್ಕಿ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ರಾಜ್ಯಸರ್ಕಾರದ ಎಲ್ಲಾ ಭಾಗ್ಯ ಯೋಜನೆಗಳು ಯಥಾ ಸ್ಥಿತಿ ಮುಂದುವರೆಯಲಿದ್ದು, ಬ್ಯಾಂಕ್ ದರ ಕಡಿತಗೊಳಿಸಲು ವಾಣಿಜ್ಯ ಸಂಸ್ಥೆಗಳು
ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಶೇ.1ರವರೆಗೆ ವ್ಯಾಟ್ ದರ ಕಡಿತಗೊಳ್ಳುವ ಸಾಧ್ಯತೆ ಇದೆ. ದಲಿತರು, ಮಹಿಳೆಯರು ಹಾಗೂ ಬಡವರಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಹೆಚ್ಚು ಹೊರೆಯಾಗದಂತೆ ಪರೋಕ್ಷ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಎಸ್ಸಿ-ಎಸ್ಟಿ ಜನಾಂಗಕ್ಕೆ ಭೂ ಒಡೆತನ ಯೋಜನೆಗೆ ಹೆಚ್ಚು ಅನುದಾನ ಒದಗಿಸಲಾಗುತ್ತಿದ್ದು, ಎಸ್ಸಿ-ಎಸ್ಟಿ ಹಾಗೂ ಒಬಿಸಿ ಜನಾಂಗಕ್ಕೆ ಜಾನುವಾರು ನೀಡುವ ಯೋಜನೆಗೆ ಗ್ರಾಮ ಪಂಚಾಯ್ತಿಗಳಿಗೆ ಒತ್ತು ನೀಡಲಾಗುವುದು. ಪದೇ ಪದೇ ಬರಕ್ಕೆ ತುತ್ತಾಗುತ್ತಿರುವ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗೆ ಉತ್ತೇಜನ ನೀಡುವ ಮೂಲಕ ಅಭಿವೃದ್ಧಿ ಸಾಧಿಸಲು ಚಿಂತನೆ ನಡೆದಿದೆ. ಉಳಿದಂತೆ ರಸಗೊಬ್ಬರ ಹನಿ ನೀರಾವರಿಗೆ ದೊರೆಯುವ ಸೌಲಭ್ಯಗಳು ಮುಂದುವರೆಯಲಿವೆ.

ರೈತರ ಉಪಯುಕ್ತ ಬಜೆಟ್ ಮಂಡನೆಗೆ ಕೋಡಿಹಳ್ಳಿ ಚಂದ್ರಶೇಖರ ಆಗ್ರಹ
ಬೆಂಗಳೂರು, ಮಾ.11-ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಿಸಲಿ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ರೈತ ಮತ್ತು ಬಜೆಟ್ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಆದಾಯ ಖಾತ್ರಿ ಆಯೋಗ ರಚಿಸುವುದಾಗಿ ಹೇಳಿ ನಂತರ ಕೃಷಿ ಬೆಲೆ ಆಯೋಗ ರಚಿಸಿ ಸುಮ್ಮನಾಯಿತು ಎಂದು ಆರೋಪಿಸಿದ ಅವರು, ಇಲ್ಲಿ ಕೇವಲ ಉತ್ಪಾದಕತೆಗೆ ಬೆಲೆ ನೀಡಲಾಗುತ್ತಿದೆ ಆದರೆ ಉತ್ಪಾದನೆ ಮಾಡುವ ರೈತನಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಾರೆ ಭಾರತದ ಜನಸಂಖ್ಯೆಯಲ್ಲಿ ಶೇ.65ರಷ್ಟು ಮಂದಿ ರೈತರಿದ್ದಾರೆ. ಅವರ ಅಭಿವೃದ್ಧಿಯನ್ನು ಕಡೆಗಣಿಸಿ ಕೇವಲ ಕಾರ್ಪೊರೇಟ್ ಕಂಪನಿಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಈವರೆಗೂ ಸರ್ಕಾರದಲ್ಲಿ ರೈತನ ಆದಾಯ ನಷ್ಟದ ಬಗ್ಗೆ ಮಾಹಿತಿ ಇಲ್ಲದಿರುವುದು ವಿಷಾದಕರ ಎಂದ ಅವರು, ಕೃಷಿ ವಿವಿಗಳು ಈ ಬಗ್ಗೆ ಅಧ್ಯಯನ ಕೈಗೊಳ್ಳಬೇಕಿದೆ ಎಂದು ವೇದಿಕೆ ಮೇಲಿದ್ದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಶಿವಣ್ಣ ಅವರಲ್ಲಿ ಮನವಿ ಮಾಡಿದರು.

ಕೈಗಾರಿಕೆಗಳ ಅಭಿವೃದ್ಧಿಗಾಗಿ 20 ಲಕ್ಷ ಕೋಟಿ ರೂ ನೀಡಲಾಗುತ್ತಿದೆ. ಆದರೆ ರೈತ ವರ್ಗಕ್ಕೆ ಎಷ್ಟು ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಕೇವಲ ಆಹಾರ ಭದ್ರತೆಗಾಗಿ ಬಂಡವಾಳ ಹೂಡಲಾಗುತ್ತಿದೆ. ಕೃಷಿಕರ ಅಭಿವೃದ್ಧಿಗಲ್ಲ ಎಂದು ದೂರಿದರು. ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆ ತಂದು ರೈತರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹರಣ ಮಾಡಲು ಮುಂದಾಗಿತ್ತು. ಇದೊಂದು ಸರ್ವಾಧಿಕಾರಿ ಧೋರಣೆ ಎಂದು ಜರಿದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಶಿವಣ್ಣ ಮಾತನಾಡಿ, ಕೃಷಿ ಉತ್ಪಾದನೆಗೆ ಒತ್ತು ನೀಡುವ ಸರ್ಕಾರ ಕೃಷಿಕರ ಆದಾಯ ನಷ್ಟವನ್ನು ದಾಖಲಿಸುವ ಕಾರ್ಯ ಮಾಡುತ್ತಿಲ್ಲ, ಈ ಬಗ್ಗೆ ಚರ್ಚೆ ಅಗತ್ಯ ಎಂದು ಹೇಳಿದರು. ಅರ್ಥಶಾಸ್ತ್ರಜ್ಞ ಅಬ್ದುಲ್ ಅಜೀಂ ಮಾತನಾಡಿ, ಇಂದು ರೈತರು ಕೃಷಿ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗದೆ ಈ ಕ್ಷ್ರೇತ್ರದಿಂದಲೇ ದೂರವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಆದಾಯ ಖಾತ್ರಿ ಆಯೋಗ ರಚನೆಯ ಅಗತ್ಯವಿದೆ ಎಂದರು.

ಸರ್ಕಾರ ರೈತನ ಬಗ್ಗೆ ಹಿತಾಸಕ್ತಿ ಹೊಂದಿದ್ದಲ್ಲಿ ಕೃಷಿ ಬೆಲೆ ಆಯೋಗದಿಂದಲೇ ಇಷ್ಟೆಲ್ಲಾ ಕೆಲಸ ಮಾಡಬಹುದಿತ್ತು. ಆದರೆ ಅದರ ಕಾರ್ಯ ವ್ಯಾಪ್ತಿ ಬೇರೆ ಇರುವುದರಿಂದ ಪ್ರತ್ಯೇಕ ಆದಾಯ ಖಾತ್ರಿ ಆಯೋಗ ರಚಿಸಲಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೃಷಿ ಕಾರ್ಯಕರ್ತೆ ಕವಿತಕುರಗಂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Write A Comment